ಸಿನೆಮಾಗಳಲ್ಲಿ ಕಾಲ್ಪನಿಕ ವಿಕೋಪ ದೃಶ್ಯ ಸೃಷ್ಟಿಸಿ ಕಟ್ಟಡಗಳು ಮುಳುಗುವದು, ವಾಹನಗಳು ಎಸೆಯಲ್ಪಡುವದು, ಸೇತುವೆಗಳು ಕುಸಿಯುವದು, ರಸ್ತೆ ಇಬ್ಭಾಗವಾಗುವದು, ಜನ ಅತಂತ್ರರಾಗುವದನ್ನು ನಾವು ನೋಡುತ್ತಿದ್ದೆವು.ಇಂತಹ ಸನ್ನಿವೇಶ ಅಸಹಜ ಎಂದು ಆಗ ಅನಿಸಿದ್ದರೂ, ಸುಪ್ತ ಮನಸ್ಸಿಗೆ ಸಿಗುವ ಅವ್ಯಕ್ತ ಕುರುಹಿನಿಂದಲೋ ಏನೋ, ಅಂತಹ ಸಿನೆಮಾಗಳನ್ನು ಮತ್ತೆ ಮತ್ತೆ ನೋಡಿ ಸಂತಸವೂ ಅಲ್ಲದ, ದುಃಖವೂ ಅಲ್ಲದ ಬೆಪ್ಪು ಮೌನ ವಹಿಸುತ್ತಿದ್ದೆವು.

2001, ಜನವರಿ 26 ರಂದು 52ನೇ ಪ್ರಜಾಪ್ರಭುತ್ವ ದಿನ ಆಚರಿಸಲು ದೇಶ ಸಜ್ಜಾಗಿತ್ತು. ಬೆಳಿಗ್ಗೆ 8.46ಕ್ಕೆ ರಿಕ್ಟರ್ ಮಾಪಕ 7.7 ರಿಕ್ಟರ್ ಪ್ರಮಾಣದ ಭೂಕಂಪ ಗುಜರಾತಿನ ಕುಚ್ ಜಿಲ್ಲೆ, ಅಹ್ಮದಾಬಾದ್ ಮತ್ತು ಚೊಬಾರಿ ಗ್ರಾಮಗಳನ್ನು ನಲುಗಿಸಿತು. ಕೇವಲ ಎರಡು ನಿಮಿಷ. ನಾಲ್ಕು ಲಕ್ಷ ಮನೆ-ಮಂದಿರಗಳು, ಭಾರೀ ಕಟ್ಟಡಗಳು, ರಸ್ತೆ, ಸೇತುವೆಗಳು ನೆಲಕಚ್ಚಿದವು. ಕಣ್ಮುಚ್ಚಿ ತೆರೆಯುವದರೊಳಗೆ 13,805 ಮಂದಿ ಅಸುನೀಗಿದರು. 1,67,000 ಮಂದಿಗೆ ಗಾಯಗಳಾದವು. ಪಟ್ಟಣ, ಗ್ರಾಮಗಳು ಸರ್ವನಾಶವಾದವು.2004, ಡಿಸೆಂಬರ್ 26. ಸಮುದ್ರದೊಳಗೆ 9.1 ರಿಂದ 9.3 ರಿಕ್ಟರ್ ಪ್ರಮಾಣದ ಭೂಕಂಪವಾಯಿತು. ಕೇಳಿ-ಕಂಡರಿಯದ ಆಘಾತ, ಸಮುದ್ರ ತೀರದ ಪಟ್ಟಣಗಳು, ಜನ-ಕಟ್ಟಡಗಳು, ಹಡಗುಗಳು-ದೋಣಿಗಳು ಕೊಚ್ಚಿ ಹೋಗಲಾರಂಭವಾದಾಗಲಷ್ಟೇ ಗೊತ್ತಾದುದು ಕಣ್ಣೆದುರು ನೂರಡಿ ಎತ್ತರದ ಗೋಡೆಯಂತೆ ಧಾವಿಸಿ ಬರುತ್ತಿರುವದು ಸುನಾಮಿ ಅಲೆ ಎಂದು.

ಚರಿತ್ರೆ ಕಂಡ ಭೀಕರ ಪ್ರಕೃತಿ ವಿಕೋಪದಲ್ಲಿ, ಕ್ಷಣಾರ್ಧದಲ್ಲಿ, ಭಾರತ, ಇಂಡೋನೇಷಿಯಾ, ಶ್ರೀಲಂಕಾ ಹಾಗೂ ಇತರ ಹಲವು ದೇಶಗಳಲ್ಲಿ ಸುಮಾರು 23 ಲಕ್ಷ ಮಂದಿ ಅಸುನೀಗಿದರು. ಒಟ್ಟು ಸುಮಾರು ಇಪ್ಪತ್ತು ಬಿಲಿಯ ಡಾಲರ್‍ನಷ್ಟು ನಷ್ಟ ಅಂದಾಜಿಸಲಾಯಿತು. ಭಾರತದಲ್ಲಿ 10,136 ಮಂದಿ ಅಸುನೀಗಿದರು.

