ಸುಂಟಿಕೊಪ್ಪ: ಕೊಡಗಿನಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿದ್ದು, ವಿವಿಧ ಜಿಲ್ಲೆಯಿಂದ 70 ಮಂದಿ ಅಧಿಕಾರಿಗಳ ತಂಡ ಸರ್ವೆ ಕಾರ್ಯ ನಡೆಯುತ್ತಿದ್ದು, ಉಚಿತ ಬಿತ್ತನೆ ಬೀಜದ ಜೊತೆ ಆರ್ಥಿಕ ನೆರವು ನೀಡಲಾಗುವದು ಎಂದು ಕೃಷಿ ಸಚಿವ ಎನ್.ಹೆಚ್. ಶಿವಶಂಕರ ರೆಡ್ಡಿ ಹೇಳಿದರು.

ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪು ತೋಡು ಗ್ರಾಮದಲ್ಲಿ ಪ್ರವಾಹದಿಂದ ನಾಟಿ ಮಾಡಿದ ಗದ್ದೆಗಳು ಕೊಚ್ಚಿ ಹೋಗಿದ್ದನ್ನು ಖುದ್ದು ವೀಕ್ಷಿಸಿದ ಸಚಿವರು, ನಂತರ ಮಾತನಾಡಿ, ರಾಜ್ಯ ಸರಕಾರ ಬೆಳೆಗಾರರಿಗೆ ಅಧಿಕಾರಿಗಳ ತಂಡದ ವರದಿ ಆಧÀರಿಸಿ ಆರ್ಥಿಕ ನೆರವು ನೀಡಲಾಗುವದು ಎಂದರು. ಮತ್ತೊಂದೆಡೆ ತೋಟಗಾರಿಕಾ ಇಲಾಖೆಯಿಂದ ಕಾಫಿ, ಕರಿಮೆಣಸು ಹಾನಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಸರ್ವೆ ನಡೆಸುತ್ತಿದ್ದಾರೆ ಎಂದರು.

ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಧರ್ಮಪ್ಪ, ತಾಲೂಕು ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ಸಚಿವರಿಗೆ ಮನವಿ ಸಲ್ಲಿಸಿ ಜಮ್ಮಾ ಹಿಡುವಳಿದಾರರು ಜಂಟಿ ಖಾತೆಯಲ್ಲಿ ಆರ್‍ಟಿಸಿ ಹೊಂದಿದ್ದು ಕೃಷಿ ಪರಿಹಾರ ಎಲ್ಲರಿಗೂ ನ್ಯಾಯಯುತವಾಗಿ ಸಿಗಬೇಕೆಂದು ಆಗ್ರಹಿಸಿದರು. ಕೊಡಗು ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕ ಡಾ. ರಾಜು, ಜಂಟಿ ನಿರ್ದೇಶಕ ಶಿವಕುಮಾರ್, ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ, ಸುಂಟಿಕೊಪ್ಪ ಕೃಷಿ ಅಧಿಕಾರಿ ಪಿ.ಎಸ್. ಬೋಪಯ್ಯ, ಕಂಬಿಬಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ, ಮಾಜಿ ಅಧ್ಯಕ್ಷ ಶಶಿಕಾಂತ್ ರೈ, ಚಂದ್ರಹಾಸ ರೈ, ಸಾವಯವ ಕೃಷಿಕ ಮಂಜುನಾಥ ರೈ ಹಾಜರಿದ್ದರು.

ಕೂಡಿಗೆ: ಜಿಲ್ಲೆಯ ಹಾರಂಗಿ-ಕಾವೇರಿ ನದಿ ದಡದಲ್ಲಿ ಕೃಷಿ ಭೂಮಿಗಳಲ್ಲಿನ ಬೆಳೆ ಹಾನಿಗೊಳಗಾಗಿ ನಷ್ಟದಲ್ಲಿರುವ ಪ್ರದೇಶಗಳಿಗೆ ರಾಜ್ಯ ಕೃಷಿ ಸಚಿವ ಎನ್.ಹೆಚ್. ಶಿವಶಂಕರ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದ ದಿವಾಕರ, ಚಂದ್ರಪ್ಪ, ಮಹೇಶ್ ಹಾಗೂ ಕೂಡಿಗೆ ಕಣಿವೆ ಮಧ್ಯ ಭಾಗದಲ್ಲಿ ಹಾನಿಯಾಗಿರುವ ಪ್ರದೇಶಗಳ ಪ್ರಕಾಶ, ಶಿವಮೂರ್ತಿ, ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಚಿಕ್ಕತ್ತೂರು ಗ್ರಾಮದ ರುಕ್ಮಿಣಿ, ಪದ್ಮಮ್ಮ, ಚನ್ನೇಗೌಡ, ಮರಿಯಪ್ಪ, ಆನಂದ, ಭುವನೇಶ್, ರಾಜು ಶೇಖರ್, ಶಿವಣ್ಣ, ಲೋಹಿತ್ ಎಂಬವರ ಕೃಷಿ ಭೂಮಿಗಳಿಗೆ ಭೇಟಿ ನೀಡಿ ಹಾನಿಯಾಗಿರುವದನ್ನು ವೀಕ್ಷಿಸಿದ ಸಚಿವರು ರೈತರ ಮನವಿಗೆ ಸ್ಪಂದಿಸಿದರು.

ನಂತರ ಕೃಷಿ ಇಲಾಖೆಯ ಕೃಷಿ ಭೂಮಿಗೆ ಭೇಟಿ ನೀಡಿ ವೀಕ್ಷಿಸಿದರು. ಈ ಸಂದರ್ಭ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ರಾಜು, ಜಿಲ್ಲಾ ಕೃಷಿ ನಿರ್ದೇಶಕ ಶಿವಕುಮಾರ್, ಸೋಮವಾರಪೇಟೆ ತಾಲೂಕು ಕೃಷಿ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಪೂಣಚ್ಚ ಕೂಡಿಗೆ ಕೃಷಿ ಕ್ಷೇತ್ರದ ಅಧಿಕಾರಿ ಮಾಧವರಾವ್, ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕ ಲೋಕೇಶ್, ಸಹಾಯಕ ತಾಂತ್ರಿಕ ಅಧಿಕಾರಿ ಶಾರಧಾ ಹಾಗೂ ಆ ಪ್ರದೇಶದ ಜನಪ್ರತಿನಿಧಿಗಳು ಇದ್ದರು.