ಸೋಮವಾರಪೇಟೆ, ಆ.29: ಪ್ರಸಕ್ತ ಸಾಲಿನ ಮಹಾಮಳೆಯಿಂದ ಉಂಟಾದ ಬೆಳೆ ಹಾನಿಯನ್ನು ಅಂದಾಜಿಸಲು ಸರ್ವೆ ಕಾರ್ಯ ಆರಂಭಗೊಂಡಿದ್ದು, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಪ್ರತ್ಯೇಕವಾಗಿ ಸಮೀಕ್ಷೆ ನಡೆಸುತ್ತಿವೆ.

ಹೋಬಳಿವಾರು ಅಧಿಕಾರಿಗಳ ತಂಡ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದು, ಕಾಫಿ ಮಂಡಳಿಯ ಅಧಿಕಾರಿಗಳು ಮುಂದಿನ ವಾರ ಸಮೀಕ್ಷೆ ನಡೆಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಚಾಮರಾಜನಗರ, ದಾವಣಗೆರೆ, ಮಂಡ್ಯ, ತುಮಕೂರು ಜಿಲ್ಲೆಗಳಿಂದ 54 ಮಂದಿ ಹೆಚ್ಚುವರಿ ಅಧಿಕಾರಿಗಳು ಕೊಡಗಿಗೆ ಆಗಮಿಸಿದ್ದು, ಸ್ಥಳೀಯ ಅಧಿಕಾರಿಗಳನ್ನು ಒಳಗೊಂಡಂತೆ ಒಟ್ಟು 74 ಅಧಿಕಾರಿಗಳು ಪರಿಶೀಲನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದರಲ್ಲಿ 31 ಮಂದಿ ಸೋಮವಾರಪೇಟೆಗೆ ನಿಯೋಜನೆಗೊಂಡಿದ್ದು, ಕಳೆದೆರಡು ದಿನಗಳಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಬೆಳೆಹಾನಿ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಇದರಲ್ಲಿ 11 ಮಂದಿ ಸ್ಥಳೀಯ ಅಧಿಕಾರಿಗಳಿದ್ದು, 20 ಮಂದಿ ಹೊರ ಜಿಲ್ಲೆಯವರಾಗಿದ್ದಾರೆ. ಇವರನ್ನು ತಾಲೂಕಿನ 6 ಹೋಬಳಿಗೆ ತಂಡಗಳನ್ನಾಗಿ ವಿಂಗಡಿಸಲಾಗಿದೆ.

ಇಲಾಖೆಯಿಂದಲೇ ಆವಿಷ್ಕರಿಸಲಾಗಿರುವ ಮೊಬೈಲ್ ಆ್ಯಪ್‍ನಲ್ಲಿ ಹಾನಿಯ ಬಗ್ಗೆ ದಾಖಲಿಸಲಾಗುತ್ತಿದೆ. ತಾಲೂಕಿನಾದ್ಯಂತ ಶೇ.33ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಬೆಳೆಹಾನಿಯಾಗಿರುವ ಬಗ್ಗೆ ಅಧಿಕಾರಿಗಳು ಮೊಬೈಲ್ ಆ್ಯಪ್‍ನಲ್ಲಿ ದಾಖಲಿಸುತ್ತಿದ್ದಾರೆ. ಕೆಲವು ಪ್ರದೇಶಗಳಲ್ಲಿ ಶೇ. 60, ಇನ್ನುಳಿದ ಪ್ರದೇಶಗಳಲ್ಲಿ ಶೇ.100ರಷ್ಟು ಹಾನಿಯಾಗಿದ್ದು, ಈ ಪ್ರದೇಶಗಳಿಗೆ ಇನ್ನಷ್ಟೇ ಅಧಿಕಾರಿಗಳ ತಂಡ ತೆರಳಬೇಕಿದೆ.

ಪ್ರತಿ ಅಧಿಕಾರಿ ಮೊಬೈಲ್‍ಗೂ ಈ ಆ್ಯಪ್‍ನ್ನು ಅಳವಡಿಸಲಾಗಿದ್ದು, ಸ್ಥಳದಲ್ಲೇ ಮಾಹಿತಿ ದಾಖಲಿಸುತ್ತಿದ್ದಾರೆ. ಇದರೊಂದಿಗೆ ಇಲಾಖೆಯಿಂದ ಹೋಬಳಿಗೊಂದರಂತೆ ಪವರ್ ಬ್ಯಾಂಕ್ ವಿತರಿಸಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ಮಾಹಿತಿ ನೀಡಿದ್ದಾರೆ.