ಆಗಸ್ಟ್ 16, 2018. ನೆಮ್ಮದಿಯ ತಾಣ ಎಂದು ಭಾವಿಸಿದ್ದ ಕೊಡಗಿನಲ್ಲಿ ಪ್ರಕೃತಿ ಮೈಕೊಡವಿದ್ದಾಳೆ. ಬೆಟ್ಟಗಳೇ ಕುಸಿದು ಕೆಸರಿನ ಪ್ರವಾಹ ಸೃಷ್ಟಿಸಿವೆ. ಹತ್ತಾರು ಜೀವ, ನೂರಾರು ಸಾಕುಪ್ರಾಣಿಗಳು, ಕನಸಿನ ಸೌಧಗಳು, ಪಿತ್ರಾರ್ಜಿತ ಆಸ್ತಿ, ತೋಟಗಳು, ಗದ್ದೆ, ರಸ್ತೆ, ಸೇತುವೆಗಳು ಕಣ್ಣೆದುರೇ ಕೊಚ್ಚಿ ಹೋಗಿವೆ. ಕೊಡಗಿನಲ್ಲಿ ಉಂಟಾದುದು ನಷ್ಟ ಎನ್ನುವದಕ್ಕಿಂತ ಜನರ ಬಾಳನ್ನೇ ಪ್ರಕೃತಿ ಕಿತ್ತೆಸೆದಂತಾಗಿದೆ. ಹಾಲುಣುವ ಮಕ್ಕಳು, ತಾಯಂದಿರು, ಕುಟುಂಬದ ಹಿರಿಯ ಜೀವಿಗಳು, ಬೆಳೆಗಾರರು, ಕಾರ್ಮಿಕರು, ಕೆಚ್ಚೆದೆಯ ತರುಣ-ತರುಣಿಯರು ಇಂದು ನಿರಾಶ್ರಿತ ತಾಣಗಳಲ್ಲಿ ಒರೆಸಲಾರದ ಸ್ವಾಭಿಮಾನದ ಕಣ್ಣೀರನ್ನು ಮರೆಮಾಡಿ, ಮುಖ ತಿರುಗಿಸಿ, ಹೊತ್ತು ಊಟಕ್ಕೆ ಕೈ ಒಡ್ಡುತ್ತಿದ್ದಾರೆ. ನಾಳೆ ಸರಕಾರ ಈ ತಾಣಗಳಿಂದ ಹೋಗಿ ಎಂದರೆ ಹೋಗುವದಾದರೂ ಎಲ್ಲಿಗೆ ಎಂದು ತಿಳಿದಿಲ್ಲ. ತೊಡಲು ಬಟ್ಟೆಗಳಿಲ್ಲ, ಇರಲು ಸೂರಿಲ್ಲ, ಮುಂದೆ ಹೇಗೆ ಎಂಬ ಭರವಸೆ ಇಲ್ಲ, ಮಕ್ಕಳ ಓದು, ಮದುವೆ ಹೇಗೆ, ಏನು ಎಂದು ತಿಳಿದಿಲ್ಲ.

2001ರ ಗುಜರಾತ್ ಭೂಕಂಪದ ಬಳಿಕ ನಾಲ್ಕು ತಿಂಗಳೊಳಗೆ ನಾಶಗೊಂಡ ನಗರ, ಗ್ರಾಮಗಳ ಪುನರ್ ನಿರ್ಮಾಣಕ್ಕೆ 1.77 ಬಿಲಿಯನ್ ಡಾಲರ್ ವಿಸ್ತøತ ಯೋಜನೆ ತಯಾರಾಯಿತು. ಯೋಜನೆಯಲ್ಲಿ ಕಟ್ಟಡಗಳ ಮರು ನಿರ್ಮಾಣ, ಗೃಹ ಯೋಜನೆ, ರಸ್ತೆ, ಸೌಲಭ್ಯಗಳು, ಆರೋಗ್ಯ ಹಾಗೂ ವ್ಯಾಪಾರಗಳಿಗೆ ಬೆಂಬಲ ಯೋಜನೆ ರೂಪಿಸಲಾಯಿತು. ಕುಸಿದಿರುವ ಮಣ್ಣು, ಕಟ್ಟಡಗಳ ತೆರವು ಕಾರ್ಯವೂ ಯೋಜನೆಯ ಒಂದಂಶ.

