ಮಡಿಕೇರಿ, ಆ. 29: ಪ್ರಾಕೃತಿಕ ವಿಕೋಪದಿಂದ ಮನೆ, ಆಸ್ತಿ - ಪಾಸ್ತಿ ಕಳೆದುಕೊಂಡು ಸಂತ್ರಸ್ತರಾಗಿರುವ ಕುಟುಂಬಗಳಿಗೆ, ಸರಕಾರ ಹಾಗೂ ಜಿಲ್ಲಾಡಳಿತದ ಸಹಯೋಗದಿಂದ ಪುನರ್ವಸತಿ ಕಲ್ಪಿಸುವ ದಿಸೆಯಲ್ಲಿ ತುರ್ತು ಗಮನ ಹರಿಸುವದರೊಂದಿಗೆ, ನೊಂದವರ ಅಭಿಪ್ರಾಯ ಸಂಗ್ರಹಿಸಿ ಪೂರಕ ವ್ಯವಸ್ಥೆ ದೊರಕಿಸಿಕೊಡಲಾಗುವದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಸಾ.ರಾ. ಮಹೇಶ್ ಭರವಸೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪ ಹಾನಿ ಕುರಿತು ತುರ್ತು ಸಭೆ ನಡೆಸಿದ ಸಚಿವರು, ಜಿಲ್ಲಾಡಳಿತದಿಂದ ಕೈಗೊಂಡಿರುವ ಕ್ರಮಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಂತ್ರಸ್ತರ ಸಲಹೆಯಂತೆ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಎಂ.ಪಿ ಸುನಿಲ್ ಸುಬ್ರಮಣಿ ಹಾಗೂ ವೀಣಾ ಅಚ್ಚಯ್ಯ ಸಚಿವರ ಗಮನ ಸೆಳೆದು; ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಅನುಸರಿಸಬೇಕಾದ ಮಾನದಂಡ ಮತ್ತು ಪರ್ಯಾಯ ವ್ಯವಸ್ಥೆ ಕುರಿತು ಸಲಹೆಗಳನ್ನು ನೀಡಿದರು.ಹತ್ತಿರದಲ್ಲಿಯೇ ಮನೆ ಅತಿವೃಷ್ಟಿಯಿಂದ ಮನೆ ಕಳೆದುಕೊಂಡಿರುವ ನಿರಾಶ್ರಿತರಿಗೆ ಹತ್ತಿರದಲ್ಲೇ ಮನೆ ನಿರ್ಮಿಸಿಕೊಡಲು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಸಭೆಯ ಆರಂಭದಲ್ಲಿ ಮಾಹಿತಿ ನೀಡಿದ ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ನಿರಾಶ್ರಿತರಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿಕೊಡಲು ಸುಂಟಿಕೊಪ್ಪ ಹೋಬಳಿಯ ಗರಗಂದೂರು ಬಳಿ 7 ಎಕರೆ ಜಾಗ, ಕೆ.ನಿಡುಗಣೆ ಗ್ರಾ.ಪಂ.ವ್ಯಾಪ್ತಿಯ ಆರ್‍ಟಿಒ ಕಚೇರಿ ಬಳಿ 4.80 ಎಕರೆ ಜಾಗ, ಬಿಳಿಗೇರಿ ಬಳಿ ಎರಡು ಕಡೆ ಒಟ್ಟು 7 ಎಕರೆ ಜಾಗ ಗುರುತಿಸಲಾಗಿದೆ. ಹಾಗೆಯೇ ಮಾದಾಪುರ ತೋಟಗಾರಿಕಾ ಇಲಾಖಾ ವ್ಯಾಪ್ತಿಯಲ್ಲಿ 100 ಎಕರೆ ಜಾಗ ಲಭ್ಯವಿದ್ದು, ಇಲ್ಲಿ ತಾತ್ಕಾಲಿಕವಾಗಿ ಶೆಡ್ ನಿರ್ಮಾಣ ಮಾಡಿಕೊಡಬಹುದಾಗಿದೆ. ಆದ್ದರಿಂದ ಎಲ್ಲರ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಶಾಸಕ
(ಮೊದಲ ಪುಟದಿಂದ) ಕೆ.ಜಿ.ಬೋಪಯ್ಯ ಅವರು ಅತಿವೃಷ್ಟಿಗೆ ತುತ್ತಾಗಿ ಮನೆ ಕಳೆದುಕೊಂಡವರಿಗೆ ಅವರವರ ಜಾಗದ ಬಳಿಯೇ ಮನೆ ನಿರ್ಮಿಸಿಕೊಡಬೇಕು ಎಂದು ಸಲಹೆ ಮಾಡಿದರು. ಪ್ರವಾಹ ಪೀಡಿತಕ್ಕೆ ಒಳಗಾದ ಹಲವು ಕುಟುಂಬಗಳು 40-50 ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಿಸಿದ್ದರು, ಅಂತವರು ಶೆಡ್‍ಗಳಲ್ಲಿ ವಾಸ ಮಾಡಲು ಮುಂದೆ ಬರುತ್ತಾರೆಯೇ? ಆದ್ದರಿಂದ ಕನಿಷ್ಟ 10 ಸೆಂಟು ಜಾಗ ನೀಡಬೇಕು ಎಂದು ಕೆ.ಜಿ.ಬೋಪಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ಮಧ್ಯ ಪ್ರವೇಶಿಸಿದ ಸಚಿವ ಸಾ.ರಾ.ಮಹೇಶ್ ಅವರು ಅತಿವೃಷ್ಟಿಯಿಂದ ಸಂತ್ರಸ್ತರಾದವರಲ್ಲಿ ಲೈನ್ ಮನೆಗಳಲ್ಲಿ ವಾಸಮಾಡುತ್ತಿದ್ದವರು ಇದ್ದಾರೆ. ಜೊತೆಗೆ ತೋಟದಲ್ಲಿ ಉತ್ತಮ ಮನೆ ಕಟ್ಟಿಕೊಂಡು ವಾಸಮಾಡುತ್ತಿದ್ದವರೂ ಇದ್ದಾರೆ. ಅಂತಹವರನ್ನು ಗುರುತಿಸಿ ಆಯಾಯ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಡುವದು ಒಳ್ಳೆಯದು ಎಂದು ಹೇಳಿದರು.
ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಬಹುತೇಕ ಗ್ರಾಮಗಳೊಂದಿಗೆ; ಮದೆನಾಡು, ಮಾದಾಪುರ, ಮಕ್ಕಂದೂರು, ಗರ್ವಾಲೆ, ಶಾಂತಳ್ಳಿ ಹೋಬಳಿಯ ಪರಿಸ್ಥಿತಿ ಬಗ್ಗೆ ವಿವರಿಸುತ್ತಾ, ಗ್ರಾಮಸ್ಥರ ಸಹಾಯದಿಂದ ರಸ್ತೆ ಸಂಪರ್ಕಕ್ಕೆ ಜಿಲ್ಲೆಯ ಅಧಿಕಾರಿಗಳು ಶ್ರಮಿಸುತ್ತಿದ್ದು, ಹೊರಗಿನಿಂದ ನಿಯೋಜಿಸಿರುವ 20 ಇಂಜಿನಿಯರ್‍ಗಳ ತಂಡ ಕಾರ್ಯನಿರ್ವಹಿಸುತ್ತಿಲ್ಲವೆಂದು ಬಹಿರಂಗಗೊಳಿಸಿದರು. ಈ ಬಗ್ಗೆ ಸಂಬಂಧಿಸಿದ ಕಾರ್ಯಪಾಲಕ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನಿತ್ಯದ ಕೆಲಸ ಕಾರ್ಯಗಳ ಬಗ್ಗೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ವರದಿ ಸಲ್ಲಿಸಲು ಆದೇಶಿಸಿದರು. ತಪ್ಪಿದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿದರು.
ಆದ್ಯತೆ ಮೇರೆಗೆ ಕೆಲಸ : ಜಿಲ್ಲೆಯಲ್ಲಿ ಸಂಪರ್ಕ ಕಡಿದುಕೊಂಡಿರುವ ರಸ್ತೆಗಳನ್ನು ತುರ್ತು ಸರಿಪಡಿಸಿ ಜನತೆಯ ಸಂಚಾರಕ್ಕೆ ಅನುವು ಮಾಡಿಕೊಡುವದು, ಗ್ರಾಮೀಣ ಭಾಗಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವದು, ವಿದ್ಯುತ್ ಸಂಪರ್ಕ ಕಡಿದುಕೊಂಡಿರುವ ಪ್ರದೇಶಗಳಿಗೆ ಮರು ವ್ಯವಸ್ಥೆಗೆ ಸಚಿವರು ಸೂಚಿಸಿದರು.
ಪ್ರಾಕೃತಿಕ ವಿಕೋಪದಿಂದ ಹಾನಿಗೀಡಾಗಿರುವ ನಾಟಿ ಗದ್ದೆಗಳು, ಕಾಫಿ, ಕರಿಮೆಣಸು ಇತ್ಯಾದಿ ತೋಟಗಳು, ತೋಟಗಾರಿಕಾ ಬೆಳೆಗಳು ಮುಂತಾದ ಹಾನಿ ಬಗ್ಗೆ ವ್ಯಕ್ತಿವಾರು ನಷ್ಟದ ವರದಿ ಪಡೆದು ನಷ್ಟ ಪರಿಹಾರ ನೀಡಬೇಕೆಂದು ಸಚಿವರು, ಜನಪ್ರತಿನಿಧಿಗಳ ಸಲಹೆ ಮೇರೆಗೆ ಅಧಿಕಾರಿಗಳಿಗೆ ಸೂಚಿಸಿದರು.
