ಮಡಿಕೇರಿ ಆ. 30: ಅತಿವೃಷ್ಟಿಯಿಂದ ಸಂತ್ರಸ್ತರಾಗಿರುವ ಕುಟುಂಬದ ಮಕ್ಕಳನ್ನು ಕಡ್ಡಾಯವಾಗಿ ವಸತಿ ಶಾಲೆಗೆ ಸೇರ್ಪಡೆ ಮಾಡಲು ಹೆಚ್ಚಿನ ಕಾಳಜಿ ವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರು ಸಲಹೆ ಮಾಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅತಿವೃಷ್ಟಿ ಸಂಬಂಧ ಇದುವರೆಗೆ ಕೈಗೊಳ್ಳ್ಳ ಲಾಗಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು ಜಿಲ್ಲಾಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯ ಹಲವು ಕುಟುಂಬಗಳ ಮಕ್ಕಳ ವಿದ್ಯಾರ್ಜನೆಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸಂತ್ರಸ್ತರ ಮಕ್ಕಳಿಗೆ ವಿದ್ಯಾರ್ಜನೆ ನೀಡಲು ಮುಂದೆ ಬರುತ್ತಿದ್ದು, ಇದನ್ನು ಬಳಸಿಕೊಳ್ಳುವಂತಾಗಬೇಕು, ಮಕ್ಕಳನ್ನು ಕಡ್ಡಾಯವಾಗಿ ವಸತಿ ಶಾಲೆಗೆ ಸೇರ್ಪಡೆ ಮಾಡುವಂತಾಗಬೇಕು.

ಮಕ್ಕಳ ಜೀವನ ಮಟ್ಟ ಸುಧಾರಿಸಲು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಆ ನಿಟ್ಟಿನಲ್ಲಿ ಪೋಷಕರಿಗೆ ಮನವರಿಕೆ ಮಾಡಬೇಕು. ಹತ್ತಿರದ ವಿದ್ಯಾರ್ಥಿ ನಿಲಯಕ್ಕೆ ಸೇರ್ಪಡೆ ಮಾಡಬೇಕು ಎಂದು ಅವರು ತಿಳಿಸಿದರು. ಈ ಸಂದರ್ಭ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಾಲ್ಟರ್ ಡಿಮೆಲ್ಲೊ ಅವರು ಅತಿವೃಷ್ಟಿಯಿಂದಾಗಿ 763 ಮಕ್ಕಳು ಶಾಲೆಗೆ ಹೋಗಲು ತೊಂದರೆ ಯಾಗಿತ್ತು, ಇವರಲ್ಲಿ ಶೇ. 80ರಷ್ಟು ಮಕ್ಕಳನ್ನು ಹತ್ತಿರದ ಶಾಲೆಗೆ ಸೇರ್ಪಡೆ ಮಾಡಲಾಗಿದೆ. ಉಳಿದ ವಿದ್ಯಾರ್ಥಿ ಗಳನ್ನು ಶಾಲೆಗೆ ಸೇರಿಸಲಾಗುವದು ಎಂದು ಅವರು ಮಾಹಿತಿ ನೀಡಿದರು.

ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವದರ ಜೊತೆಗೆ ಮನೋಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದ್ದು, ಇನ್ನಷ್ಟು ಪ್ರಯತ್ನ ನಡೆಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಅವರು ಸಲಹೆ ಮಾಡಿದರು.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಅವರು ಪರಿಹಾರ ಕೇಂದ್ರದಲ್ಲಿ ವೈದ್ಯರು, ಶುಶ್ರೂಷಕರ ನಿಯೋಜನೆಯ ಜೊತೆಗೆ ಅಗತ್ಯ ಔಷಧಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಸಂತ್ರಸ್ತರಲ್ಲಿ ಮನೋಬಲ ಹೆಚ್ಚಿಸುವ ನಿಟ್ಟಿನಲ್ಲಿ ಸಂಗೀತ ಕಾರ್ಯಕ್ರಮ, ಯೋಗ, ಹಾಡುಗಾರಿಕೆ ಮತ್ತಿತರ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಅತಿವೃಷ್ಟಿ ಯಿಂದಾಗಿ ಮಡಿಕೇರಿ-ಮಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ಸರಿಪಡಿಸುವ ನಿಟ್ಟಿನಲ್ಲಿ ತಾಂತ್ರಿಕ ತಜ್ಞರಿಂದ ಮಾಹಿತಿ ಪಡೆದು, ಒಂದು ವಾರದಲ್ಲಿ ಡಿ.ಸಿ ಅವರ ಮೂಲಕ ವರದಿ ಕಳುಹಿಸಿಕೊಡುವಂತೆ ಹೆದ್ದಾರಿ ವಿಭಾಗದ ಇಂಜಿನಿಯರ್ ಅವರಿಗೆ ಲೋಕಾಯುಕ್ತ ನ್ಯಾಯಮೂರ್ತಿ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಅತಿವೃಷ್ಟಿ ಯಿಂದಾಗಿ ನೂರಾರು ಜಾನುವಾರುಗಳು ಮೃತಪಟ್ಟಿದ್ದು, ಜಾನುವಾರು ಕುಟುಂಬಗಳಿಗೆ 30 ಸಾವಿರ ರೂ. ಬದಲಿಗೆ ಹಸುವನ್ನು ಕೊಡಿಸು ವಂತಾಗಬೇಕು. ಇದರಿಂದ ಆರ್ಥಿಕ ವಾಗಿ ವೃದ್ಧಿಯಾಗಲು ಸಹಕಾರಿ ಯಾಗಲಿದೆ ಎಂದು ವಿಶ್ವನಾಥ ಶೆಟ್ಟಿ ಅವರು ಸಲಹೆ ಮಾಡಿದರು.

ಪಶುಪಾಲನೆ ಇಲಾಖೆ ಉಪ ನಿರ್ದೇಶಕ ತಮ್ಮಯ್ಯ ಅವರು ಅತಿವೃಷ್ಟಿ ಯಿಂದ 47 ಜಾನುವಾರುಗಳು ಮೃತಪಟ್ಟಿವೆ. ಕೂಡಿಗೆಯಲ್ಲಿ ಗೋಶಾಲೆ ತೆರೆಯಲಾಗಿದೆ ಎಂದು ವಿವರವಿತ್ತರು.

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಬಂಧಿಸಿದಂತೆ ವಿವಿಧ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಡುತ್ತಿದ್ದು, ಇಂತಹ ಅಪಪ್ರಚಾರ ಮಾಡುವವರನ್ನು ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಅವರಿಗೆ ಸಲಹೆ ಮಾಡಿದರು.

ಅತಿವೃಷ್ಟಿಯಿಂದ ಸುಮಾರು 3 ಸಾವಿರಕ್ಕಿಂತ ಹೆಚ್ಚು ವಿದ್ಯುತ್ ಕಂಬಗಳು ಹಾನಿಗೀಡಾಗಿದ್ದು, ಇದನ್ನು ಸರಿಪಡಿಸುವ ಕಾರ್ಯ ನಡೆದಿದೆ ಎಂದು ಸೆಸ್ಕ್ ಇಇ ಸೋಮಶೇಖರ್ ಮಾಹಿತಿ ನೀಡಿದರು. ವಿಶೇಷ ಅನ್ನಭಾಗ್ಯ ಯೋಜನೆಯಡಿ ಸಂತ್ರಸ್ತ 50 ಸಾವಿರ ಕುಟುಂಬದವರಿಗೆ ಆಹಾರ ಸಾಮಗ್ರಿ ವಿತರಿಸಲಾಗುತ್ತಿದೆ ಎಂದು ಆಹಾರ ಇಲಾಖೆಯ ಉಪನಿರ್ದೇಶಕ ಪುಟ್ಟಸ್ವಾಮಿ ಮಾಹಿತಿ ನೀಡಿದರು. ಮಡಿಕೇರಿ, ಭಾಗಮಂಡಲ, ಕರಿಕೆ, ಸುಳ್ಯ ಮಡಿಕೇರಿ ಮತ್ತು ಸುಳ್ಯ ಮಾರ್ಗ ತಲಾ 7 ಬಸ್‍ಗಳು ಸಂಚರಿಸುತ್ತಿವೆ ಎಂದು ತಿಳಿಸಿದರು. ಸಭೆಯ ಆರಂಭದಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ 186 ಮನೆಗಳು ಸಂಪೂರ್ಣ ನಾಶವಾಗಿವೆ, 934 ಭಾಗಶಃ ಹಾನಿಯಾಗಿದೆ ಎಂದು ವಿವರವಿತ್ತರು.

