ಮಡಿಕೇರಿ, ಆ. 30: ಕೊಡಗು ಜಿಲ್ಲಾ ಆಡಳಿತದ ಲೆಕ್ಕಾಚಾರದಂತೆ ಇದುವರೆಗೆ ಪ್ರಾಕೃತಿಕ ವಿಕೋಪದಲ್ಲಿ ಸಿಲುಕಿ ಮನೆಗಳನ್ನು ಕಳೆದುಕೊಂಡು, 1790 ಮಂದಿ ಸಂತ್ರಸ್ತರು ತುರ್ತು ನೆರವು ಪಡೆದುಕೊಂಡಿದ್ದರೂ, ವಾಸದ ಮನೆಗಾಗಿ ಮರುಗುತ್ತಿದ್ದಾರೆ. ಇನ್ನೊಂದೆಡೆ ನಿರಾಶ್ರಿತರ ಕೇಂದ್ರಗಳಲ್ಲಿ ಕೆಲವರು ಆಸರೆ ಪಡೆದಿದ್ದು, ಮತ್ತೆ ಕೆಲವರು ದೂರದ ಬಂಧುಗಳ ಮನೆಗಳಲ್ಲಿ ವಾಸವಿದ್ದಾರೆ.ಈವರೆಗಿನ ಲೆಕ್ಕಾಚಾರದಂತೆ ಸುಮಾರು 24 ಸಂತ್ರಸ್ತರ ಕೇಂದ್ರಗಳಲ್ಲಿ ಒಟ್ಟು 2,256 ಮಂದಿ ಆಸರೆ ಪಡೆದುಕೊಂಡಿದ್ದಾರೆ. ಮಡಿಕೇರಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ 16 ಕಡೆಗಳಲ್ಲಿ ಒಟ್ಟು 1,402 ಮಂದಿ ನಿರಾಶ್ರಿತರು ಮನೆ ಮಠಗಳನ್ನು ತೊರೆದಿರುವ ಮಾಹಿತಿ ಲಭಿಸಿದೆ. ಇಲ್ಲಿ ನಿರಾಶ್ರಿತರಿಗೆ ಭವಿಷ್ಯದ ಚಿಂತೆಯಾದರೆ, ನಿರಾಶ್ರಿತರ ಹೆಸರಿನಲ್ಲಿ ಅವಕಾಶವಾದಿಗಳು ಎಲ್ಲವನ್ನು ಲಪಟಾಯಿಸಲು ತವಕಿಸುತ್ತಿದ್ದಾರೆ.
ಕೇಂದ್ರಗಳು ಹೀಗಿವೆ: ಪೊಲೀಸ್ ಮೈತ್ರಿ ಭವನ 357, ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರ 158, ಅಶೋಕಪುರದ ಅಂಬೇಡ್ಕರ್ ಭವನ 114, ಕೋಟೆಯ ಹಳೆ ಕಾರಾಗೃಹ 96, ಗೆಜ್ಜೆಸಂಕಪ್ಪ ಕಲ್ಯಾಣ ಮಂಟಪ 68, ದಾಸವಾಳದ ಕಮ್ಯುನಿಟಿ ಹಾಲ್ 41, ಅಜಾದ್ನಗರ 15, ಮಂಗಳಾದೇವಿ ನಗರ 57, ಚೇಂಬರ್ ಆಫ್ ಕಾಮರ್ಸ್ ಕಟ್ಟಡ 96 ಎಂದು ಲೆಕ್ಕ ಲಭಿಸಿದೆ.
ಇನ್ನು ಟಿ.ಜಾನ್ ಬಡಾವಣೆ 27, ಸಂಪಿಗೆಕಟ್ಟೆ 34, ಕರ್ಣಂಗೇರಿ 86, ಕೊಟ್ಟಮುಡಿ 74, ಸಂಪಾಜೆ 87, ಕಾಟಕೇರಿ ಶಾಲೆ 56, ತಾಳತ್ಮನೆ 36 ಮಂದಿ ನಿರಾಶ್ರಿತರಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
(ಮೊದಲ ಪುಟದಿಂದ) ವೀರಾಜಪೇಟೆಯ ಮಗ್ಗುಲದಲ್ಲಿ 26 ಮಂದಿ ಆಸರೆ ಪಡೆದಿರುವದಾಗಿ ತಿಳಿದು ಬಂದಿದೆ. ಸೋಮವಾರಪೇಟೆ ಕೊಡವ ಸಮಾಜದಲ್ಲಿ 13 ಮಂದಿ, ಬೇಳೂರು ಮಠದಲ್ಲಿ 62 ಮಂದಿ, ಸುಂಟಿಕೊಪ್ಪದ ಒಂದೆಡೆ 199 ಹಾಗೂ ಮತ್ತೊಂದೆಡೆ 180 ಮಂದಿ ನಿರಾಶ್ರಿತರಿದ್ದಾರೆ. ಅಂತೆಯೇ ಕುಶಾಲನಗರದ ವಾಲ್ಮಿಕಿ ಭವನದಲ್ಲಿ 122 ಮಂದಿ ಮಡಿಕೇರಿಯಿಂದ ಸ್ಥಳಾಂತರಗೊಂಡವರಿದ್ದಾರೆ.
