ಮಡಿಕೇರಿ, ಆ. 29: ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಹೆಚ್ಚುವರಿ ಕಾಲವಕಾಶ ನೀಡುವಂತೆ ಕೊಡಗು ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ.ವ್ಯಾಲಿವ್ಯೂ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿಗಳು ತಾ. 31 ಕೊನೆಯ ದಿನಾಂಕ ಎಂದು ಪ್ರಕಟಿಸಿದ್ದಾರೆ. ಆದರೆ ಮನೆ ಕಳೆದುಕೊಂಡ ಅದೆಷ್ಟೋ ಕುಟುಂಬಗಳು ಬೇರೆ ಬೇರೆ ಕಡೆಗಳಲ್ಲಿ ನೆಲೆಸಿದ್ದು, ತಾ. 31ರೊಳಗೆ ಅರ್ಜಿ ಸಲ್ಲಿಸಲು ಅಸಾಧ್ಯ. ಆದ್ದರಿಂದ ಅರ್ಜಿ ಸಲ್ಲಿಕೆಗೆ 15 ದಿನಗಳ ಹೆಚ್ಚಿನ ಕಾಲಾವಕಾಶವನ್ನು ಜಿಲ್ಲಾಧಿಕಾರಿಗಳು ನೀಡಬೇಕು ಎಂದು ಮನವಿ ಮಾಡಿದರು.

ಕೊಡಗಿನಲ್ಲಿ ಉಂಟಾಗಿರುವ ಅತಿವೃಷ್ಟಿಯ ಕುರಿತು ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸುವ ಮುನ್ನ ಜಿಲ್ಲಾಧಿಕಾರಿಗಳು ಸರ್ವ ಪಕ್ಷಗಳ ಸಭೆ ಕರೆದು ವರದಿಯ ಕುರಿತು ಮಾಹಿತಿ ನೀಡಿ ಎಲ್ಲರ ಒಪ್ಪಿಗೆ ಪಡೆದು ನಂತರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತಾದರೆ (ಮೊದಲ ಪುಟದಿಂದ) ಉತ್ತಮ ಎಂದು ಶಿವು ಮಾದಪ್ಪ ಹೇಳಿದರು. ಮಳೆಯಿಂದಾಗಿ ಹೊಳೆ - ನದಿ ಬದಿಗಳಲ್ಲಿ ವಾಸವಿರುವ ಕುಟುಂಬಗಳನ್ನು ಜಿಲ್ಲಾಡಳಿತ ಬದಲಿ ವ್ಯವಸ್ಥೆ ಕಲ್ಪಿಸಿ ಸ್ಥಳಾಂತರ ಮಾಡಬೇಕು. ಪ್ರಸ್ತುತ ಪರಿಹಾರ ಕೇಂದ್ರಗಳಲ್ಲಿರುವ ಕುಟುಂಬಗಳ ಮನೆಗಳ ಪೈಕಿ ಸಂಪೂರ್ಣ ಹಾನಿಯಾಗದ ಹಾಗೂ ಮುಂದೆ ಬದುಕು ಸಾಗಿಸಬಹುದಾದ ಮನೆಗಳಿದ್ದರೆ ಅಂತಹ ಕುಟುಂಬಗಳಿಗೆ ಅಲ್ಲಿಯೇ ಬದುಕಲು ಅವಕಾಶ ಕಲ್ಪಿಸಬೇಕು.

ಒತ್ತಾಯದಿಂದ ತೆರವುಗೊಳಿಸ ಬಾರದು. ಒಂದು ಭೂ ವಿಜ್ಞಾನಿಗಳು ಆ ಸ್ಥಳ ಸುರಕ್ಷಿತವಲ್ಲ ಎಂದು ವರದಿ ನೀಡಿದರೆ ಅದನ್ನು ಸಂಬಂಧಿಸಿದ ಕುಟುಂಬಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಬೇಕು. ಹೊರತಾಗಿ ವಾಸಕ್ಕೆ ಯೋಗ್ಯ ಮನೆಗಳ ಜನರನ್ನು ಒತ್ತಾಯಪೂರ್ವಕವಾಗಿ ತೆರವು ಮಾಡಬಾರದೆಂದು ಶಿವು ಮಾದಪ್ಪ ಹೇಳಿದರು. ಕೊಡಗಿನಲ್ಲಿ ಮಳೆಯಿಂದ ಉಂಟಾದ ಸಾವು - ನೋವಿಗೆ ಜಿಲ್ಲಾ ಕಾಂಗ್ರೆಸ್ ವಿಷಾದಪಡಿಸುತ್ತದೆ ಎಂದರು.

ಗೋಷ್ಠಿಯಲ್ಲಿ ಟಿ.ಪಿ. ರಮೇಶ್, ಕೆ.ಪಿ. ಚಂದ್ರಕಲಾ, ಕೆ.ಕೆ. ಮಂಜುನಾಥ್, ಕೊಲ್ಯದ ಗಿರೀಶ್, ಅಪ್ರು ರವೀಂದ್ರ, ನಟೇಶ್ ಗೌಡ, ತೆನ್ನೀರ ಮೈನಾ ಮತ್ತಿತರರಿದ್ದರು.