ಮಣ್ಣಿಂದ ಕಾಯ ಎಂದರು ದಾಸರು. ಅಳಿಯುತ್ತೇವೆ ಎಂದು ಗೊತ್ತಿದ್ದೂ ನಾವು ಎಷ್ಟೊಂದು ಜತನದಿಂದ ಬದುಕು ಕಟ್ಟಿಕೊಳ್ಳುತ್ತೇವೆ ಅಲ್ಲವೇ? ಮೂರು ಭಾಗ ನೀರು, ಒಂದು ಭಾಗ ಭೂಮಿಯಿರುವ ಈ ವಿಶ್ವದ ವಿನಾಶಕ್ಕೆ ಸಣ್ಣ ಅಲುಗಾಟವೇ ಸಾಕು. ಬೇರೇನೂ ಬೇಡ, ಭೂಪಟದಲ್ಲಿ ಆಂಧ್ರದ ಎಡಕ್ಕಿರುವ ಕಾಕಿನಾಡ ಮತ್ತು ಬಲಭಾಗದ ಗೋವಾಕ್ಕೆ ಒಂದು ಸಣ್ಣ ಗೆರೆ ಎಳೆದುನೋಡಿ. ಗೆರೆಯ ಕೆಳಗಿರುವ ದಕ್ಷಿಣ ಭಾರತದ ಭಾಗವನ್ನು ಗಮನಿಸಿ. ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ನಡುವೆ ತೂರಿರುವ ಸಣ್ಣ ಪ್ರದೇಶವದು. ಸಾಗರ ಉಕ್ಕಿದರೆ, ಭೂಮಿ ಅಲುಗಿದರೆ ಸಾವಿನ ಅಲಗಿನ ಘೋರ ದರ್ಶನವಾಗಲು ಇನ್ನೇನು ಬೇಕು ಹೇಳಿ!
ದೇಶದ ಎಲ್ಲೇ ಭೀಕರ ವಿಕೋಪವಾದರೂ ಕೊಡಗು ಸೇಫ್ ಎಂಬ ನಂಬಿಕೆಯಿತ್ತು. ಬಹುಶ: ಇಲ್ಲಿನ ಜನಜೀವನಕ್ಕೆ ಪರಿಸರವೇ ಭದ್ರಕೋಟೆಯಾಗಿರುವದು ಈ ನಂಬಿಕೆಗೆ ಪುಷ್ಟಿ ನೀಡಿತ್ತು. ಸುನಾಮಿ ಅಪ್ಪಳಿಸಲಿಲ್ಲ, ಜ್ವಾಲಾಮುಖಿ ಸ್ಫೋಟಿಸಲಿಲ್ಲ, ಚಂಡಮಾರುತ ಬೀಸಲಿಲ್ಲ. ಭೂಕಂಪನದ ರೌದ್ರತೆಯ ದರ್ಶನವೂ ಆಗಿಲ್ಲ. ನಿಂತ ನೆಲವೇ ಕುಸಿಯಿತು!.
ಜಗದಗಲ ತನ್ನ ನಿಸರ್ಗ ಸಿರಿಯಿಂದ ಖ್ಯಾತವಾಗಿದ್ದ ಕೊಡಗು, ಅದೇ ನಿಸರ್ಗದ ಮುನಿಸಿಗೆ ಬಲಿಯಾಗಿ ಮತ್ತೊಮ್ಮೆ ಜಗತ್ಪ್ರಸಿದ್ಧಿಯಾಗುವಂತಾಗಿದ್ದು ನಮ್ಮ ದುರ್ದೈವ. ಯಾವದೇ ಮುನ್ಸೂಚನೆ ನೀಡದೆ ವಿಧಿ ವಿಶಲ್ ಊದಿಯೇಬಿಟ್ಟಿತು. ಜನ, ಜಾನುವಾರು, ಆಸ್ತಿಪಾಸ್ತಿ ನೆಲಕಚ್ಚಿದವು. ಸಾವು ನೋವಿನ ಆಕ್ರಂದನ ಜಿಲ್ಲೆಯನ್ನು