ಅತಿವೃಷ್ಟಿಗೆ ಸಿಲುಕಿಕೊಂಡವರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಭಾರತೀಯ ಸೇನೆ, ನೌಕಾಪಡೆ, ನಾಗರಿಕ ರಕ್ಷಣಾ ಪಡೆ, ಎನ್‍ಡಿಆರ್‍ಎಫ್, ಎಸ್‍ಡಿ ಆರ್‍ಎಫ್, ಪೊಲೀಸ್ ಇಲಾಖೆ, ಕೆಎಸ್‍ಆರ್‍ಪಿ ಹೀಗೆ ಹಲವು ತಂಡಗಳು ಹಾಗೂ ಸಂಘ-ಸಂಸ್ಥೆಗಳು ಭಾಗವಹಿಸಿದ್ದವು ಎಂದು ಅವರು ಮಾಹಿತಿ ನೀಡಿದರು.

ಪ್ರಕೃತಿ ವಿಕೋಪ ಸಂಬಂಧ ಹೆಚ್ಚಿನ ನೆರವು ನೀಡುವ ನಿಟ್ಟಿನಲ್ಲಿ ಟಾಟಾ, ಇನ್‍ಫೋಸಿಸ್, ವಿಪ್ರೋ, ಓಲಾ ಇತರ ಸಂಸ್ಥೆಗಳು ಮುಂದೆ ಬಂದಿವೆ ಎಂದು ಮಾಹಿತಿ ನೀಡಿದರು. ಸ್ವಚ್ಛತೆ ಮತ್ತು ಶೌಚಾಲಯ ಸಂಬಂಧಿಸಿದಂತೆ ಈಗಾಗಲೇ ಬಿಬಿಎಂಪಿ ಇಂದ 400 ಮಂದಿ ಸಿಬ್ಬಂದಿಗಳು ಆಗಮಿಸಿ ಸ್ವಚ್ಛತೆ ಕಡೆ ವಿಶೇಷ ಗಮನಹರಿಸಲಾಗಿದೆ ಎಂದು ಸೂಚಿಸಿದರು. ಸದ್ಯ ಈಗ 25 ಪರಿಹಾರ ಕೇಂದ್ರಗಳಿದ್ದು, 2917 ಮಂದಿ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿದ್ದಾರೆ. ಅಡುಗೆ ಅನಿಲ, ಆಹಾರ ಸಾಮಗ್ರಿಗಳು, ಬಟ್ಟೆ ಹೀಗೆ ನಾನಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಣ್ಣೇಕರ್ ಅವರು ಅತಿವೃಷ್ಟಿಗೆ ಸಿಲುಕಿ 14 ಮಂದಿ ಮೃತ ಪಟ್ಟಿದ್ದು, 4 ಮಂದಿ ಕಾಣೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು. ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅವರು ಜಿಲ್ಲೆಯ ಹಲವು ಗ್ರಾ.ಪಂ.ಗಳಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ ಎಂದು ಮಾಹಿತಿ ನೀಡಿದರು. ಲೋಕಾಯುಕ್ತ ಎಡಿಜಿಪಿ ಸಂಜಯ, ಲೋಕಾಯುಕ್ತ ಕಾರ್ಯದರ್ಶಿ ವಿಜಯಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಇದ್ದರು.