ಮಡಿಕೇರಿ, ಆ. 29: ಈ ಬಾರಿ ಪ್ರಕೃತಿ ಮಾತೆಯ ಮುನಿಸು ಎಲ್ಲಾ ಜೀವಚರಗಳನ್ನು ಬೆಚ್ಚಿ ಬೀಳಿಸಿದೆ. ಸರ್ಕಾರ ಮತ್ತು ಸರ್ಕಾರೇತರರೆಲ್ಲಾ ಕೈ ಜೋಡಿಸಿ ತೊಂದರೆಗೊಳಗಾದವರನ್ನೆಲ್ಲಾ ಮೊದಲ ಹಂತದ ಪರಿಹಾರವಾಗಿ ಸುರಕ್ಷಿತ ಕೇಂದ್ರಗಳಿಗೆ ತಾತ್ಕಾಲಿಕವಾಗಿ ವರ್ಗಾಯಿಸಲಾಗಿದೆ.

ಮುಂದಿನ ದಿನಗಳಲ್ಲಿ ಪ್ರವಾಹದ ಪರಿಣಾಮಗಳು ವಿವಿಧ ರೀತಿಯಲ್ಲಿ ತೆರೆದುಕೊಳ್ಳುವ ಸಂಭವವಿರುತ್ತದೆ. ಮುಖ್ಯವಾಗಿ ಸಾರ್ವಜನಿಕ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು ಅನೇಕ.

ಪ್ರವಾಹ ನಂತರದ ಈ ಕಾಲಾವಧಿಯಲ್ಲಿ ಮುಖ್ಯವಾಗಿ ಗಾಳಿ, ನೀರು, ಆಹಾರ ಮತ್ತು ಕೀಟಗಳಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಂಭವವಿದೆ. ಕಲುಷಿತ ಗಾಳಿಯಿಂದ ಶೀತ, ಗಂಟಲುಬೇನೆ, ವಿಷಮ ಶೀತ ಜ್ವರ, ಶ್ವಾಸಕೋಶ ಸೋಂಕು (ನ್ಯುಮೋನಿಯಾ, ಕ್ಷಯ) ಇತ್ಯಾದಿ ರೋಗಗಳು ಬರುತ್ತವೆ.

ಮಲೀನ ನೀರಿನಿಂದಾಗಿ ವಾಂತಿ-ಭೇಧಿ, ಟೈಫಾಯ್ಡ್, ಕಾಲರಾ, ಕಾಮಲೆ, ಇಲಿಜ್ವರ (ಲೆಪ್ಟೋ ಸ್ಪೈರೋಸಿಸ್), ಕಲುಷಿತ ಆಹಾರದಿಂದಾಗಿ ಆಹಾರ ವಿಷಪೂರಿತವಾಗಿ, ಟೈಫಾಯ್ಡ್, ವಾಂತಿ ಬೇಧಿ, ಕಾಲರಾ ಹಾಗೂ ಕೀಟಜನ್ಯ ರೋಗಗಳಿಂದ ಮಲೇರಿಯಾ, ಢೆಂಗಿ, ಚಿಕನ್‍ಗುನ್ಯಾ, ಫೈಲೇರಿಯಾ ಮತ್ತಿತರ ರೋಗಗಳು ಬರುತ್ತವೆ.

ಹೆಚ್ಚಿನಾಂಶ ರೋಗಗಳು ನೀರು, ಆಹಾರಗಳ ನೈರ್ಮಲ್ಯದ ಕೊರತೆಯಿಂದಲೇ ಆಗುವಂತಹವು, ನಾವು ಸೇವಿಸುವ ಆಹಾರ ಕುಡಿಯುವ ನೀರು ಮಲೀನವಾಗಿದ್ದಲ್ಲಿ, ವೈಯಕ್ತಿಕ ಮತ್ತು ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರದೇ ಇದ್ದಲ್ಲಿ ರೋಗಗಳು ಬರುವ ಸಾದ್ಯತೆ ಹೆಚ್ಚಾಗಿರುತ್ತದೆ.

