ಮಡಿಕೇರಿ, ಆ. 29: ಮಡಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 21 ಉಪನ್ಯಾಸಕ ಹುದ್ದೆಗಳಿದ್ದು, ಅದರಲ್ಲಿ ಕೇವಲ 7 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಕಾಲೇಜಿನಲ್ಲಿರುವ ಸುಮಾರು 541 ಮಂದಿ ವಿದ್ಯಾರ್ಥಿಗಳಿಗೆ ಈ 7 ಮಂದಿ ಉಪನ್ಯಾಸಕರು ಪಾಠ ನಡೆಸುತ್ತಿದ್ದರು. ಆದರೆ, ಈ ಸೋಮವಾರದಿಂದ ಪಾಠ ನಡೆಸಲು ಸಾಧ್ಯವಾಗುತ್ತಿಲ್ಲವೆಂದು ಅಲ್ಲಿನ ಪ್ರಾಂಶುಪಾಲ ವಿಜಯನ್ ಅಸಹಾಯಕತೆ ವ್ಯಕ್ತಪಡಿಸಿದರು. ಕಾರಣ, ಇದ್ದ 7 ಮಂದಿ ಉಪನ್ಯಾಸಕರ ಪೈಕಿ 5 ಉಪನ್ಯಾಸಕÀರನ್ನು ಜಿಲ್ಲಾಡಳಿತ ಪರಿಹಾರ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುವ ನೋಡೆಲ್ ಅಧಿಕಾರಿಗಳಾಗಿ ನೇಮಕ ಮಾಡಿದೆ. ಉಳಿದ 2 ಮಂದಿ ಉಪನ್ಯಾಸಕರ ಪೈಕಿ ಒಬ್ಬ ಉಪನ್ಯಾಸಕರ ಮನೆ ಪ್ರಕೃತಿ ವಿಕೋಪದಲ್ಲಿ ನಾಶವಾಗಿದ್ದು, ಇಂದು ಅವರು ತಮ್ಮ ಸಂಕಷ್ಟವನ್ನು ಬದಿಗಿಟ್ಟು ಪಾಠ ನಡೆಸಲು ಬಂದಿದ್ದಾರೆಂದು ಪ್ರಾಂಶುಪಾಲರು ನುಡಿದರು.ಸುಮಾರು 20 ದಿನಗಳ ಪಾಠಗಳನ್ನು ಕಾಲೇಜಿನ ವಿದ್ಯಾರ್ಥಿಗಳು ಮಳೆ ಹಾಗೂ ಪ್ರಕೃತಿ (ಮೊದಲ ಪುಟದಿಂದ) ವಿಕೋಪದ ದೆಸೆಯಿಂದ ಕಳೆದುಕೊಂಡಿದ್ದರೆ ಈಗ ಕಾಲೇಜು ಪುನರಾರಂಭಗೊಂಡಿದ್ದರೂ, ಪಾಠ ನಡೆಸಲಾಗುತ್ತಿಲ್ಲ ಎಂದು ಪ್ರಾಂಶುಪಾಲರು ಹತಾಶೆಯ ನುಡಿಯಾಡಿದರು. “ಪೋಷÀಕರು ನನಗೆ ಕರೆ ಮಾಡಿ ಪಾಠ ನಡೆಸದಿದ್ದರೆ ಧರಣಿ ನಡೆಸುತ್ತೇವೆ ಎನ್ನುತ್ತಾರೆ. ಉಪನ್ಯಾಸಕರೇ ಇಲ್ಲದಿರುವಾಗ ನಾವು ಹೇಗೆ ಪಾಠ ನಡೆಸಲು ಸಾಧ್ಯ?” ಎಂದು ಪ್ರಾಂಶುಪಾಲರು ಪ್ರಶ್ನಿಸುತ್ತಾರೆ. ಈ ಬಗ್ಗೆ ವಿಚಾರಿಸಲು ‘ಶಕ್ತಿ’ ಪ್ರಯತ್ನಿಸಿದಾಗ ಜಿಲ್ಲಾಧಿಕಾರಿಗಳು ಕರೆಗೆ ಲಭ್ಯವಾಗಲಿಲ್ಲ.