ಇದು ಕಾಲೂರು ನಿಡುವಟ್ಟು ಗ್ರಾಮದ ನಾರಾಯಣಪಾಟಿಯ ಅಂಗನವಾಡಿ ಕಾರ್ಯಕರ್ತೆ ಚೆನ್ನಪಂಡ ನೀಲಮ್ಮ ಅವರು ಅನುಭವಿಸಿದ ಆತಂಕ ಹಾಗೂ ಪರಿಪಾಟಲು ಆ. 14ರಂದು ಆ ದಿನದ ಕೆಲಸವೊಂದನ್ನು ಮುಗಿಸಿ ಸಂಜೆ 4.30ರ ವೇಳೆಗೆ ಮನೆಗೆ ತಲಪಿದೆ. ಮಳೆ ಭಾರೀ ಜೋರಾಗಿತ್ತು. ಅಂಗಳದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪತಿ ಪೊನ್ನಪ್ಪ ಅವರಿಗೆ ತಿಳಿಸಿ ಚೀಲಗಳನ್ನು ಹಾಕಿ ಮುಚ್ಚಲು ಪ್ರಯತ್ನ ನಡೆಸಿದೆವು. ನೋಡ ನೋಡುತ್ತಿದ್ದಂತೆ ಅಂಗಳದಲ್ಲಿದ್ದ ಬಿರುಕು ಮನೆಯೊಳಗೂ ಗೋಚರಿಸಿತು. ಆತಂಕದಿಂದ ನೆರೆಮನೆಯವರಿಗೆ ತಿಳಿಸಲು ನೋಡಿದಾಗ ಸನಿಹದವರೊಬ್ಬರ ಕೊಟ್ಟಿಗೆಗೆ ಬರೆ ಬಿದ್ದಿದ್ದು, ಅಲ್ಲಿ ಕೆಲವರು ಸೇರಿದ್ದರು. ಆದರೂ ಕೆಲವರು ಆಗಮಿಸಿ ಕೈಗೆ ಸಿಕ್ಕ ವಸ್ತುಗಳನ್ನು ರಕ್ಷಿಸಲು ಮುಂದಾದಾಗ ಮತ್ತೆ ಬಿರುಕು ಹೆಚ್ಚಾಗತೊಡಗಿತು. ಇದರಿಂದ ಬಲವಂತವಾಗಿ ಒಲ್ಲದ ಮನಸ್ಸಿನಿಂದ ಅರ್ಧ ಕಿ.ಮೀ. ದೂರದ ಮತ್ತೊಬ್ಬರ ಮನೆಗೆ ತೆರಳಿದಾಗ ರಾತ್ರಿಯಾಗಿತ್ತು. ರಾತ್ರಿ 1.30ರ ವೇಳೆ ಇರಬಹುದು ಭಾರೀ ಶಬ್ದ ಕೇಳಿಬಂತು. ಎದ್ದು ಮನೆಯವರು ಟಾರ್ಚ್ ಬೆಳಕಿನಲ್ಲಿ ನೋಡಿದಾಗ ಏನೂ ಅರಿವಾಗಲಿಲ್ಲ. ಅಪಾಯದಲ್ಲಿದ್ದ ನಮ್ಮ ಮನೆಯಲ್ಲಿ ಶಬ್ದ ಕೇಳಿರಬಹುದೆಂದು ಭಾವಿಸಿದೆವು. ಮರುದಿನ ಬೆಳಕು ಹರಿದಾಗ ಕಳೆದ ರಾತ್ರಿ ಆಶ್ರಯ ಪಡೆದಿದ್ದ ಮನೆಯ ಹಿಂಭಾಗಕ್ಕೆ ಬೆಟ್ಟ ಜರಿದು ಬಿದ್ದಿದ್ದು, ರಾತ್ರಿ ಕೇಳಿದ ಶಬ್ದ ಎಂದು ಅರಿತಾಗ ನಡುಕವುಂಟಾಗಿತ್ತು. ಈ ದಿನ ಸನಿಹದ ಮತ್ತೊಂದು ಮನೆಯೂ ಪೂರ್ಣ ಕುಸಿತವಾಗಿದ್ದು ತಿಳಿದುಬಂತು.
ಇತ್ತೀಚೆಗಷ್ಟೇ ಮನೆಕಟ್ಟಿದ್ದು, ಇದ್ದ ಸಾಮಗ್ರಿಗಳನ್ನು ಭಯದಿಂದಲೇ ನೆರೆಕರೆಯವರ ಸಹಾಯದಿಂದ ಮನೆ ಸನಿಹದ ಕಣಕ್ಕೆ ತಂದು ಹಾಕಲು ಯತ್ನಿಸಿದೆವು. ಭಾರವಾದ ಮನಸ್ಸಿನಿಂದ ಎಲ್ಲರ ಒತ್ತಾಯದಂತೆ ಜಾಗಬಿಟ್ಟು ಜೀಪಿನಲ್ಲಿ ತೆರಳುವಾಗ ಕೂಟುಹೊಳೆ ತುಂಬಿಹೋಗಿತ್ತು. ಸಾಕಿದ್ದ ಹಂದಿ, ಕೋಳಿ, ಬೆಕ್ಕುಗಳನ್ನು ಅನಿವಾರ್ಯವಾಗಿ ಬಿಟ್ಟು ಜೀವದ ಮೇಲೆ ಆಸೆ ಬಿಟ್ಟು ಅಡೆ- ತಡೆಗಳ ನಡುವೆ ಮಡಿಕೇರಿ ಸೇರಬೇಕಾಗಿ ಬಂತು. ಹೊಸಮನೆ ಭಾಗ ಭಾಗವಾಗಿ ನಿಂತಂತಿದೆ. ಸಹಕರಿಸಿದವರ ಸಹಾಯ ಮರೆಯಲಾಗದು. ಭೂಕಂಪವಾಗಿದೆಯೋ ಏನೆಂದು ಗೊತ್ತಿಲ್ಲ... ಇದೀಗ ಬದುಕೇ ಅತಂತ್ರವಾಗಿದೆ.
-ಚೆನ್ನಪಂಡ ನೀಲಮ್ಮ,
ಅಂಗನವಾಡಿ ಕಾರ್ಯಕರ್ತೆ,
ಸೀತಾರಾಮಪಾಟಿ - ಕಾಲೂರು.