ಮಡಿಕೇರಿ, ಆ. 29: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಎದುರಾಗಿರುವ ಹಾನಿಯನ್ನು ನಿವಾರಿಸುವ ದಿಸೆಯಲ್ಲಿ ರಾಜ್ಯ ಸರಕಾರದಿಂದ ಮುಖ್ಯ ಮಂತ್ರಿಗಳು ಜಿಲ್ಲಾಧಿಕಾರಿಗಳ ಖಾತೆಗೆ ರೂ. 115 ಕೋಟಿ ಹಣ ಕಲ್ಪಿಸಿದ್ದು, ಪ್ರವಾಸೋದ್ಯಮ ಇಲಾಖೆ ಮುಖಾಂತರ ರೂ. 25 ಕೋಟಿ ಬಿಡುಗಡೆಗೊಳಿಸಿರುವದಾಗಿ ಸಂಬಂಧಿಸಿದ ಖಾತೆಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಹೊಂದಿರುವ ಸಾ.ರಾ. ಮಹೇಶ್ ಘೋಷಿಸಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅತಿವೃಷ್ಟಿಗೆ ಪ್ರಥಮ ಹಂತದಲ್ಲಿ 5 ಕೋಟಿ, 2ನೇ ಹಂತದಲ್ಲಿ 20 ಕೋಟಿ, 3 ನೇ ಹಂತದಲ್ಲಿ 85 ಕೋಟಿ ಒಟ್ಟು 115 ಕೋಟಿ ರೂ. ಮೊತ್ತವನ್ನು ಜಿಲ್ಲಾಧಿಕಾರಿ ಅವರ ಖಾತೆಗೆ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು ಪ್ರವಾಸೋದ್ಯಮ ಇಲಾಖೆಯಿಂದ 25 ಕೋಟಿ ರೂ.ವನ್ನು ಜಿಲ್ಲೆಗೆ ಬಿಡುಗಡೆ ಮಾಡುತ್ತಿದ್ದೇನೆಂದು ಪ್ರಕಟಿಸಿದರು.

1790 ಕುಟುಂಬ: ಮನೆ ಇತ್ಯಾದಿ ಹಾನಿಗೊಂಡಿರುವ ಸಂಬಂಧ ತುರ್ತು ಸೇವಾ ಕೇಂದ್ರಗಳಲ್ಲಿ ಆಸರೆ ಪಡೆದಿರುವ 1790 ಕುಟುಂಬಗಳಿಗೆ ತಲಾ ಕುಟುಂಬಗಳಿಗೆ ತಲಾ ರೂ. 3,800 ರಂತೆ ಪ್ರಥಮ ಕಂತಿನಲ್ಲಿ ಪರಿಹಾರ ನೀಡಲಾಗಿದೆ ಎಂದು ವಿವರಿಸಿದ ಸಚಿವರು, ಮುಂದಿನ ದಿನಗಳಲ್ಲಿ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸುವದರೊಂದಿಗೆ, ಅಗತ್ಯವಿರುವವರಿಗೆ ಬಾಡಿಗೆ ಮನೆಗಳಲ್ಲಿ ಆಸರೆಗೂ ನೆರವು ನೀಡಲಾಗುವದು ಎಂದರು.

