ಸುಂಟಿಕೊಪ್ಪ, ಆ. 29: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ನೆರೆ ಹಾವಳಿಯಿಂದ ಪುನರ್ವಸತಿ ಕೇಂದ್ರಗಳಿಗೆ ಜಿಲ್ಲಾ ಸತ್ರ ನ್ಯಾಯಾಲಯಾದ ಹಿರಿಯ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಕಾನೂನು ಸೇವಾ ಪ್ರಾಧಿಕಾರ ಮಡಿಕೇರಿ ನ್ಯಾಯಾಧೀಶರಾದ ನೂರುನ್ನೀಸಾ ಭೇಟಿ ನೀಡಿದರು.
ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ ಹಾಗೂ ಸರಕಾರಿ ಪ್ರೌಢಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅತಿವೃಷ್ಟಿಯಿಂದ ನಿರಾಶ್ರಿತ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಕೇಂದ್ರಗಳಲ್ಲಿ ನೆಲೆಸಿರುವ ಸಂತ್ರಸ್ತರಿಗೆ ಅವರು ಸಾಂತ್ವನ ಹೇಳಿದರು. ಆಹಾರ ಮತ್ತು ಮೂಲಭೂತ ಸವಲತ್ತುಗಳ ಬಗ್ಗೆ ಪರಿಶೀಲಿಸಿ ನಿರಾಶ್ರಿತಗೊಂಡ ಸಂತ್ರಸ್ತರೊಂದಿಗೆ ಮಾತನಾಡಿದ ಸರಕಾರದಿಂದ ನೀಡುವ ಸವಲತ್ತನ್ನು ಪಡೆದುಕೊಳ್ಳಬೇಕು ಇಲ್ಲಿ ಒದಗಿಸುವ ವಸ್ತುಗಳು ದುರುಪಯೋಗವಾಗಬಾರದು. ಸುಪ್ರಿಂಕೋರ್ಟ್, ಹೈಕೋರ್ಟ್ ನಿರ್ದೇಶನದ ಮೇರೆ ಪುರ್ನವಸತಿ ಕೇಂದ್ರಗಳಲ್ಲಿ ಮೂಲಭೂತ ಸವಲತ್ತುಗಳ ಮಾಹಿತಿ ಪಡೆದುಕೊಂಡಿರುವ ಸಂತ್ರಸ್ತರ ನೆರವಿಗೆ ಸಹಕರಿಸುವ ದಿಸೆಯಲ್ಲಿ ನೆರೆ ಹಾವಳಿಯ ಸಂದರ್ಭ ಅಧಿಕೃತ ದಾಖಲಾತಿಗಳನ್ನು ಕಳೆದುಕೊಂಡಿದ್ದಲ್ಲಿ ದಾಖಲಾತಿಗಳನ್ನು ನ್ಯಾಯಾಲಯದ ವತಿಯಿಂದ ಹೊಂದಿಕೊಳ್ಳಲು ಕಾನೂನು ರೀತಿಯ ಎಲ್ಲಾ ಸಹಕಾರವನ್ನು ಉಚಿತವಾಗಿ ಒದಗಿಸಲಾಗುವದು ಎಂದು ಸಂತ್ರಸ್ತರಿಗೆ ತಿಳಿಸಿದರು.
ಈ ಸಂದರ್ಭ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಕೆದಕಲ್ ಗ್ರಾ.ಪಂ. ಸದಸ್ಯೆ ಹರಿಣಿ, ಮಾಜಿ ಅಧ್ಯಕ್ಷೆ ಮಧುನಾಗಪ್ಪ, ಸ್ವಯಂ ಸೇವಕರು ಇದ್ದರು.