ನಾಶಗೊಂಡಿದ್ದ ಗುಜರಾತಿನ ನಗರ, ಗ್ರಾಮಗಳು ಇಂದು ತಲೆ ಎತ್ತಿ ನಿಂತಿವೆ. ಜನ ಹೊಸ ಜೀವನ ನಡೆಸುತ್ತಿದ್ದಾರೆ.

2004ರ ಸುನಾಮಿ ಪ್ರಳಯದ ನಷ್ಟ 15 ಬಿಲಿಯ ಎಂದು ಅಂದಾಜಿಸಲಾಯಿತು. ಇಂದು ನಾಶಗೊಂಡಿದ್ದ ಎಲ್ಲ ಸಮುದ್ರ ತೀರದ ನಗರಗಳೂ ನವೋತ್ಸಾಹದಿಂದ ಮೇಲೆದ್ದಿವೆ.

ಕೊಡಗು ಭಾರತದ ಹೆಮ್ಮೆಯ ಜಿಲ್ಲೆ. ಕಾವೇರಿ-ಅಗಸ್ತ್ಯರ ಪುಣ್ಯಭೂಮಿ. ಕೊಡಗು ರೆಜಿಮೆಂಟಿನ ಸೇನಾನಿಗಳು ಅಂದು ದೇಶ-ವಿದೇಶದ ನೆಲಗಳಲ್ಲಿ ಹೋರಾಡಿದವರು. ದೇಶ ರಕ್ಷಣೆಯಲ್ಲಿ, ದೇಶದ ಗೌರವ ಎತ್ತಿ ಹಿಡಿಯುವಲ್ಲಿ, ಕೀರ್ತಿ ತರುವಲ್ಲಿ ಬಹುಪಾತ್ರ ಹೊಂದಿರುವವರು.

ಚಾರಿತ್ರಿಕ, ಭೌಗೋಳಿಕ ವೈಶಿಷ್ಟ್ಯವುಳ್ಳ ಕೊಡಗಿನ ಪ್ರಭೆ ಇಂದು ಕಮರಿದೆ. ಪುಟ್ಟ ಜಿಲ್ಲೆಗೆ ಒದಗಿ ಬಂದ ಆಪತ್ತನ್ನು ಕೇಂದ್ರ, ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ ಪುನರ್ ನಿರ್ಮಾಣಕ್ಕೆ ಮುಂದಾಗಲಿ. ವೈಜ್ಞಾನಿಕ ಚಿಂತನೆ, ಮುಂದಾಲೋಚನೆ ಇಲ್ಲದೆ ಸರಕಾರ ಅಷ್ಟು ಕೋಟಿ ನೀಡಲಿ, ಇಷ್ಟು ಕೋಟಿ ನೀಡಲಿ ಎಂದು ಜನ ಲೆಕ್ಕಾಚಾರವಿಲ್ಲದೆ ಬೇಕಾಬಿಟ್ಟಿ ಬೇಡಿಕೆ ಇರಿಸಿ ಗೊಂದಲ ಸೃಷ್ಟಿಸದಿರಲಿ.

ಗುಜರಾತ್ ಪುನರ್ ನಿರ್ಮಾಣ ಹಾಗೂ ಸುನಾಮಿ ಬಳಿಕದ ಯೋಜನೆಗಳಿಗೆ ವಿದೇಶೀ ನೆರವನ್ನೂ ಪಡೆಯಲಾಗಿದೆ. ವಿಶ್ವ ಬ್ಯಾಂಕ್ ಕೂಡ ಸಹಕಾರ ನೀಡಿದೆ.

ನಮ್ಮ ಜನಪ್ರತಿನಿಧಿಗಳು, ಪ್ರಜ್ಞಾವಂತರು, ಸಂಘ ಸಂಸ್ಥೆಗಳು, ತಜ್ಞರು, ಸರಕಾರದೊಡಗೂಡಿ, ಒಗ್ಗೂಡಿ ಜಿಲ್ಲೆಯ ಸಮಗ್ರ ಪುನರ್ ನಿರ್ಮಾಣಕ್ಕೆ ಮೊದಲು ಯೋಜನೆ ರೂಪಿಸಬೇಕಿದೆ.

ಕಳೆದುಕೊಂಡ ನೆಲಕ್ಕೆ ಸಮನಾದ ನೆಲ, ಮನೆ ಒದಗಿಸುವದರೊಂದಿಗೆ ಸಂತ್ರಸ್ತರ ಬೆಂಬಲಕ್ಕೆ ಆರು ತಿಂಗಳು-ಒಂದು ವರುಷಕ್ಕೆ ಬೇಕಾಗುವ ದವಸ-ಧಾನ್ಯ ಒದಗಿಸಬೇಕು. ಪದವಿ ತನಕ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡಬೇಕು. ಪದವೀಧರರಿಗೆ, ಕಾರ್ಮಿಕರಿಗೆ ನೌಕರಿ ಒದಗಿಸಬೇಕು. ಇದಕ್ಕಾಗಿ ಟಾಟಾ, ಇನ್‍ಫೋಸಿಸ್ ಇತ್ಯಾದಿ ಬಲಾಢ್ಯರನ್ನು ಜೊತೆಗೂಡಿಸಿಕೊಳ್ಳಬೇಕು.