ಮೃತರ ಕುಟುಂಬಕ್ಕೆ ಪರಿಹಾರ: ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಇಂದಿನವರೆಗೆ ಪ್ರಾಣ ಕಳೆದುಕೊಂಡಿರುವ ಹದಿನಾಲ್ಕು ಮಂದಿಯ ನೊಂದ ಕುಟುಂಬ ಸದಸ್ಯರಿಗೆ ತಲಾ ರೂ. 5 ಲಕ್ಷ ಪರಿಹಾರ ಮೊತ್ತ ಕಲ್ಪಿಸಿದ್ದು, ಇನ್ನು 2 ಕುಟುಂಬಗಳಿಗೆ ನೆರವು ನೀಡಬೇಕೆಂದು ಸ್ಪಷ್ಟಪಡಿಸಿದರು. ಅಲ್ಲದೆ, ಜೋಡುಪಾಲದ ವಿದ್ಯಾರ್ಥಿನಿ ಮಂಜುಳ (15) ಹಾಗೂ ಹೆಬ್ಬಾಲೆಯ ಹರೀಶ್ ಕುಮಾರ್ ಎಂಬಿಬ್ಬರು ಕಾಣೆಯಾಗಿದ್ದು, ಇಬ್ಬರೂ ಮೃತರಾಗಿರುವ ಶಂಕೆಯೊಂದಿಗೆ ಪೊಲೀಸರು ಹುಡುಕುತ್ತಿರುವದಾಗಿ ಸಚಿವರು ವಿವರಿಸಿದರು.

ಹಳ್ಳಿಗಳಿಗೂ ಸವಲತ್ತು: ಕೊಡಗಿನ ಎಲ್ಲ ಹಳ್ಳಿಗಳಿಗೂ ರಸ್ತೆ ಹಾಗೂ ಮೂಲಭೂತ ಸೌಕರ್ಯದೊಂದಿಗೆ ಸಂಪರ್ಕ ಸಾಧಿಸಲು ಸರಕಾರ ನಿರ್ದೇಶಿಸಿದ್ದು, ಉನ್ನತ ಮಟ್ಟದ ಅಧಿಕಾರಿಗಳ ತಂಡ ಈ ಬಗ್ಗೆ ಸರ್ವೆ ನಡೆಸಿ ಸಲ್ಲಿಸಿದ ಬಳಿಕ ತ್ವರಿತ ಕ್ರಮಕೈಗೊಳ್ಳಲಾಗುವದು ಎಂದು ಸಚಿವ ಮಹೇಶ್ ಸ್ಪಷ್ಟಪಡಿಸಿದರು.

ಇಲಾಖೆಯ ನೆರವು: ಜಿಲ್ಲೆಯ 400ಕ್ಕೂ ಅಧಿಕ ಗಿರಿಜನ ಕುಟುಂಬ ಹಾಗೂ ಕೆಂಬಟ್ಟಿ ಜನಾಂಗಕ್ಕೆ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯಿಂದ ಪ್ರತಿ ತಿಂಗಳು ಅಕ್ಕಿ, ತುಪ್ಪ, ಸಕ್ಕರೆ, ಎಣ್ಣೆ, ಬೇಳೆ ಇತ್ಯಾದಿ ಆಹಾರ ಸಾಮಗ್ರಿ ಪೂರೈಕೆಗೆ ಜಿಲ್ಲಾಡಳಿತ ಕ್ರಮಕೈಗೊಂಡಿದ್ದು, ಇಲಾಖೆಯ ಅಧಿಕಾರಿಗಳು ಗಮನ ಹರಿಸುವಂತೆ ಸೂಚಿಸಿರುವದಾಗಿ ಅವರು ಮಾಹಿತಿ ನೀಡಿದರು.

ಜಿಲ್ಲೆಯ ಜನತೆ ಯಾವದೇ ಊಹಾಪೋಹಾಗಳಿಗೆ ಕಿವಿಗೊಡದಂತೆ ಮನವಿ ಮಾಡಿದ ಸಚಿವರು, ಕೊಡಗು ಸಹಜ ಸ್ಥಿತಿಯತ್ತ ಮರಳುವ ದಿಸೆಯಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯ ಮಾಡೋಣವೆಂದು ಕರೆ ನೀಡಿದರು.

ಗೋಷ್ಠಿಯಲ್ಲಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ವೀಣಾ ಅಚ್ಚಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಸುಬ್ರಮಣ್ಯ, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಹಿಂದಿನ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜಾ, ಎಸ್ಪಿ ಸುಮನ್ ಡಿ. ಪಣ್ಣೇಕರ್ ಮೊದಲಾದವರು ಉಪಸ್ಥಿತರಿದ್ದರು.