ಸಂತ್ರಸ್ತರ ಮಕ್ಕಳು : ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆಯುವ 763 ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದು, ಅಂತಹ ವಿದ್ಯಾರ್ಥಿಗಳಿಗೆ ಪೋಷಕರ ಒಪ್ಪಿಗೆಯೊಂದಿಗೆ ಪರ್ಯಾಯ ಶಿಕ್ಷಣ ವ್ಯವಸ್ಥೆಗೆ ಗಮನ ಹರಿಸಲಾಗುವದು ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಪ.ಪೂ. ಶಿಕ್ಷಣದ ದಿಸೆಯಲ್ಲಿಯೇ ಅಂತಹ ವಿದ್ಯಾರ್ಥಿಗಳಿಗೆ ಎಲ್ಲಾ ನೆರವು ಒದಗಿಸುತ್ತಿರುವದಾಗಿ ಆ ಇಲಾಖೆ ಅಧಿಕಾರಿ ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹಟ್ಟಿಹೊಳೆಯಲ್ಲಿ ವಿದ್ಯಾರ್ಥಿ ನಿಲಯ ಆರಂಭಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಂತಾಗಬೇಕು. ಹಾಗೆಯೇ ಚೆನ್ನಮ್ಮ ಜೂನಿಯರ್ ಕಾಲೇಜಿಗೆ ವಿದ್ಯಾರ್ಥಿಗಳು ತೆರಳಲು ತೊಂದರೆಯಾಗಿದೆ. ಈ ಸಂಬಂಧ ಗಮನ ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅತಿವೃಷ್ಟಿಯಿಂದಾಗಿ ಬಸ್‍ಪಾಸ್ ಕಳೆದುಕೊಂಡವರಿಗೆ ಬಸ್ ಪಾಸ್ ನೀಡುವಂತೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಟ್ಟಿಹೊಳೆ, ಸೂರ್ಲಬ್ಬಿ, ಗರ್ವಾಲೆ, ಶಾಂತಳ್ಳಿ, ಹಮ್ಮಿಯಾಲ, ಮುಟ್ಲುವಿಗೂ ಮಿನಿ ಬಸ್ ಸಂಪರ್ಕವನ್ನು ತಕ್ಷಣವೇ ಕಲ್ಪಿಸುವಂತೆ ಎಂ.ಪಿ.ಅಪ್ಪಚ್ಚು ರಂಜನ್ ನಿರ್ದೇಶನ ನೀಡಿದರು.
ತೀವ್ರ ಅತಿವೃಷ್ಟಿಯಿಂದಾಗಿ ಅಶುಚಿತ್ವ ಮತ್ತಿತ್ತರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸಾಂಕ್ರಾಮಿಕ ರೋಗಗಳು ಬರದಂತೆ ಎಚ್ಚರಿಕೆ ವಹಿಸಬೇಕು. ಈ ಸಂಬಂಧ ಹೆಚ್ಚಿನ ಜಾಗೃತಿ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಚಿವ ಸಾ.ರಾ. ಮಹೇಶ್ ಸೂಚಿಸಿದರು.
ಜಿಲ್ಲೆಯ ಹಲವು ಗ್ರಾಮಗಳಲ್ಲಿ ಚರಂಡಿ ಮತ್ತು ರಸ್ತೆಯನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಬೇಕಿದೆ. ಆ ನಿಟ್ಟಿನಲ್ಲಿ ಮಾಹಿತಿ ಒದಗಿಸುವಂತೆ ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರ್‍ಗೆ ಸೂಚಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಅತಿವೃಷ್ಟಿಯಿಂದಾಗಿ 2,108 ಕಿ.ಮೀ ಗ್ರಾಮೀಣ ರಸ್ತೆ ಹಾನಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಅತಿವೃಷ್ಟಿಗೆ ತುತ್ತಾಗಿ ನಿರಾಶ್ರಿರಾದ ಮಕ್ಕಳನ್ನು ಕಡ್ಡಾಯವಾಗಿ ಹತ್ತಿರದ ಶಾಲೆಗೆ ಸೇರಿಸಬೇಕು, ಜೊತೆಗೆ ಪಠ್ಯ ಪುಸ್ತಕ ಮತ್ತು ನೋಟ್ ಪುಸ್ತಕ ವಿತರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕರುಗಳೊಂದಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಸುಬ್ರಮಣ್ಯ, ಹಿರಿಯ ಅಧಿಕಾರಿಗಳಾದ ರಿಚರ್ಡ್ ವಿನ್ಸೆಂಟ್ ಡಿಸೋಜ, ಚಾರುಲತಾ ಸೋಮಲ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು ಹಾಜರಿದ್ದು, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸ್ವಾಗತಿಸಿ, ಜಿಲ್ಲಾಡಳಿತದಿಂದ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಗಮನ ಸೆಳೆದರು.