ಸಿದ್ದಾಪುರ, ಆ. 30: ಮಹಾ ಮಳೆಗೆ ಸಿಲುಕಿ ಹಾನಿಗೊಳಗಾದ ಹಾಗೂ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ನದಿ ದಡದ ನಿವಾಸಿಗಳಿಗೆ ಅಮ್ಮತ್ತಿ ಹೋಬಳಿ ಕಂದಾಯ ಇಲಾಖಾಧಿಕಾರಿಗಳು ತುರ್ತು ಪರಿಹಾರ ನೀಡಿದ್ದಾರೆ. ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ಕರಡಿಗೋಡು ಗ್ರಾಮದ 102 ಕುಟುಂಬ ಗಳಿಗೆ ಹಾಗೂ ಕೊಂಡಂಗೇರಿ ಗ್ರಾಮದ 34 ಮಂದಿಗೆ ಸರ್ಕಾರದ ವತಿಯಿಂದ ತುರ್ತು ಪರಿಹಾರವಾಗಿ ರೂ.3800ರ ಚೆಕ್‍ಗಳನ್ನು ಕಂದಾಯ ಪರಿವೀಕ್ಷಕ ವಿನು, ಗ್ರಾಮ ಲೆಕ್ಕಿಗರಾದ ಮಂಜುನಾಥ್, ಅನಿಲ್ ಕುಮಾರ್ ವಿತರಿಸಿದರು. ಅಲ್ಲದೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಹಾನಿಗೊಳಗಾದ ಮನೆ ಗಳನ್ನು ಪರಿಶೀಲಿಸಿ, ಅಂದಾಜು ನಷ್ಟದ ಪಟ್ಟಿ ತಯಾರಿಸಿದ್ದಾರೆ. ಈ ಬಾರಿಯ ಮಹಾಮಳೆಗೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆ ಯಾದ ಹಿನ್ನೆಲೆಯಲ್ಲಿ ನದಿ ದಡದ ಮನೆಗಳು ಹಾನಿಯಾಗಿದ್ದಲ್ಲದೆ ಸುತ್ತಮುತ್ತಲಿನ ಗುಹ್ಯ, ಕರಡಿಗೋಡು ಗ್ರಾಮದ ಚಿಕ್ಕನಹಳ್ಳಿ ಪೈಸಾರಿ ಹೊಸಗದ್ದೆ ಇನ್ನಿತರ ಸ್ಥಳಗಳಲ್ಲಿ ಪ್ರವಾಹದ ನೀರಿಗೆ ಸಿಲುಕಿ ಅನೇಕ ಮನೆಗಳು ಶಿಥಿಲಗೊಂಡು ಬಿರುಕು ಕಾಣಿಸಿಕೊಂಡಿವೆ.

ಹಾನಿಗೊಳಗಾದ ಮಂದಿ ತಮ್ಮ ಮನೆಗಳಿಗೆ ಸರಕಾರದ ವತಿಯಿಂದ ನಷ್ಟದ ಪರಿಹಾರವನ್ನು ನೀಡ ಬೇಕೆಂದು ಕಂದಾಯ ಇಲಾಖೆಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈಗಾಗಲೇ ಕರಡಿಗೋಡಿನ ನದಿ ದಡದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನಿರ್ಧರಿಸಿದ್ದಾರೆ. ಆದರೆ ಗುಹ್ಯ, ಕೂಡುಗದ್ದೆ ಭಾಗದಲ್ಲಿ ಹಾಗೂ ಕೊಂಡಂಗೇರಿ ಭಾಗದಲ್ಲಿ ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು ಕುಂಬಾರಗುಂಡಿ ಭಾಗದ ನದಿ ದಡದಲ್ಲಿ ನೂರಾರು ಮನೆಗಳು ಅಪಾಯದಲ್ಲಿವೆ. ಇವರುಗಳು ಕೂಡ ಸೂಕ್ತ ನಿರ್ಧಾರ ತೆಗೆದುಕೊಂಡು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಚಿಂತಿಸಬೇಕಾಗಿದೆ. ಜಿಲ್ಲಾಡಳಿತ ಕೂಡ ನದಿ ದಡದ ನಿವಾಸಿಗಳಿಗೆ ಸುರಕ್ಷಿತ ಸ್ಥಳದಲ್ಲಿ ಶಾಶ್ವತ ಸೂರು ಗಳನ್ನು ಒದಗಿಸಿಕೊಡ ಬೇಕೆಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿ ದ್ದಾರೆ. ಮುಂದೆ ಯಾವದೇ ಅನಾಹುತ ಗಳು ಆಗದಂತೆ ಮುನ್ನೆಚ್ಚರಿಕೆ ವಹಿಸು ವದು ಸರಕಾರದ ಆದ್ಯ ಕರ್ತವ್ಯ ವಾಗಿದೆ. - ಎ.ಎನ್. ವಾಸು