ಮಡಿಕೇರಿ, ಆ. 29: ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರವು ಮನೆ ನಿರ್ಮಿಸಿಕೊಡಲು ಬದ್ಧವಾಗಿದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದ್ದಾರೆ.

ನಗರದ ಮೈತ್ರಿ ಹಾಲ್‍ನಲ್ಲಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಹಾರ ಕೇಂದ್ರದಲ್ಲಿ ನೆಲೆಸಿರುವ ನಿರಾಶ್ರಿತರ ಯೋಗಕ್ಷೇಮ ವಿಚಾರಿಸಿದ ಸಚಿವರು ನಿರಾಶ್ರಿತರಿಗೆ ಧೈರ್ಯ ತುಂಬಿದರು. ಪರಿಹಾರ ಕೇಂದ್ರದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಸಚಿವರು, ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದದಲ್ಲಿ ಕೃಷಿ, ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿದ್ದು, ತೀವ್ರ ಪ್ರಮಾಣದಲ್ಲಿ ಬೆಳೆ ನಷ್ಟ ಉಂಟಾಗಿದೆ. ಈ ಸಂಬಂಧ ಈಗಾಗಲೇ ಅಧಿಕಾರಿ ಗಳು ವರದಿ ಸಿದ್ದಪಡಿಸುತ್ತಿದ್ದು, ವರದಿ ನೀಡಿದ ಬಳಿಕ ಸಂಕಷ್ಟಕ್ಕೆ ಒಳಗಾದ ರೈತರಿಗೆ ಸೂಕ್ತ ಪರಿಹಾರವನ್ನು ನೀಡಲಾಗುವದು ಎಂದು ತಿಳಿಸಿದರು.

ಪರಿಹಾರ ಕೇಂದ್ರಗಳಲ್ಲಿರುವ ಮಕ್ಕಳಿಗೆ ಶಾಲೆಗಳನ್ನು ಆರಂಭಿಸಲಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವದೇ ತೊಂದರೆ ಉಂಟಾಗದ ರೀತಿಯಲ್ಲಿ ಕ್ರಮ ಕೈಗೊಂಡಿರುವದಾಗಿ ತಿಳಿಸಿದರು.

ಸುದ್ದಿಗೋಷ್ಠಿ: ತೀವ್ರ ಅತಿವೃಷ್ಟಿಯಿಂದ ಉಂಟಾಗಿರುವ ಕಾಫಿ ಬೆಳೆಯ ಹಾನಿ ಸಂಬಂದ ಈಗಾಗಲೇ ಕಾಫಿ ಬೋರ್ಡ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಷ್ಟದ ವರದಿಯನ್ನು 15 ದಿನದೊಳ ಗಾಗಿ ನೀಡುವಂತೆ ಸೂಚಿಸಿರುವದಾಗಿ ಕೃಷಿ ಸಚಿವ ಶಿವಶಂಕರ ರೆಡ್ಡಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು, ಈಗಾಗಲೇ ಅತಿವೃಷ್ಟಿಯಿಂದ ಉಂಟಾದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಹಾನಿ ಕುರಿತು ವರದಿ ಸಿದ್ಧಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಹೆಗ್ಗಡೆಹಳ್ಳಿ, ಕೂಡಿಗೆ, ಗುಡ್ಡೆಹೊಸೂರು, ಕಂಬಿಬಾಣೆ, ಇಗ್ಗೋಡ್ಲು, ಹಟ್ಟಿಹೊಳೆ, ಮಕ್ಕಂದೂರು, ಕಾಂಡನಕೊಲ್ಲಿ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಹಾನಿ ಸಂಬಂಧ ಪರಿಶೀಲನೆ ನಡೆಸಿರುವದಾಗಿ ಸಚಿವರು ತಿಳಿಸಿದರು.

ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಅಂದಾಜು 25 ಸಾವಿರ ಹೆಕ್ಟೆರ್ ಪ್ರದೇಶಗಳಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಾಶವಾಗಿದ್ದು, ಅಂದಾಜು 10 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಭತ್ತ, 4 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಮುಸುಕಿನ ಜೋಳ ನಾಶವಾಗಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಅವರು ತಿಳಿಸಿದರು.

ಅಂದಾಜು 11 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳ ನಷ್ಟ ಸಂಭವಿಸಿದ್ದು, 8 ಸಾವಿರ ಹೆಕ್ಟೆರ್ ಕಾಳು ಮೆಣಸು, 1500 ಹೆಕ್ಟೆರ್ ಅಡಿಕೆ ಬೆಳೆ, 600 ಹೆಕ್ಟೆರ್ ಶುಂಠಿ ಬೆಳೆ ನಾಶವಾಗಿರುವ ಬಗ್ಗೆ ಮಾಹಿತಿ ನೀಡಿದರು.

ಈಗಾಗಲೇ ಅಧಿಕಾರಿಗಳ ತಂಡವು ಬೆಳೆಹಾನಿ ಸಂಬಂಧ ವರದಿ ಸಿದ್ಧಪಡಿಸುತ್ತಿದ್ದು, ವರದಿ ಸಲ್ಲಿಸಿದ ಬಳಿಕ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವದು. ಜಿಲ್ಲೆಯ ಜನರೊಂದಿಗೆ ಸರ್ಕಾರ ಸದಾ ಇರುವದಾಗಿ ಸಚಿವರು ತಿಳಿಸಿದರು.