ಸೋಮವಾರಪೇಟೆ, ಆ. 29: ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಿಕ್ಕರಳ್ಳಿ ಗ್ರಾಮಸ್ಥರ ಬದುಕು ಅಕ್ಷರಶಃ ನಲುಗಿ ಹೋಗಿದೆ. ವರುಣನಾರ್ಭಟಕ್ಕೆ ಸಿಲುಕಿ ಇಲ್ಲಿಯ ಮಂದಿ ಇಂದು ಬೇಡುವ ಸ್ಥಿತಿಗೆ ತಲುಪಿದ್ದಾರೆ.

ಈ ಭಾಗಕ್ಕೆ ಅಧಿಕ ಮಳೆಯಾಗಿದ್ದು, ಗದ್ದೆಗಳಲ್ಲಿ ನಾಟಿ ಮಾಡಿದ್ದ ಪೈರು ನಾಶವಾಗಿದೆ. ತೋಟದಲ್ಲಿರುವ ಕಾಫಿ ಫಸಲು ನೆಲಕ್ಕಚ್ಚಿದೆ. ಕಿಕ್ಕರಳ್ಳಿ ಗ್ರಾಮದಲ್ಲಿ 32 ಕುಟುಂಬಗಳಿದ್ದು, ಯುವಕರು ಪಟ್ಟಣ ಸೇರಿದ್ದು, ತಮ್ಮ ಪಾಲಿಗಿರುವ ಒಂದೆರಡು ಎಕರೆ ಕೃಷಿ ಭೂಮಿ, ಜಾನುವಾರುಗಳೊಂದಿಗೆ ವೃದ್ಧರು ವಾಸಿಸುತ್ತಿದ್ದಾರೆ.

ಕಿಕ್ಕರಳ್ಳಿ ಗ್ರಾಮದ ಕೊಚ್ಚೇರ ಗಣಪತಿ, ಕೊಚ್ಚೇರ ರಾಮಪ್ಪ ಅವರುಗಳ ಗದ್ದೆ ಸಂಪೂರ್ಣ ಹಾನಿಗೀಡಾಗಿವೆ. ತಮ್ಮ ಪಾಲಿನ ಅಕ್ಕಿಯನ್ನು ತಾವೇ ಬೆಳೆಯುತ್ತಿದ್ದ ಮಂದಿ ಇಂದು ನ್ಯಾಯಬೆಲೆ ಅಂಗಡಿಯ ಅಕ್ಕಿ, ಪರಿಹಾರವಾಗಿ ಹೊರಭಾಗದಿಂದ ಬರುವ ಅಕ್ಕಿ ಸೇರಿದಂತೆ ದಿನಸಿ ಸಾಮಗ್ರಿಗಳಿಗಾಗಿ ಕಾಯುವಂತಾಗಿದೆ.

ತನಗೂ ವಯಸ್ಸಾಯ್ತು, ಇದ್ದ ಗದ್ದೆಯಲ್ಲೇ ಉಳುಮೆ ಮಾಡಿ ನಾಟಿ ಪೂರ್ಣಗೊಳಿಸಿದ್ದೆ. ಭಾರೀ ಮಳೆಗೆ ಬರೆ ಕುಸಿದು ಗದ್ದೆಯ ಮೇಲೆ ಮಣ್ಣು ನಿಂತಿದೆ. ಇದೀಗ ಗದ್ದೆಯೇ ಇಲ್ಲವಾಗಿದೆ. ಜೀವನಾಧಾರವೇ ಕೈಬಿಟ್ಟು ಹೋಗಿದೆ ಎಂದು ವೃದ್ಧ ಗಣಪತಿ ಅಳಲು ತೋಡಿಕೊಂಡಿದ್ದಾರೆ.

