ಸೋಮವಾರಪೇಟೆ, ಆ. 29: ಸೊಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ವತಿಯಿಂದ ಕೊಡಗಿನ ಪ್ರವಾಹ ಸಂತ್ರಸ್ತರಿಗಾಗಿ ನಡೆಸಲಾಗುತ್ತಿರುವ ಉಚಿತ ವೈದ್ಯಕೀಯ ಶಿಬಿರ ಇಲ್ಲಿಗೆ ಸಮೀಪದ ಬಜೆಗುಂಡಿ ಗ್ರಾಮದಲ್ಲಿ ನಡೆಯಿತು.

ಎಸ್‍ಯುಸಿಐ ಪಕ್ಷ ಹಾಗೂ ಮೆಡಿಕಲ್ ಸರ್ವಿಸ್ ಸೆಂಟರ್ (ಎಂಎಸ್‍ಸಿ) ವೈದರ ಸಂಘಟನೆಯು ಜಂಟಿಯಾಗಿ ಉಚಿತ ವೈದ್ಯಕೀಯ ಶಿಬಿರ ನಡೆಸುತ್ತಿದ್ದು, ಕೃಷಿ ಕಾರ್ಮಿಕರಿರುವ ಸಂತ್ರಸ್ತ ಪ್ರದೇಶಗಳಲ್ಲಿ ದಿನಕ್ಕೆ ಒಂದು ಸ್ಥಳದಂತೆ ಕಾರ್ಯ ನಿರ್ವಹಿಸಲಿದೆ. ಮುಂದಿನ ನಾಲ್ಕು ದಿನಗಳ ಕಾಲ ಶಿಬಿರ ನಡೆಸಲಾಗುವದು ಎಂದು ಮೈಸೂರು ಜಿಲ್ಲಾ ಸಮಿತಿಯ ಸದಸ್ಯ ಚಂದ್ರಶೇಖರ್ ಮೇಟಿ ಹೇಳಿದರು.

ದಾವಣಗೆರೆ ಹಾಗೂ ಮೈಸೂರಿನ ತಜ್ಞ ವೈದ್ಯರ ತಂಡ ಕಾರ್ಯನಿರ್ವಹಿಸುತ್ತಿದ್ದು, ಸಮಿತಿಯ ನೇತೃತ್ವವನ್ನು ಡಾ. ವಸುಧೇಂದ್ರ ವಹಿಸಿದ್ದಾರೆ. ಎಸ್‍ಯುಸಿಐ ಮೈಸೂರು ಜಿಲ್ಲಾ ಕಾರ್ಯದರ್ಶಿಗಳಾದ ಬಿ. ರವಿ ಹಾಗೂ ಸ್ವಯಂಸೇವಕರು ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ.