ಮಡಿಕೇರಿ, ಆ. 30: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಕೃಷಿಯಲ್ಲಿ 34500 ಹೆಕ್ಟೇರ್ ಗುರಿ ಹೊಂದಿದ್ದರೂ ಕೂಡ; ಪ್ರಾಕೃತಿಕ ವಿಕೋಪದ ಪರಿಣಾಮ ಇದುವರೆಗೆ ಕೇವಲ 19825 ಹೆಕ್ಟೇರ್ ನಾಟಿ ಮಾಡಲಾಗಿದೆ ಎಂದು ಸಂಬಂಧಿಸಿದ ಇಲಾಖೆಯಿಂದ ಅಧಿಕೃತ ಮಾಹಿತಿ ಲಭಿಸಿದೆ. ಈ ಪೈಕಿ ಅತಿವೃಷ್ಟಿ ಯಿಂದಾಗಿ 9808 ಹೆಕ್ಟೇರ್ನಷ್ಟು ನಾಟಿ ಗದ್ದೆಗಳಲ್ಲಿ ಹಾನಿ ಉಂಟಾಗಿದೆ ಎಂದು ಗೊತ್ತಾಗಿದೆ.ಮಡಿಕೇರಿ ತಾಲೂಕಿನಲ್ಲಿ ಮುಂಗಾರು ಮಳೆಯಾಶ್ರಿತ ಭತ್ತದ ಗದ್ದೆಗಳಲ್ಲಿ 6500 ಹೆಕ್ಟೇರ್ ಕೃಷಿಯನ್ನು ಮಾಡುವ ಗುರಿ ಹೊಂದಿದ್ದರೂ, ಕೇವಲ 3200 ಹೆಕ್ಟೇರ್ನಲ್ಲಿ ನಾಟಿ ಕಾರ್ಯ ಮುಕ್ತಾಯಗೊಂಡಿರುವದಾಗಿ ಕೃಷಿ ಇಲಾಖೆ ಮೂಲದಿಂದ ಖಾತರಿಯಾಗಿದೆ. ಆ ಪೈಕಿ ಈಗಾಗಲೇ 2830 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿದೆ. ಅದರಲ್ಲಿ 123 ಹೆಕ್ಟೇರ್ ಹೂಳು ತುಂಬಿಕೊಂಡ ಹಾನಿಯೆಂದು ಅಂದಾಜಿಸಲಾಗಿದೆ.ಇನ್ನೊಂದೆಡೆ ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಮಳೆಯಾಶ್ರಿತ ಕೃಷಿ ಗುರಿ ಹೊಂದಲಾಗಿದೆ. ಈ ಪೈಕಿ ಪ್ರಸಕ್ತ 9220 ಹೆಕ್ಟೇರ್ನಷ್ಟು ಮಾತ್ರ ಭತ್ತದ ನಾಟಿ ಕಾರ್ಯ ಪೂರೈಸಲಾಗಿದೆ ಎಂದು ಗೊತ್ತಾಗಿದೆ. ಕೃಷಿ ಪೂರೈಸಿರುವ ಪ್ರದೇಶದಲ್ಲಿ ಅತಿವೃಷ್ಟಿಯ ಪರಿಣಾಮ 2917 ಹೆಕ್ಟೇರ್ನಷ್ಟು ಪೈರು ಹಾನಿಗೊಂಡಿದ್ದು, ಹೂಳಿನಿಂದಾಗಿ ಈ ಪೈಕಿ 133 ಹೆಕ್ಟೇರ್ ಗದ್ದೆಗಳಲ್ಲಿ ನಷ್ಟ ಎದುರಾಗಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ಬಯಲು ಸೀಮೆಯ ಅಲ್ಲಲ್ಲಿ ಮುಸುಕಿನ ಜೋಳ ಕೃಷಿಯ 4000 ಹೆಕ್ಟೇರ್ ಗುರಿ ಹೊಂದಲಾಗಿತ್ತು. ಆ ಪೈಕಿ 2450 ಹೆಕ್ಟೇರ್ ಮಾತ್ರ ಕೃಷಿ ಮಾಡಿದ್ದು, 1812 ಹೆಕ್ಟೇರ್ ಈಗಾಗಲೇ ಹಾನಿ ಸಂಭವಿಸಿರುವದಾಗಿ ವರದಿಯಾಗಿದೆ. ಮತ್ತೊಂದೆಡೆ ಭತ್ತದ ನಾಟಿ ಸುಮಾರು 10 ಸಾವಿರ ಹೆಕ್ಟೇರ್ ಗುರಿ ಹೊಂದಲಾಗಿತ್ತು. ಬದಲಾಗಿ 4955 ಹೆಕ್ಟೇರ್ ಮಾತ್ರ ಕೃಷಿ ಮಾಡಲಾಗಿದೆ. ಇದರಲ್ಲಿ 2024 ಹೆಕ್ಟೇರ್ ಫಸಲು ಹಾನಿಗೊಳಗಾಗಿದೆ
ಒಟ್ಟಿನಲ್ಲಿ ಜಿಲ್ಲೆಯ ಮೂರು ತಾಲೂಕುಗಳಿಂದ ಒಟ್ಟಾರೆ ಮುಂಗಾರು ಬೆಳೆಯಲ್ಲಿ 19825 ಹೆಕ್ಟೇರ್ ಮಾತ್ರ ಕೃಷಿ ಮುಗಿದಿದ್ದು, ಆ ಪೈಕಿ ಸುಮಾರು 9808 ಹೆಕ್ಟೇರ್ನಲ್ಲಿ ಹಾನಿಯೊಂದಿಗೆ ರೂ. 693.032 ಲಕ್ಷದಷ್ಟು ಮುಂಗಾರು ಬೆಳೆ ಹಾನಿ ಸಂಭವಿಸಿದೆ ಎಂದು ಇಲಾಖೆಯ ಅಧಿಕಾರಿಗಳು ಅಂಕಿಅಂಶ ನೀಡಿದ್ದಾರೆ.
