ಕೂಡಿಗೆ, ಆ. 29 : ಹಾರಂಗಿ ಅಣೆಕಟ್ಟೆಯಿಂದ ಕಣಿವೆವರೆಗೆ ಮುಖ್ಯ ನಾಲೆಯಾಗಿರುವ ಹಾರಂಗಿ ನಾಲೆಯ ಹುದುಗೂರು ಸಮೀಪದ ಮುಖ್ಯ ನಾಲೆಯ ತಿರುವಿನಲ್ಲಿ ಆಕ್ವಡೇಟ್(ಮೇಲ್ಗಾಲುವೆ) ನಿರ್ಮಾಣ ಮಾಡಲಾಗಿದೆ. ಹಾರಂಗಿ ಅಣೆಕಟ್ಟೆಯಿಂದ ಮುಖ್ಯನಾಲೆಯ ತಿರುವಿನಲ್ಲಿ ಆಗಿನ ನೀರಿನ ಹರಿಸುವ ಪ್ರಮಾಣಕ್ಕೆ ಅನುಗುಣವಾಗಿ ಆಕ್ವಡೇಟ್ ನಿರ್ಮಿಸಲಾಗಿದೆ. ನಂತರ ಹಾರಂಗಿ ಬಲದಂಡೆ ನಾಲೆಯ ಮೂಲಕ ಮೈಸೂರು ಜಿಲ್ಲೆಯ ಕರಡಿಲಕ್ಕನ ಕೆರೆಯ ಏತನೀರಾವರಿಗೆ ನೀರು ಹರಿಸುವ ಉದ್ದೇಶ ಹಾಗೂ ಹುಣಸೂರಿನವರೆಗೆ ರೈತರಿಗೆ ನೀರು ತಲಪಿಸುವ ಯೋಜನೆಯಿಂದ ಮುಖ್ಯನಾಲೆಯಲ್ಲಿ 1500 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಮುಖ್ಯನಾಲೆಯಲ್ಲಿ ಹೆಚ್ಚುವರಿ ನೀರು ಹರಿಸುವಿಕೆಯಿಂದಾಗಿ ಮತ್ತು ತಿರುವು ಇರುವದರಿಂದ ನೀರಿನ ಕೊರಯುವಿಕೆ ಹೆಚ್ಚಾಗಿ ನೀರು ಕೆಳಭಾಗದಲ್ಲಿ ಸೋರಿಕೆಯಾಗುತ್ತಿದ್ದು, ಆಕ್ವಡೇಟ್ ಕೆಳಭಾಗದಲ್ಲಿ ಬಿರುಕು ಬಿಟ್ಟಿದ್ದು, ಹಳ್ಳಕ್ಕೆ ನೀರು ಹರಿಯುತ್ತಿದ್ದು, ರೈತರ ಜಮೀನಿಗೆ ಹೆಚ್ಚು ನೀರು ನುಗ್ಗುತ್ತಿದೆ. ನೀರಿನ ಒತ್ತಡದಿಂದಾಗಿ 1995ರಲ್ಲಿ ಒಂದು ಬಾರಿ ಈ ಸ್ಥಳದಲ್ಲಿ ನಾಲೆ ಒಡೆದು ಕೆಳಭಾಗದ ರೈತರ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ಪರಿಹಾರ ಒದಗಿಸಲಾಗಿತ್ತು. ತದನಂತರ ಕಾವೇರಿ ನೀರಾರಿ ನಿಗಮದವರು ಇದರ ಸಮೀಪದಲ್ಲಿ ಕಾಮಗಾರಿ ನಿರ್ವಹಿಸಿದ್ದು, ನಾಲೆಯ ಎರಡು ಕಡೆಗಳಲ್ಲಿ ಕಾಂಕ್ರೀಟಿಕರಣ ಮಾಡಿದ್ದರು. ಆದರೂ, ಆಕ್ವಡೇಟ್ ಬಿರುಕುಗೊಂಡು ನಾಲೆಯಲ್ಲಿ ನೀರು ಸೋರಿಕೆಯಾಗಿ ಹರಿಯುತ್ತಿದೆ. ಇದರಿಂದ ಅಪಾಯಗಳೇ ಹೆಚ್ಚಿದೆ. ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಇದರತ್ತ ಗಮನಹರಿಸಿ ಬಿರುಕು ಬಿಟ್ಟಿರುವ ಆಕ್ವಡೇಟ್ ಅನ್ನು ಶೀಘ್ರವಾಗಿ ದುರಸ್ತಿಪಡಿಸಬೇಕೆಂದು ಈ ವ್ಯಾಪ್ತಿಯ ರೈತರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಳೆದ ಐದು ವರ್ಷಗಳಿಂದ ಹಾರಂಗಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ಸೂಪರಿಡೆಂಟ್ ಇಂಜಿನಿಯರ್ ಕಚೇರಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಇಲಾಖೆಯ ಕಚೇರಿಗಳು ಕುಶಾಲನಗರಕ್ಕೆ ಸ್ಥಳಾಂತರಗೊಂಡಿವೆ. ಈ ಇಲಾಖೆಯ ಅಧಿಕಾರಿಗಳು ಹಾರಂಗಿಗೆ ಪುನಃ ಸ್ಥಳಾಂತರಗೊಂಡು ಕಚೇರಿ ಆರಂಭಿಸಿದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯವಾಗುತ್ತದೆ. ಕಚೇರಿ ಆರಂಭಿಸಲು ಬೇಕಾಗುವ ಕಟ್ಟಡಗಳು ಸಹ ಇರುವದರಿಂದ ಅಧಿಕಾರಿಗಳು ಹಾರಂಗಿಯಲ್ಲಿಯೇ ಕಚೇರಿ ಆರಂಭಿಸಬೇಕು ಎಂದು ಹಾರಂಗಿ ಜಲಾಶಯ ವ್ಯಾಪ್ತಿಯ ರೈತರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

-ಕೆ.ಕೆ.ನಾಗರಾಜಶೆಟ್ಟಿ