ಕಲುಷಿತ ಗಾಳಿ, ನೀರು ಮತ್ತು ಆಹಾರದಿಂದ ಬರುವ ರೋಗ ತಡೆಗಟ್ಟುವ ವಿಧಾನ

ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವದು: ಊಟಕ್ಕೆ ಮೊದಲು, ಶೌಚದ ನಂತರ, ಅಡುಗೆ ತಯಾರಿಸುವ ಮೊದಲು ಕೈಗಳನ್ನು ಸಾಬೂನು ಮತ್ತು ಶುದ್ಧ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು, ಬೆಳೆದ ಉಗುರುಗಳನ್ನು ಕತ್ತರಿಸಿಕೊಳ್ಳುತ್ತಿರಬೇಕು, ಕುದಿಸಿ ಆರಿಸಿದ ನೀರನ್ನು ಶುಭ್ರ ಪಾತ್ರೆಗಳಲ್ಲಿ ಶೇಖರಿಸಿಟ್ಟುಕೊಂಡು ಕುಡಿಯಲು ಬಳಸುವದು, ಆಹಾರವನ್ನು ಚೆನ್ನಾಗಿ ಬೇಯಿಸಿ ಬಿಸಿ-ಬಿಸಿಯಾಗಿದ್ದಾಗಲೇ ಸೇವಿಸಬೇಕು, ಶೌಚಾಲಯದಲ್ಲಿಯೇ ಮಲ-ಮೂತ್ರ ವಿಸರ್ಜನೆ ಮಾಡಬೇಕು.

ನಾವು ಬಳಸುವ ಶೌಚಾಲಯವನ್ನು ಕಾಲಕಾಲಕ್ಕೆ ರಾಸಾಯನಿಕಗಳಿಂದ ಸ್ವಚ್ಛಗೊಳಿಸುತ್ತಿರಬೇಕು, ಶೌಚಾಲಯಕ್ಕೆ ಹೋಗುವಾಗ ಪಾದರಕ್ಷೆಗಳನ್ನು ಹಾಕಿಕೊಳ್ಳಬೇಕು, ಕೆಮ್ಮುವಾಗ, ಸೀನುವಾಗ ಮೂಗು ಬಾಯಿಯನ್ನು ಶುಭ್ರ ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು, ವಾಂತಿ-ಬೇದಿಯಾದ ತಕ್ಷಣ ಪುನರ್ಜಲೀಕರಣ ದ್ರಾವಣ ಕುಡಿಸುವದು ಮತ್ತು ವೈದ್ಯರಿಗೆ ತೋರಿಸುವದು, ತಯಾರಿಸುವ ಆಹಾರವನ್ನು ಇಲಿ, ಹೆಗ್ಗಣ ಮುಂತಾದವುಗಳು ಕೆಡಿಸದಂತೆ ಸಂರಕ್ಷಿಸುವದು, ಕಚ್ಚಾ ಮತ್ತು ಬೇಯಿಸಿದ ಆಹಾರ ಪದಾರ್ಥಗಳನ್ನು ಬೇರೆ ಬೇರೆ ಜಾಗಗಳಲ್ಲಿ ಶೇಖರಿಸಿಡಬೇಕು, ಕೊಳೆತ ತರಕಾರಿ ಮತ್ತು ಸೊಪ್ಪುಗಳನ್ನು ಬೇರ್ಪಡಿಸಬೇಕು, ತರಕಾರಿ, ಸೊಪ್ಪುಗಳನ್ನು, ಮೀನು ಮಾಂಸವನ್ನು ಬೇಯಿಸುವ ಮುಂಚೆ ಶುದ್ಧ ನೀರಿನಿಂದ ಚೆನ್ನಾಗಿ ತೊಳೆದು ಬಳಸಬೇಕು, ಚಿಕ್ಕ ಮಕ್ಕಳಿಗೆ, ಗರ್ಭಿಣಿ ಬಾಣಂತಿಯರಿಗೆ ಮತ್ತು ವೃದ್ಧರಿಗೆ ಆಹಾರದ ವಿಷಯದಲ್ಲಿ ವಿಶೇಷ ಮುತುವರ್ಜಿವಹಿಸಬೇಕು, ಪ್ರವಾಹ ಸಂದರ್ಭದಲ್ಲಿ ಒಳನುಗ್ಗಿದ ನೀರು ಕುಡಿಯುವ ನೀರಿನ ಮೂಲಗಳೊಡನೆ ಮಿಶ್ರಣವಾಗಿದ್ದರೆ ತುರ್ತು ಶುದ್ಧಿಕರಣಗೊಳಿಸಲು ಬ್ಲೀಚಿಂಗ್ ಪೌಡರ್, ಹ್ಯಾಲೋಜಿನ್ ಮಾತ್ರೆಗಳ ಸಹಾಯದಿಂದ ಶುದ್ಧಗೊಳಿಸಿ ನಂತರ ಕುದಿಸಿ ಆರಿಸಿ ಕುಡಿಯಲು ಬಳಸಬೇಕು.

