ಮಡಿಕೇರಿ, ಆ. 29: ಕೊಡವ ಕುಟುಂಬಗಳ ನಡುವೆ ವರ್ಷಂಪ್ರತಿ ಏಪ್ರಿಲ್- ಮೇ ತಿಂಗಳಿನಲ್ಲಿ ಆಯೋಜಿಸಲಾಗುತ್ತಿದ್ದ ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವವನ್ನು 2019ರಲ್ಲಿ ನಡೆಸದಿರಲು ಈ ಬಾರಿಯ ಆಯೋಜಕರಾಗಿದ್ದ ಪೊರುಕೊಂಡ ಕುಟುಂಬ ಮಹತ್ವದ ನಿರ್ಣಯವನ್ನು ಕೈಗೊಂಡಿದೆ.ಚೆಂಬೆಬೆಳ್ಳೂರಿನ ಪೊರುಕೊಂಡ ಕುಟುಂಬ 2019ರ ಉತ್ಸವ ಆಯೋಜಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು. ಆದರೆ ಪ್ರಸಕ್ತ ವರ್ಷ ಎದುರಾಗಿರುವ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಈ ಒಂದು ವರ್ಷದ ಮಟ್ಟಿಗೆ ಉತ್ಸವ ಆಯೋಜಿಸದಿರುವಂತೆ ಸಂಘಟಕರು ನಿರ್ಧರಿಸಿದ್ದಾರೆ. ಮೇಘಸ್ಪೋಟ- ಜಲ ಸ್ಪೋಟದಿಂದ ಸಾಕಷ್ಟು ಕಷ್ಟ- ನಷ್ಟಗಳು ಉಂಟಾಗಿವೆ. ಕೊಡವ ಜನಾಂಗದವರು ಕೂಡ ಇದರಿಂದ ಸಂತ್ರಸ್ತರಾಗಿದ್ದಾರೆ. ಇಂತಹ ಸನ್ನಿವೇಶ ಈ ವರ್ಷ ಅನಿರೀಕ್ಷಿತವಾಗಿ ಎದುರಾಗಿರುವದು ದುರಂತವಾಗಿದೆ. ಈ ಕಾರಣದಿಂದ ಕೆಲವಾರು ಮಂದಿ ನೋವಿನಲ್ಲಿರುವಾಗ ಸಂಭ್ರಮದ ಈ ಕ್ರೀಡಾಕೂಟ ನಡೆಸುವದು ಸರಿಯಾ ಗುವದಿಲ್ಲ. ಈ ಬಗ್ಗೆ ಜನಾಂಗದ ಪ್ರಮುಖರಿಂದಲೂ ಕುಟುಂಬ ಅಭಿಪ್ರಾಯವನ್ನು ಪಡೆದಿದೆ ಎಂದು ಪೊರುಕೊಂಡ ಕಪ್ ಕ್ರಿಕೆಟ್ ಉತ್ಸವ ಸಮಿತಿಯ ಅಧ್ಯಕ್ಷರಾದ ಬೋಪಣ್ಣ ಹಾಗೂ ಪಂದ್ಯಾವಳಿಯ ನಿರ್ದೇಶಕ ಪೊರುಕೊಂಡ ಸುನಿಲ್ ಅವರುಗಳು ‘ಶಕ್ತಿ’ಗೆ ತಿಳಿಸಿದ್ದಾರೆ.

ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವ ಕೊಡವ ಕ್ರಿಕೆಟ್ ಅಕಾಡೆಮಿಯ ಅಧೀನದಲ್ಲಿ ನಡೆಯುತ್ತಿದ್ದು, ಈ ವಿಚಾರವನ್ನು ಅಕಾಡೆಮಿ ಪ್ರಮುಖರಿಗೂ ತಿಳಿಸಲಾಗಿದೆ.

ಉತ್ಸವವನ್ನು ಈ ಬಾರಿ ಮುಂದೂಡಿ 2020ರಲ್ಲಿ ಇದನ್ನು ಆಯೋಜಿಸಲು

(ಮೊದಲ ಪುಟದಿಂದ) ಕುಟುಂಬ ಸಿದ್ಧವಿರುವದಾಗಿ ಅವರುಗಳು ತಿಳಿಸಿದ್ದಾರೆ. 2018ರಲ್ಲಿ ಮಡಿಕೇರಿಯಲ್ಲಿ ನಡೆದ ಮಡ್ಲಂಡ ಕಪ್‍ನಲ್ಲಿ ಪೊರುಕೊಂಡ ಕುಟುಂಬ 2019ರ ಉತ್ಸವ ಆಯೋಜನೆಗೆ ಧ್ವಜ ಸ್ವೀಕರಿಸಿತ್ತು. ಆದರೆ ಪ್ರಾಕೃತಿಕ ದುರಂತದ ಕಾರಣದಿಂದಾಗಿ ಇದನ್ನು ಮುಂದೂಡುತ್ತಿರುವದಾಗಿ ಅವರುಗಳು ಮಾಹಿತಿ ನೀಡಿದ್ದಾರೆ.