ಸರ್ಕಾರದಿಂದ ಈರ್ವರಿಗೆ ತಲಾ ರೂ. 600 ವೃದ್ಧಾಪ್ಯ ವೇತನ ಬರುತ್ತಿದೆ. ಇದರಲ್ಲಿಯೇ ಇಬ್ಬರ ಜೀವನ ಸಾಗಿಸಬೇಕು. ಇದ್ದ ಕೃಷಿ ಭೂಮಿಯೂ ಈಗ ಇಲ್ಲವಾಗಿದೆ ಎಂದು ಗಣಪತಿ ಅವರ ಪತ್ನಿ ಸೀತಮ್ಮ ನೊಂದು ನುಡಿದಿದ್ದಾರೆ.

ಕಿಕ್ಕರಳ್ಳಿ ಗ್ರಾಮದ ಕೆ.ಪಿ. ರಾಮಪ್ಪ ಅವರ ಮನೆ ಬಿದ್ದಿದ್ದು, ಕಳೆದ 15 ದಿನಗಳಿಂದ ಕೊಟ್ಟಿಗೆಯಲ್ಲಿ ವಾಸ ಮಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ಮಗನನ್ನು ಕಳೆದುಕೊಂಡಿರುವ ರಾಮಪ್ಪ ಅವರು 8 ತಿಂಗಳ ಹಿಂದೆ ಪತ್ನಿ ಚೋಂದವ್ವ ಅವರನ್ನು ಕಳೆದುಕೊಂಡರು. ಈ ಮಧ್ಯೆ ಒಂದು ತಿಂಗಳ ಹಿಂದೆ ತಾಯಿ ಪೊನ್ನವ್ವ ತೀರಿಕೊಂಡರು. ದುಃಖದ ಮಡುವಿನಲ್ಲಿದ್ದ ಇವರಿಗೆ, ಮನೆ ಬಿದ್ದು ಮತ್ತೊಮ್ಮೆ ಆಘಾತವಾಗಿದೆ. ಅಲ್ಪಸ್ವಲ್ಪವಿದ್ದ ಕೃಷಿ ಭೂಮಿಯೂ ಮಳೆಯಿಂದ ಹಾಳಾಗಿದ್ದು, ಬದುಕು ದುಸ್ತರವೆನಿಸಿದೆ ಎಂದು ರಾಮಪ್ಪ ನೊಂದುಕೊಳ್ಳುತ್ತಾರೆ.

ಕಿಕ್ಕರಳ್ಳಿ ಗ್ರಾಮದ ಅಜ್ಜಮಕ್ಕಡ ಬೋಜಮ್ಮ ಅವರ ಮೇಲೆ ಮರ ಬಿದ್ದು, ತಲೆ ಹಾಗೂ ಸೊಂಟದ ಭಾಗಕ್ಕೆ ಗಾಯವಾಗಿದ್ದು, ಬದುಕುಳಿದಿದ್ದೇ ಹೆಚ್ಚು ಎಂದು 78ರ ಪ್ರಾಯದ ಈ ವೃದ್ಧೆ ನೆನಪಿಸಿಕೊಳ್ಳುತ್ತಾರೆ.

ತನ್ನ ಜೀವಮಾನದಲ್ಲಿ ಇಂತಹ ಮಳೆ ನೋಡಿಲ್ಲ. ಮಹಾ ಮಳೆಗೆ ಗ್ರಾಮಸ್ಥರ ಜೀವನವೇ ಕಷ್ಟಕರವಾಗಿದೆ. ಕೃಷಿ ಸಂಪೂರ್ಣ ಹಾಳಾಗಿದ್ದು, ಸರ್ಕಾರ ತಕ್ಷಣ ಈ ಭಾಗದ ಬಗ್ಗೆ ಗಮನ ಹರಿಸಬೇಕು. ನಷ್ಟಕ್ಕೊಳಗಾದ ಕೃಷಿಕರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥ ಸುರೇಶ್ ಒತ್ತಾಯಿಸಿದ್ದಾರೆ.

- ವಿಜಯ್ ಹಾನಗಲ್