ದಿಕ್ಕೆಡಿಸಿತು. ಮಕ್ಕಂದೂರು, ಉದಯಗಿರಿ, ಕಾಲೂರು, ಹೆಬ್ಬೆಟ್ಟಗೇರಿ, 2ನೇ ಮೊಣ್ಣಂಗೇರಿ, ಜೋಡುಪಾಲ, ಮಾದಾಪುರ, ಹಟ್ಟಿಹೊಳೆ ವ್ಯಾಪ್ತಿಯಲ್ಲಿ ಬೆಟ್ಟಗಳೇ ಕರಗಿ, ಜರಿದು ಕೆಸರಿನೊಂದಿಗೆ ತೇಲಿಹೋಗುತ್ತಿದ್ದ ದೃಶ್ಯಗಳನ್ನು ಜನರು ಜನ್ಮಜನ್ಮಾಂತರಕ್ಕೂ ಮರೆಯಲು ಸಾಧ್ಯವಿಲ್ಲ. ಮಡಿಕೇರಿ ನಗರ ವ್ಯಾಪ್ತಿಯಲ್ಲೂ ಆದ ಹಾನಿ ಅಷ್ಟಿಷ್ಟಲ್ಲ. ಆಯಕಟ್ಟಿನ ಇಂದಿರಾನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರ, ಮಲ್ಲಿಕಾರ್ಜುನ ನಗರ ಮತ್ತಿತರ ಬಡಾವಣೆಗಳಲ್ಲಿ ಮನೆಗಳು ಕುಸಿದು, ಬದುಕುಗಳೇ ಕಮರಿಹೋದವು. ಮೂರ್ನಾಲ್ಕೇ ದಿನಗಳಲ್ಲಿ ಕೊಡಗು ಕಣ್ಣೀರ ಕೋಡಿಗೆ ಸಾಕ್ಷಿಯಾಯ್ತು.
ಮಿಡಿದ ಮನಸುಗಳು: ಕೇರಳದಲ್ಲಿ ಚಂಡಿಚಾಮುಂಡಿಯಂತೆ ಘರ್ಜಿಸಿ, ನೂರಾರು ಜನರನ್ನು ಬಲಿ ಪಡೆದ ಮಳೆಯೆಂಬ ನಿಸರ್ಗದ ವಿಕೋಪದ ದೃಷ್ಟಿಗೆ, ಆ ಬಳಿಕ ಕಂಡದ್ದು ಕೊಡಗು ಜಿಲ್ಲೆ. ಮಾನವನ ಹಸ್ತಕ್ಷೇಪವೋ, ಪ್ರಕೃತಿಯ ಮುನಿಸೋ, ಸಹಜ ಪ್ರಕ್ರಿಯೆಯೋ ಎಂಬ ಬಗ್ಗೆ ಚರ್ಚೆ ಮಾಡುವ ಸಮಯ ಇದಲ್ಲ. ಆಗಿರುವ ಹಾನಿಗೆ, ಮುರಿದ ಮನಸುಗಳಿಗೆ ಸಮಾಧಾನ ಹೇಳಬೇಕಾಗಿರುವದೇ ಈಗಿನ ಕರ್ತವ್ಯ. ಸಾಧ್ಯವಾದರೆ, ದುಡಿದ ಸಂಪಾದನೆಯಲ್ಲಿ ಒಂದು ಪಾಲನ್ನು ಸಂತ್ರಸ್ತರಿಗೆ ನೀಡೋಣ ಎಂದು ಸಂಕಲ್ಪ ಮಾಡುವುದು ಮನುಷ್ಯ ಧರ್ಮ. ಸರ್ಕಾರದ ಕರ್ತವ್ಯ ಒತ್ತಟ್ಟಿಗಿರಲಿ. ಕೊಡಗು ಜಿಲ್ಲೆಯಲ್ಲಿ ಇಂಥದ್ದೊಂದು ಭೀಕರ ವಿಕೋಪ ಘಟಿಸಿದೆ ಎಂಬ ಸುದ್ದಿ ತಲಪಿದ್ದೇ ತಡ ನೆರವಿನ ಮಹಾಪೂರವೇ ಹರಿದುಬಂದಿದೆ ಎಂಬದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಎಲ್ಲೆಡೆಯೂ ಭಯಾನಕ ಪರಿಸ್ಥಿತಿ ಇದ್ದಾಗ ಪ್ರವಾಸಿಗರಿಗೆ ಮುದ ನೀಡಿದ್ದು ಇದೇ ಕೊಡಗು ಜಿಲ್ಲೆ. ಎಲ್ಲೆಲ್ಲಿಯೂ ಹನಿ ನೀರಿಗಾಗಿ ಹಾಹಾಕಾರವೆದ್ದಾಗ ಕಾವೇರಿ ಹರಿದು ಬಂದಿದ್ದು ಇದೇ ಜಿಲ್ಲೆಯಿಂದ. ಘಮಘಮ ಕಾಫಿ, ಘಾಟು ಕರಿಮೆಣಸು, ಸುವಾಸನೆಯ ಕಿತ್ತಳೆ, ಜಗದ್ವಿಖ್ಯಾತ ಏಲಕ್ಕಿಗಳಿಗೆ ತವರಾದ ಕೊಡಗು, ದೇಶದ ಸೈನಿಕ ಶಕ್ತಿಯನ್ನೂ ಇಮ್ಮಡಿಸಿದ ವೀರಭೂಮಿ. ಬಹುಶ: ಈ ಮಮತೆಯಿಂದಲೇ ರಾಜ್ಯವಲ್ಲದೆ, ದೇಶದ ಬೇರೆಡೆಗಳಿಂದಲೂ ಕೊಡಗಿನ ಸಂತ್ರಸ್ತರಿಗೆ ನೆರವು ಸಿಗುತ್ತಿದೆ. ಎಷ್ಟೆಂದರೆ, ‘ಪರಿಹಾರ ಕೇಂದ್ರಗÀಳಿಗೆ ನೆರವು ಸಾಕು’ ಎನ್ನುವಷ್ಟರ ಮಟ್ಟಿಗೆ ನಾಡಿನ ಜನತೆ ಸಂಕಷ್ಟಕ್ಕೆ ಮಿಡಿದಿದೆ.
ನೀನೇ ರಾಮಾ... ನೀನೇ ಅಲ್ಲಾ...: ಎಕರೆಗಟ್ಟಲೆ ಆಸ್ತಿ, ಕಾರು ಬಂಗಲೆ ಇದ್ದವರೂ, ಕೂಲಿ ಕಾರ್ಮಿಕನ ಜೊತೆಗೆ ಒಂದೇ ಆವರಣದಲ್ಲಿ ಊಟ ಮಾಡಿದರು. ಕಾರಿನಲ್ಲಿ ಸಂಚರಿಸುತ್ತಿದ್ದವರು ಕಾಲ್ನಡಿಗೆಯಲ್ಲೇ ಪರಿಹಾರ ಕೇಂದ್ರಕ್ಕೆ ತೆರಳಿದರು. ಬದುಕನ್ನು ಮತ್ತೆ ಸಹಜ ಸ್ಥಿತಿಗೆ ತರಬೇಕೆಂದು ಪಣ ತೊಟ್ಟ ಎಲ್ಲ ಜಾತಿ, ಧರ್ಮದ ಬಂಧುಗಳು ಒಂದೇ ಆಸರೆಯಲ್ಲಿ ಆಶ್ರಯ ಪಡೆದರು. ಇಬ್ರಾಹಿಂ, ಆಲಿ, ನಬೀಸಾ, ನೂರುನ್ನೀಸಾ, ರಾಮ, ಕೃಷ್ಣ, ಲಕ್ಷ್ಮಿ, ಆಲ್ಫ್ರೆಡ್, ಡಿಸೋಜಾ ಎಲ್ಲರೂ ಮಸೀದಿ, ಮಂದಿರ, ಚರ್ಚ್‍ಗಳಲ್ಲಿ ಒಂದಾದರು. ಇದನ್ನೆಲ್ಲ ನೋಡುತ್ತಲೇ ದೇವರು,
ಬಿಡು ಮತಗಳ ಜಗಳ
ಇದೆ ಕೆಲಸವು ಬಹಳ
ನನ್ನ ಒಲಿಸಲು ಮರುಳ
ಇರೋ ಮಾರ್ಗವು ಸರಳ
ನನಗೇನೂ ಹೆಸರಿಲ್ಲ
ಹೆಸರಲ್ಲಿ ನಾನಿಲ್ಲ.....
