ಮಡಿಕೇರಿ, ಆ. 29: ಪ್ರಾಕೃತಿಕ ವಿಕೋಪ ಸಂದರ್ಭ ಸಾಕಿ, ಸಲಹಿದ ಜಾನುವಾರುಗಳನ್ನು ರಕ್ಷಿಸಲು ಮುಂದಾಗಿ ಮಣ್ಣಿನಡಿ ಹುದುಗಿ ಹೋಗಿದ್ದ ಕಾಟಕೇರಿ ನಿವಾಸಿ ಗಿಲ್ಬರ್ಟ್ ಮೆಂಡೋಜಾ (54) ಅವರ ಮೃತದೇಹ ಇಂದು ಪತ್ತೆಯಾಗಿದೆ.ಕಳೆದ ತಾ. 16 ರಂದು ಸಂಭವಿಸಿದ ದುರಂತದಲ್ಲಿ ಗಿಲ್ಬರ್ಟ್ ಮೆಂಡೋಜಾ ಅವರು ಮಣ್ಣಿನಡಿ ಸಿಲುಕಿದ್ದರು. ತಾ. 25 ರಿಂದ ಉತ್ತರ ಪ್ರದೇಶದಿಂದ ಆಗಮಿಸಿರುವ ಎನ್‍ಡಿಆರ್‍ಎಫ್ ತಂಡ ಕಾರ್ಯಾಚರಣೆ ಆರಂಭಿಸಿತ್ತಾದರೂ ಇದುವರೆಗೆ ಮೃತದೇಹ ಪತ್ತೆಯಾಗಿರಲಿಲ್ಲ; ನಂತರದಲ್ಲಿ ಎನ್‍ಡಿಆರ್‍ಎಫ್‍ನೊಂದಿಗೆ ಗರುಡಾ, ಶ್ವಾನದಳ, ಕುಟ್ಟ ವೃತ್ತ ನಿರೀಕ್ಷಕರು ಹಾಗೂ ಸ್ಥಳೀಯ ಪೊಲೀಸರು ಸೇರಿದಂತೆ 25ಕ್ಕೂ ಅಧಿಕ ಮಂದಿ ಕಾರ್ಯಾಚರಣೆ ನಡೆಸಿ ಇಂದು ಮೃತದೇಹ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.ತಾ. 16 ರಂದು ದುರ್ಘಟನೆ ಸಂಭವಿಸಿದ ಸಂದರ್ಭ ಗಿಲ್ಬರ್ಟ್ ಅವರ ಪುತ್ರ ಅಕ್ಷಯ್ ತಮ್ಮ ಚಿಕ್ಕಪ್ಪನ ಕುಟುಂಬದವರು ಕೆಸರಿನಲ್ಲಿ ಸಿಲುಕಿಕೊಂಡಿರುವವನ್ನು ರಕ್ಷಣೆ ಮಾಡಲು ಧಾವಿಸಿದ್ದಾರೆ. ಈ ಸಂದರ್ಭ ಗಿಲ್ಬರ್ಟ್ ತಮ್ಮ ಜಾನುವಾರುಗಳನ್ನು ರಕ್ಷಿಸಲು (ಮೊದಲ ಪುಟದಿಂದ) ಮುಂದಾಗಿದ್ದು, ಈ ಸಂದರ್ಭದಲ್ಲಿ ಕುಸಿದ ಮಣ್ಣಿನಡಿ ಸಿಲುಕಿದ್ದಾರೆ. ದಿಕ್ಕು ತೋಚದ ಕುಟುಂಬ ಎಲ್ಲೆಲ್ಲೂ ಹುಡುಕಾಡಿದರೂ ಸಿಗದೇ ಕಂಗಾಲಾಗಿದ್ದರು.ಇದೀಗ ಮೃತದೇಹ ಪತ್ತೆಯಾಗಿದ್ದು, ವಾರಸುದಾರರಿಗೆ ಒಪ್ಪಿಸಲಾಗಿದೆ. ತಾ. 30 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ಮಡಿಕೇರಿಯ ಸಂತ ಮೈಕಲರ ಚರ್ಚ್‍ನಲ್ಲಿ ವಿಧಿ - ವಿಧಾನಗಳ ಬಳಿಕ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.