ಮಾತ್ರವಲ್ಲದೆ ಕೊಡಗಿನ ಗಡಿ ಕಲ್ಲುಗುಂಡಿ ಶಾಲೆಯಲ್ಲಿ 115 ಮಂದಿ ಹಾಗೂ ಅರಂತೋಡುವಿನಲ್ಲಿ 137 ಮಂದಿ ಆಸರೆ ಹೊಂದಿರುವ ಮಾಹಿತಿಯೊಂದಿಗೆ ಒಟ್ಟು 2,256 ಮಂದಿಯ ಲೆಕ್ಕ ಲಭಿಸಿದೆ.
ಎಲ್ಲವೂ ಗೊಂದಲ: ತಾ. 30ರ ತನಕ ಜಿಲ್ಲೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ 2,256 ಮಂದಿಯ ಲೆಕ್ಕ ಲಭಿಸಿದ್ದು, ಯಾವ ಕೇಂದ್ರದಲ್ಲಿಯೂ ಈ ಸಂಖ್ಯೆಯಲ್ಲಿ ಆಸರೆ ಪಡೆದಿರುವವರು ಕಂಡುಬಂದಿಲ್ಲ. ಆಯ ಕೇಂದ್ರಗಳಿಗೆ ‘ಶಕ್ತಿ’ ಸಂಪರ್ಕಿಸಿದಾಗ ಬಹುಮಂದಿ ನೆಂಟರಿಷ್ಟರ ಮನೆಗಳಿಗೆ ತೆರಳಿರುವದಾಗಿ ಉತ್ತರ ಲಭಿಸಿದೆ.
ಊರು ಬಿಟ್ಟಿದ್ದಾರೆ: ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ತೊಂದರೆಗೆ ಸಿಲುಕಿರುವ ಬಹುಮಂದಿ ನಿರಾಶ್ರಿತರು, ಬೆಂಗಳೂರು, ಮಂಗಳೂರು, ಮೈಸೂರು ಮುಂತಾದೆಡೆಗಳಲ್ಲಿ ಉದ್ಯೋಗದಲ್ಲಿರುವ ತಮ್ಮ ಮಕ್ಕಳ ಬಳಿ ಹೋಗಿದ್ದು, ಮನೆಗಳನ್ನು ತೊರೆದು ಊರು ಬಿಟ್ಟಿದ್ದಾರೆ. ಪರಿಣಾಮ ಸಂತ್ರಸ್ತರ ಕೇಂದ್ರಗಳಿಗೆ ಬಂದು ಊಟ, ತಿಂಡಿಯೊಂದಿಗೆ ಸೌಲಭ್ಯ ಪಡೆಯುತ್ತಿರುವ ಬಹಳಷ್ಟು ಮಂದಿಯ ಪೈಕಿ, ನೈಜ ಸಂತ್ರಸ್ತರ ಪಟ್ಟಿಯಲ್ಲಿ ಇರುವವರಿಗೆ ತಾಳೆ ಹೊಂದುತ್ತಿಲ್ಲ. ಸರಕಾರದಿಂದ ಮನೆಗಳು ಲಭಿಸಲಿದೆ ಹಾಗೂ ಆರ್ಥಿಕ ನೆರವು ದೊರಕಲಿದೆ ಎಂಬ ಏಕಮೇವ ಉದ್ದೇಶದಿಂದ ಅನೇಕರು ಇಂತಹ ಕೇಂದ್ರಗಳಲ್ಲಿ ಹೆಸರು ನೀಡಿರುವ ಶಂಕೆ ವ್ಯಕ್ತಗೊಂಡಿದೆ.
ಒಂದೆಡೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಂತ್ರಸ್ತರಾಗಿರುವವರು ಕಂಗಾಲಾಗಿ ಸ್ವಂತ ನೆಲೆ ಕಳೆದುಕೊಂಡು ನಾಳೆಯ ಬದುಕಿಗಾಗಿ ಮರುಗುತ್ತಿದ್ದಾರೆ. ಇನ್ನೊಂದೆಡೆ ಸಿಕ್ಕ ಅವಕಾಶವನ್ನು ಬಂಡವಾಳ ಮಾಡಿಕೊಂಡಿರುವ ಅವಕಾಶವಾದಿಗಳು ಮಾನವೀಯತೆ ಮರೆತು ಸಂತ್ರಸ್ತರ ಸೋಗಿನಲ್ಲಿ ಎಲ್ಲವನ್ನೂ ಲಪಟಾಯಿಸುತ್ತಿರುವ ದೂರುಗಳು ಕೇಳಿ ಬರುತ್ತಿವೆ. ಸಂತ್ರಸ್ತರ ಪ್ರತಿ ಕೇಂದ್ರಗಳಿಗೆ ಜಿಲ್ಲಾಡಳಿತದಿಂದ ಉಸ್ತುವಾರಿ ಅಧಿಕಾರಿಗಳನ್ನು ನಿಯೋಜಿಸಿದ್ದರೂ, ಬಹಳಷ್ಟು ಮಂದಿ ಅತ್ತ ತಲೆ ಹಾಕದೆ ಕುಳಿತಲ್ಲೇ ಸುಳ್ಳು ವರದಿ ನೀಡಿರುವದು ಗೋಚರಿಸುತ್ತಿದೆ. ಇತ್ತ ಗಂಭೀರವಾಗಿ ಪರಿಶೀಲಿಸಿ ಅಗತ್ಯ ಕ್ರಮ ಅನುಸರಿಸಬೇಕಿದೆ.