ಕೃಷಿ ಹಾಗೂ ಉದ್ಯಮಕ್ಕೆ ದೀರ್ಘಾವಧಿಯ ಬಡ್ಡಿ ರಹಿತ ಸಾಲ ಒದಗಿಸಬೇಕು. ಬೆಳೆಗಳಿಗೆ ಬೆಂಬಲ ಬೆಲೆಯನ್ನು ಕಡ್ಡಾಯವಾಗಿ ಘೋಷಿಸಿ, ಜಾರಿಗೊಳಿಸಬೇಕು.

ಅನುಮತಿ ಇಲ್ಲದ ಪ್ರವಾಸೋದ್ಯಮ, ಹೋಂಸ್ಟೇ, ರೆಸಾರ್ಟ್ ಚಟುವಟಿಕೆಗೆ ಕಡಿವಾಣ ಹಾಕಿ ಸೂಕ್ತ ನಿಯಮ ರೂಪಿಸಬೇಕು. ಮಂಗಳೂರು, ಬೆಂಗಳೂರು, ಕೇರಳದ ಹೆದ್ದಾರಿಗಳೊಂದಿಗೆ, ಗ್ರಾಮಗಳಿಗೂ ಇರುವ ರಸ್ತೆ ರಿಪೇರಿಯೊಂದಿಗೆ ಉತ್ತಮ ಗುಣಮಟ್ಟದ ಪರ್ಯಾಯ ರಸ್ತೆಗಳನ್ನು ನಿರ್ಮಿಸಬೇಕು. ಎಲ್ಲ ಮುಖ್ಯ ರಸ್ತೆಗಳ ಬದಿಗಳಲ್ಲಿ ಅಪಾಯ ಒಡ್ಡುವ ಬರೆಗಳಿಗೆ ಭದ್ರ ತಡೆಗೋಡೆ ನಿರ್ಮಿಸಬೇಕು.

ಆದ್ಯತೆಯ ಆಧಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕಣ್ಣೊರೆಸುವ ತಂತ್ರ ಮಾಡದೆ, ಅಂದಾಜು ವೆಚ್ಚ, ಮಿಲಿಯವಾಗಲಿ, ಬಿಲಿಯವಾಗಲಿ ಕಡ್ಡಾಯವಾಗಿ ಬೃಹತ್ ಯೋಜನೆ ರೂಪಿಸಲೇಬೇಕು.

ಇಂದು ಸಂತ್ರಸ್ತರ ರಕ್ಷಣೆಗೆ ನೀರು, ಕೇಸರಿನಲ್ಲಿ ನಿತ್ಯ ಓಡಾಡುತ್ತಿರುವ ಶ್ಲಾಘನೀಯ ಶಾಸಕರುಗಳು, ಉಸ್ತುವಾರಿ ಸಚಿವರು, ಜಿಲ್ಲೆಯ ಅಧಿಕಾರಿಗಳು ವಿಸ್ತøತ ಯೋಜನೆ ರೂಪಿಸುವಲ್ಲಿಯೂ ಶ್ರಮಪಟ್ಟಲ್ಲಿ ಕೊಡಗು ಮತ್ತೆ ತಲೆ ಎತ್ತಿ ನಿಲ್ಲಲಿದೆ. ದೇಶಕ್ಕೆ ಮತ್ತಷ್ಟು ಮೆರುಗು ಬರಲಿದೆ.

ಜೊತೆಗೆ ಬೆಳೆಗಾರರ, ಕಾರ್ಮಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಆನೆಗಳನ್ನು ಬೇರೆಡೆಗೆ ಸಾಗಾಟ ಮಾಡಿ, ಬೆರಳೆಣಿಕೆಯ ಆನೆಗಳನ್ನು ಮಾತ್ರ ಉಳಿಸಿಕೊಳ್ಳಲಿ. ಅವುಗಳ ವಂಶಾಭಿವೃದ್ಧಿಗೂ ಕಡಿವಾಣ ಹಾಕಲಿ. ‘ಆನೆ ಓಡಿಸುವ ಕಾರ್ಯಾಚರಣೆ’ ಎಂಬ ಹುಚ್ಚಾಟ ನಿಲ್ಲಿಸಿ ಶಾಶ್ವತ ಕಾರ್ಯಕ್ರಮ ರೂಪುಗೊಳ್ಳಲಿ.

-ಬಿ.ಜಿ. ಅನಂತಶಯನ, ಸಲಹಾ ಸಂಪಾದಕ