ಕೃಷಿ ಇಲಾಖೆಗೆ ಈಗಾಗಲೇ 4 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿ ಸಲ್ಲಿಸದೇ ಇರುವ ಕೃಷಿಕರ ಬೆಳೆಗಳನ್ನೂ ಸಹ ಮೊಬೈಲ್ ಆ್ಯಪ್ ಮೂಲಕ ಪರಿಶೀಲಿಸಲಾಗುತ್ತಿದೆ. ತಾಲೂಕಿನ ಕೃಷಿಕರ ಭತ್ತ ಮತ್ತು ಮುಸುಕಿನ ಜೋಳ ಹಾನಿ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ರಾಜಶೇಖರ್ ತಿಳಿಸಿದ್ದಾರೆ.

ತೋಟಗಾರಿಕಾ ಇಲಾಖೆಯಿಂದ: ತೋಟಗಾರಿಕಾ ಇಲಾಖೆಯಿಂದಲೂ ಸರ್ವೆ ಕಾರ್ಯ ಆರಂಭವಾಗಿದೆ. ತಕ್ಷಣಕ್ಕೆ 10 ಮಂದಿ ಅಧಿಕಾರಿಗಳು ಪರಿಶೀಲನಾ ಕಾರ್ಯದಲ್ಲಿ ತೊಡಗಿದ್ದು, ಸ್ಥಳೀಯ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಸೋಮವಾರಪೇಟೆ ಕಸಬ ಮತ್ತು ಶಾಂತಳ್ಳಿ ಹೋಬಳಿಗೆ ತಲಾ ಓರ್ವ ಅಧಿಕಾರಿ, ಉಳಿದ 4 ಹೋಬಳಿಗಳಿಗೆ ತಲಾ ಈರ್ವರು ಅಧಿಕಾರಿಗಳನ್ನು ಸದ್ಯಕ್ಕೆ ನಿಯೋಜಿಸಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಮುತ್ತಪ್ಪ ತಿಳಿಸಿದ್ದಾರೆ. ತೋಟಗಾರಿಕಾ ಇಲಾಖೆಯಿಂದ ಕರಿಮೆಣಸು, ಶುಂಠಿ, ಬಾಳೆ, ಅಡಿಕೆ, ತೆಂಗು, ತರಕಾರಿ ಸೇರಿದಂತೆ ಇತರ ಬೆಳೆಗಳ ನಷ್ಟದ ಬಗ್ಗೆ ವರದಿ ಸಲ್ಲಿಸಲಾಗುತ್ತಿದೆ.

ತೋಟಗಾರಿಕಾ ಇಲಾಖೆಗೆ ವಾಹನಗಳ ಅವಶ್ಯಕತೆಯಿದ್ದು, ಹೆಚ್ಚುವರಿ ವಾಹನಗಳನ್ನು ಒದಗಿಸಬೇಕಿದೆ ಎಂಬ ಅಭಿಪ್ರಾಯ ಕೃಷಿಕರಿಂದ ಕೇಳಿಬಂದಿದೆ.

ಕಾಫಿ ಮಂಡಳಿಯಿಂದ ಆಗಬೇಕಿದೆ ಸರ್ವೆ: ಕಾಫಿ ಮಂಡಳಿ ಮತ್ತು ಸಂಬಾರ ಮಂಡಳಿಯಿಂದ ಮುಂದಿನ ವಾರದಲ್ಲಿ ಜಂಟಿ ಪರಿಶೀಲನೆ ನಡೆಸಲಾಗುತ್ತದೆ. ಕಾಫಿ ಮಂಡಳಿಯ ನಿರ್ದೇಶಕರು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಯಾವ ಮಾನದಂಡದಡಿ ಪರಿಶೀಲನೆ ನಡೆಸಬೇಕೆಂಬ ಬಗ್ಗೆ ನಿರ್ದೇಶನ ಬಂದ ನಂತರ ಸಮೀಕ್ಷೆ ನಡೆಸಲಾಗುವದು ಎಂದು ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರಳೀಧರ್ ತಿಳಿಸಿದ್ದಾರೆ.

ಈ ಹಿಂದೆ ಕಾಫಿ ಮಂಡಳಿಗೆ ಸಲ್ಲಿಕೆಯಾಗಿದ್ದ ಪರಿಹಾರ ಅರ್ಜಿಗಳನ್ನು ತಾಲೂಕು ಕಚೇರಿಗೆ ಕಳುಹಿಸಲಾಗಿದೆ. ಇದೀಗ ಕಚೇರಿಗೆ ಬರುತ್ತಿರುವ ಬೆಳೆಗಾರರಿಗೆ ತಾಲೂಕು ಕಚೇರಿಯಲ್ಲೇ ಅರ್ಜಿ ಸಲ್ಲಿಸುವಂತೆ ತಿಳಿಸಲಾಗುತ್ತಿದೆ. ಈವರೆಗೆ 700ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿಯಿತ್ತಿದ್ದಾರೆ.