ಮಡಿಕೇರಿ, ಆ. 29: ಜಿಲ್ಲೆ ಅತಿವೃಷ್ಟಿಗೆ ತತ್ತರಿಸಿದೆ. ಅದರಲ್ಲೂ ಭೂಕುಸಿತದಿಂದ ನಲುಗಿ ಹೋಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಹಿಡಿದು, ಸಂಘ-ಸಂಸ್ಥೆಗಳು, ಜನಸಾಮಾನ್ಯರು ಕೂಡ ಸಂತ್ರಸ್ತರ ನೆರವಿಗೆ ಪಣ ತೊಟ್ಟಿದ್ದಾರೆ. ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗಳಂತೂ 24 ಗಂಟೆಯೂ ಮಳೆ-ಚಳಿಯಲ್ಲಿ, ಅಪಾಯ ಲೆಕ್ಕಿಸದೆ ಶ್ರಮಿಸುತ್ತಿದ್ದಾರೆ.

ಇತ್ತ ಕಚೇರಿಗಳಲ್ಲಿರುವವರೂ ಕೂಡ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದಿದ್ದಾರೆ. ಎಸ್ಪಿ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೈಜೋಡಿಸಿ ಮದೆನಾಡು, ಮಾದಾಪುರ, ಬ್ರಾಹ್ಮಣ ಕಲ್ಯಾಣ ಮಂಟಪಗಳ ಆಶ್ರಯ ಪಡೆದಿದ್ದ ಸಂತ್ರಸ್ತರಿಗೆ ಚಪ್ಪಲಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.