(ಮೊದಲ ಪುಟದಿಂದ)
ನಷ್ಟ ಸಮೀಕ್ಷೆ : ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕೃಷಿ ಭೂಮಿ, ಕಾಫಿ, ತೋಟಗಾರಿಕಾ ಬೆಳೆಗಳು, ಕಾಳು ಮೆಣಸು ಇತ್ಯಾದಿ ಒಟ್ಟಾರೆ ನಷ್ಟದ ಕುರಿತು ಈಗಾಗಲೇ ಸಂಪೂರ್ಣ ಸಮೀಕ್ಷೆ ನಡೆಸಿ ನಷ್ಟದ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಸರಕಾರವು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ. ಆ ಮೇರೆಗೆ ಕೃಷಿ ಇಲಾಖೆಯಿಂದ ಸುಮಾರು 104 ಮಂದಿ ಅಧಿಕಾರಿಗಳ ತಂಡ ಸಮೀಕ್ಷೆಯಲ್ಲಿ ತೊಡಗಿಸಿ ಕೊಂಡಿದ್ದಾಗಿ ಹೇಳಲಾಗುತ್ತದೆ.
ತಂಡ ರಚನೆ : ಮಡಿಕೇರಿ ತಾಲೂಕಿನಲ್ಲಿ ಇಂತಹ 26 ಮಂದಿ, ವೀರಾಜಪೇಟೆ ತಾಲೂಕಿನಲ್ಲಿ 35 ಮಂದಿ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 43 ಮಂದಿ ಕಾರ್ಯನಿರ್ವಹಿಸಲು ಮುಂದಾಗಿದ್ದು, ಒಟ್ಟು ಪ್ರಾಕೃತಿಕ ವಿಕೋಪದಿಂದ ಹಾನಿ ಸಂಭವಿಸಿರುವ 529 ಕಡೆಗಳಲ್ಲಿ ಸಮೀಕ್ಷೆ ಕೈಗೊಂಡಿದ್ದಾರೆ. ಈ ಪೈಕಿ ಮಡಿಕೇರಿ ತಾಲೂಕಿನ 99, ವೀರಾಜಪೇಟೆ ತಾಲೂಕಿನ 124 ಹಾಗೂ ಸೋಮವಾರಪೇಟೆ ತಾಲೂಕಿನ 306 ಹಳ್ಳಿಗಳು ಸೇರ್ಪಡೆಗೊಂಡಿವೆ.ಪ್ರತಿಯೊಬ್ಬ ಕೃಷಿಕ ಕೈಗೊಂಡಿ ರುವ ಜಮೀನಲ್ಲಿ ಭತ್ತ, ಕಾಫಿ, ಬಾಳೆ, ಕಾಳುಮೆಣಸು ಹಾಗೂ ಇತರೆ ಬೆಳೆಗಳ ನಷ್ಟದ ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸುವ ವರದಿ ಮೇರೆಗೆ ಸಂಬಂಧಪಟ್ಟ ಕೃಷಿಕರಿಗೆ ಪರಿಹಾರ ದೊರಕಲಿದೆ ಎಂದು ಈ ಮೂಲಗಳು ‘ಶಕ್ತಿ’ಗೆ ಖಚಿತಪಡಿಸಿವೆ.
ಅವಿಭಕ್ತ ಕುಟುಂಬ : ಕೊಡಗು ಜಿಲ್ಲೆಯಲ್ಲಿ ಒಂದೊಂದು ಕುಟುಂಬ ದಲ್ಲಿ ಹತ್ತಾರು ಮಂದಿ ಯಿದ್ದರೂ, ಬಹುತೇಕ ಜಮೀನು ಕೇವಲ ಪಟ್ಟೆದಾರನ ಹೆಸರಿನೊಂದಿಗೆ ಅವಿಭಕ್ತ ಕುಟುಂಬ ವ್ಯವಸ್ಥೆಗೊಳ ಪಟ್ಟಿದೆ. ಕೆಲವರ ಹೆಸರು ಹಿಂದಿನ ಪದ್ಧತಿಯಂತೆ ಆರ್ಟಿಸಿ ಯಲ್ಲಿ ನಮೂದಾಗಿದ್ದರೆ, ಈಗಿನ ಪೀಳಿಗೆಗೆ ಈ ಅವಕಾಶ ಅಲಭ್ಯ. ಪರಿಣಾಮ ಆನೇಕ ಕೃಷಿಕರು ಇಂದು ನಷ್ಟ ಪರಿಹಾರದಿಂದ ವಂಚಿತ ರಾಗುತ್ತಿದ್ದಾರೆ. ಈ ದಿಸೆಯಲ್ಲಿ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆಗಳು ಸರಕಾರಕ್ಕೆ ಸ್ಪಷ್ಟ ಮಾಹಿತಿ ಒದಗಿಸಬೇಕೆಂದು ರೈತ ಸಮುದಾಯದ ಹಕ್ಕೊತ್ತಾ ಯವಾಗಿದೆ.
- ಶ್ರೀಸುತ