ಕುಶಾಲನಗರ, ಆ. 29: ಕುಶಾಲನಗರ ಸುತ್ತಮುತ್ತ ನದಿ ತಟದಲ್ಲಿರುವ ಸ್ಮಶಾನಗಳಲ್ಲಿ ನದಿ ನೀರು ನುಗ್ಗಿದ ಹಿನ್ನೆಲೆಯಲ್ಲಿ ಅಂತಿಮ ಸಂಸ್ಕಾರ ನಡೆಸಲು ಎಲ್ಲೆಡೆ ಅಡ್ಡಿಯುಂಟಾಗುತ್ತಿದೆ. ಸಮೀಪದ ಕಾವೇರಿ ನದಿ ಸೇತುವೆ ಬಳಿಯ ಕ್ರೈಸ್ತ ಸಮುದಾಯದ ಚಿರಶಾಂತಿ ಧಾಮದಲ್ಲಿ ಅಂತ್ಯಕ್ರಿಯೆಗೆ ತೊಡಕುಂಟಾದ ದೃಶ್ಯ ಗೋಚರಿಸಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಸಮೀಪದ ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ಸ್ಮಶಾನ ಸಂಪೂರ್ಣವಾಗಿ ಮುಳುಗಡೆ ಯಾಗಿತ್ತು. ಮಳೆ ಹಾಗೂ ಪ್ರವಾಹ ಇಳಿಮುಖಗೊಂಡಿದ್ದರೂ ಕೂಡ ಈ ಪ್ರದೇಶದಲ್ಲಿ ನೀರು ಮಡುಗಟ್ಟಿ ನಿಂತಿರುವ ಹಿನ್ನೆಲೆಯಲ್ಲಿ ಶವಸಂಸ್ಕಾರಕ್ಕೆ ಅಡ್ಡಿಯುಂಟಾಗಿದೆ.
ಸ್ಮಶಾನ ಆವರಣದಲ್ಲಿ ಶವ ಸಂಸ್ಕಾರಕ್ಕೆ ಗುಂಡಿ ತೋಡುವ ಸಂದರ್ಭ ಜಲ ಉಕ್ಕಿ ಬರುತ್ತಿದ್ದು, ಅಂತ್ಯಕ್ರಿಯೆ ಮಾಡಲು ಪರದಾಡುವಂತಾಗಿದೆ.
ಕಾರ್ಮಿಕರು ಪ್ಲಾಸ್ಟಿಕ್ ಡಬ್ಬಗಳ ಮೂಲಕ ಗುಂಡಿಯಲ್ಲಿ ಶೇಖರಣೆ ಗೊಳ್ಳುತ್ತಿದ್ದ ನೀರನ್ನು ಹೊರ ಚೆಲ್ಲಿದರೂ ನೀರು ಖಾಲಿಯಾಗದ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಕ್ಕೆಂದು ಕುಶಾಲನಗರದಲ್ಲಿ ನಿಯೋಜನೆ ಯಾಗಿರುವ ಮೈಸೂರು ಮಹಾನಗರ ಪಾಲಿಕೆಯ ಸಕ್ಕಿಂಗ್ ಯಂತ್ರವನ್ನು ಬರಮಾಡಿಕೊಂಡು ನೀರನ್ನು ಪೈಪ್ ಮೂಲಕ ಹೊರ ತೆಗೆದು ಅಂತ್ಯಕ್ರಿಯೆ ನೆರವೇರಿಸಲಾಯಿತು.