ಎಂದು ನಿಸ್ಸಂಶಯವಾಗಿ ಗುನುಗಿರಲಿಕ್ಕೂ ಸಾಕು. ಜೊತೆಗಿದ್ದಾಗ ದ್ವೇಷಾಸೂಯೆಗಳಲ್ಲೇ ಕಾಲ ಕಳೆದ ತನ್ನ ಮಕ್ಕಳನ್ನು ಒಂದೇ ಆಸರೆಯಲ್ಲಿ ನೋಡಿದಾಗ, ದೇವರು ಅದೆಷ್ಟು ಸಂಭ್ರಮಪಟ್ಟಿರಬಹುದಲ್ಲವೇ? ಪ್ರತೀ ದಿನ ಧೂಪ ದೀಪ ಹಚ್ಚಿ, ನೆಲತಾಗಿ ನಮಾಝ್ ಮಾಡಿ, ಎದೆ ಮೇಲೆ ಶಿಲುಬೆ ಬರೆದುಕೊಂಡು ಆ ಕಾಣದ ಭಗವಂತನ ರಕ್ಷಣೆ ಕೋರುತ್ತೇವೆ. ಪರಮಾತ್ಮ ಸಂಪ್ರೀತನಾಗುತ್ತಾನೋ ಗೊತ್ತಿಲ್ಲ. ಆದರೆ, ನೀನೇ ರಾಮ, ನೀನೇ ಅಲ್ಲಾ, ನೀನೇ ಯೇಸು ಎಂದು ಜೊತೆಯಾಗಿ ಒಕ್ಕೊರಲಿನಿಂದ ಪ್ರಾರ್ಥಿಸುವ ಮತ್ತು ದೇವರನ್ನು ಸಂಪ್ರೀತಗೊಳಿಸುವ ಕಾಲವನ್ನು ಅದೇ ದೇವರು ಇದೀಗ ಒದಗಿಸಿಕೊಟ್ಟಿದ್ದಾನೆ ಎಂಬುದಂತೂ ಸತ್ಯ.
ಅವನ ಆಜ್ಞೆ ಮೀರದಿರಿ: ಆದರೆ, ವೈಪರೀತ್ಯವನ್ನು ಬರಮಾಡಿಕೊಳ್ಳುತ್ತಿರುವವರೇ ನಾವು. ಒಂದೆಡೆ, ನೆರವಿನ ಸಾವಿರ ಸಾವಿರ ಕೈಗಳು ಚಾಚುತ್ತಿವೆ. ಆ ಉದಾರತೆಯನ್ನೇ ದುರುಪಯೋಗ ಮಾಡಿಕೊಳ್ಳುವ ದುಷ್ಟ ಶಕ್ತಿಗಳೂ ನಮ್ಮ ಕಣ್ಣ ಮುಂದಿವೆ. ನೈಜ ಸಂತ್ರಸ್ತರಿಗೆ ಸೇರಬೇಕಾದ ಅಪಾರ ಪ್ರಮಾಣದ ವಸ್ತುಗಳು ದಾರಿ ತಪ್ಪಿ, ಕಸಿಯಲ್ಪಡುತ್ತಿವೆ. ದಾರಿ ಮಧ್ಯೆ, ತಿರುವು ಪಡೆದುಕೊಳ್ಳುತ್ತಿವೆ. ಪ್ರಕೃತಿ ವಿಕೋಪದಿಂದ ಎಳ್ಳಷ್ಟೂ ನಷ್ಟವಾಗದ ಮನೆಗಳಿಗೂ ರವಾನೆಯಾಗುತ್ತಿದೆ. ಪರಿಹಾರ ಕೇಂದ್ರಗಳಿಗೆ ಬರುತ್ತಿರುವ ದಾಸ್ತಾನು ಹೆಚ್ಚಾಗಿ, ಅಲ್ಲಿಂದಲೂ ರವಾನೆಯಾಗುತ್ತಿವೆ. ಇನ್ನೊಂಡೆದೆ, ಸಂತ್ರಸ್ತರು ತೊರೆದ ಏಕಾಂಗಿ ಮನೆಗಳಲ್ಲಿ ಕಳ್ಳತನಗಳೂ ನಡೆಯುತ್ತಿವೆ. ಇಂಥ ಕುತ್ಸಿತ ಮನಸುಗಳಿಗೆ ಕಡಿವಾಣ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲರೂ ಒಂದಾಗಿ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ವಿಹರಿಸುತ್ತಿರುವಾಗ, ಶಾಂತಿ ಕದಡಲು, ಮನಸು ಮುರಿಯಲು ಪ್ರಯತ್ನಿಸುವವರಿಗೆ ದೇವರೇ ಶಿಕ್ಷೆ ನೀಡುತ್ತಾನೆ. ನೋವಿಗೆ ಒಂದಿಷ್ಟು ಸಾಂತ್ವನ ಸಿಗಲಿ ಎಂಬುದೇ ಕೊಡುವ ಮನಸುಗಳ ಆಶಯ. ಆ ಆಶಯಕ್ಕೆ ಧಕ್ಕೆಯಾಗದಿರಲಿ.
- ಆನಂದ್ ಕೊಡಗು, ಚಿತ್ತಾರ ವಾಹಿನಿ, ಮಡಿಕೇರಿ