ಕೀಟ ಜನ್ಯ ರೋಗಗಳು ಬರದಂತೆ ತಡೆಗಟ್ಟುವ ವಿಧಾನ: ಸೊಳ್ಳೆ ಉತ್ಪತ್ತಿ ತಾಣಾಗಳಾದ ಮನೆಯ ಸುತ್ತಮುತ್ತಲಿನ ಗುಂಡಿಗಳಲ್ಲಿ, ಬಿಸಾಡಿದ ಪ್ಲಾಸ್ಟಿಕ್ ಬಾಟಲಿ, ತೆಂಗಿನ ಚಿಪ್ಪು, ಟಯರ್‍ಗಳಲ್ಲಿ ಶೇಖರಣೆಗೊಂಡ ನೀರು ನಿಲ್ಲದಂತೆ ನೋಡಿಕೊಳ್ಳವದು, ಮನೆಯಲ್ಲಿ ನೀರು ಸಂಗ್ರಹಿಸುವ ತೊಟ್ಟಿಗಳನ್ನು, ಡ್ರಂಗಳನ್ನು ಸದಾ ಮುಚ್ಚಿರುವಂತೆ ನೋಡಿಕೊಳ್ಳುವದು, ನಿಂತ ನೀರಿನ ಮೂಲಗಳಲ್ಲಿ ಉತ್ಪತ್ತಿಯಾಗುವಂತಹ ಸೊಳ್ಳೆಗಳ ಲಾರ್ವಗಳ ಸಂಖ್ಯೆಯನ್ನು ಕಡಿಮೆ ಮಾಡಲು ಲಾರ್ವಾಹಾರಿ ಗಪ್ಪಿ, ಗ್ಯಾಂಬೂಸಿಯ ಎಂಬ ಜಾತಿಯ ಮೀನುಗಳನ್ನು ಸ್ಥಳೀಯ ಆಡಳಿತದ ಸಹಾಯದಿಂದ ಆರೋಗ್ಯ ಇಲಾಖೆಯ ಸರ್ವೇಕ್ಷಣ ವಿಭಾಗದಲ್ಲಿ ಪಡೆದುಕೊಂಡು ನೀರಿನ ಮೂಲಗಳಲ್ಲಿ ಹಾಕುವದು, ಒಂದು ವೇಳೆ ಈಗಾಗಲೇ ಸೊಳ್ಳೆಗಳು ಇದ್ದಲ್ಲಿ ಅವುಗಳ ಕಡಿತದಿಂದ ಪಾರಾಗಲು ಎಲ್ಲರೂ ಮೈತುಂಬಾ ಉಡುಪುಗಳನ್ನು ತೊಡುವದು, ಕಿಟಕಿಯನ್ನು ಜಾಲರಿಯಿಂದ ಮುಚ್ಚುವದು, ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸುವದು, ಸೊಳ್ಳೆ ಬತ್ತಿಗಳನ್ನು ಬಳಸುವದು, ಸೊಳ್ಳೆ ಕಡಿತ ನಿರೋಧಕ ಕ್ರೀಮ್‍ಗಳನ್ನು ಬಳಸುವದು, ಜ್ವರ ಬಂದ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಂಡು ವೈದ್ಯರು ಸೂಚಿಸಿರುವ ಔಷಧಿಗಳನ್ನು ಸರಿಯಾಗಿ ಸೇವಿಸುವದು, ಬಯಲಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವದರಿಂದ ನೊಣಗಳ ಮೂಲಕ ರೋಗಕಾರಕ ಸೂಕ್ಷ್ಮಜೀವಿಗಳು ನಾವು ಸೇವಿಸುವ ಆಹಾರವನ್ನು ಸೇರಬಹುದು. ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತಾಗಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರಿಹಾರ ಕೇಂದ್ರಗಳಲ್ಲಿ ಅತಿವೃಷ್ಟಿ ಪ್ರದೇಶಗಳಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ.