ಸೋಮವಾರಪೇಟೆ, ಆ. 30: ಮಹಾಮಳೆಗೆ ತಾಲೂಕಿನಾದ್ಯಂತ ಅಂದಾಜು 2 ಸಾವಿರ ಹೆಕ್ಟೇರ್‍ಗಿಂತಲೂ ಅಧಿಕ ಭತ್ತ ಹಾಗೂ 1800 ಹೆಕ್ಟೇರ್‍ಗಿಂತಲೂ ಅಧಿಕ ಮುಸುಕಿನ ಜೋಳ ಕೃಷಿ ಸಂಪೂರ್ಣ ಹಾನಿಗೀಡಾಗಿದೆ.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿಗೆ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಜುಲೈ ಕೊನೆಯ ವಾರದವರೆಗೆ 6900 ಹೆಕ್ಟೇರ್‍ನಲ್ಲಿ ಭತ್ತದ ನಾಟಿ ಕಾರ್ಯ ಮಾಡಲಾಗಿತ್ತು. ಆ ನಂತರ ಸುರಿದ ಎಡೆಬಿಡದ ಮಳೆ, ಭೂಕುಸಿತದಿಂದಾಗಿ ನಾಟಿ ಮಾಡಿದ್ದ 2000ಹೆಕ್ಟೇರ್‍ಗಿಂತಲೂ ಅಧಿಕ ಪ್ರದೇಶ ಸಂಪೂರ್ಣ ಹಾನಿಗೀಡಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ತಿಳಿಸಿದ್ದಾರೆ.

ಗದ್ದೆಯ ಬದಿಯ ನದಿ, ತೊರೆ, ತೋಡುಗಳು ಉಕ್ಕಿ ಹರಿದ ಪರಿಣಾಮ ಗದ್ದೆಯ ಮೇಲೆ ಮರಳು ನಿಂತಿದೆ. ಕೆಲವೆಡೆ ಭಾರೀ ಭೂಕುಸಿತ ಸಂಭವಿಸಿ ಗದ್ದೆ ಪ್ರದೇಶದಲ್ಲಿ ಸಂಪೂರ್ಣ ಮಣ್ಣು, ಮರಗಳು ನಿಂತಿವೆ. ಕೆಲವರ ಗದ್ದೆಗಳು ಎಲ್ಲಿತ್ತು? ಎಂಬ ಬಗ್ಗೆ ಅಂದಾಜಿಸುವದೇ ಕಷ್ಟಕರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.

1800 ಹೆಕ್ಟೇರ್ ಮುಸುಕಿನ ಜೋಳ ಹಾನಿ: ಇನ್ನು ತಾಲೂಕಿನಾದ್ಯಂತ ಪ್ರಸಕ್ತ ಸಾಲಿನಲ್ಲಿ 4 ಸಾವಿರ ಹೆಕ್ಟೇರ್ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಲಾಗಿತ್ತು. ಇದರಲ್ಲಿ 2845 ಹೆಕ್ಟೇರ್‍ನಲ್ಲಿ ಭಿತ್ತನೆ ಕಾರ್ಯ ಮುಕ್ತಾಯಗೊಂಡಿತ್ತು.

ಕಡಿಮೆ ಮಳೆ ಬೀಳುವ ಕುಶಾಲ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ವರ್ಷ ಭಾರೀ ಮಳೆಯಾದ ಹಿನ್ನೆಲೆ 2845 ಹೆಕ್ಟೇರ್ ಪೈಕಿ 1800 ಹೆಕ್ಟೇರ್ ಪ್ರದೇಶದಲ್ಲಿ ಕೈಗೊಳ್ಳಲಾಗಿದ್ದ ಮುಸುಕಿನ ಜೋಳ ಕೃಷಿ ಸಂಪೂರ್ಣ ನಾಶವಾಗಿದೆ. ಉಳಿದೆಡೆಯೂ ಭಾಗಶಃ ಹಾನಿ ಸಂಭವಿಸಿದ್ದು, ಒಟ್ಟಾರೆ ಶೇ.80ರಷ್ಟು ಕೃಷಿ ನಷ್ಟವಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಈಗಾಗಲೇ ಭಿತ್ತನೆ ಮಾಡಿದ್ದ ಕೃಷಿ ಅತೀ ಮಳೆಗೆ ಹಾನಿಗೀಡಾಗಿದ್ದರೆ, ಶೇಖರಿಸಿಟ್ಟಿದ್ದ ಭಿತ್ತನೆ ಬೀಜವೂ ನಷ್ಟವಾಗಿದೆ. ಗಿಡದಲ್ಲಿರುವ ತೆನೆಗಳಿಗೂ ‘ಫಂಗಸ್’ ಬಾಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈಗಾಗಲೇ ಕೃಷಿ ಇಲಾಖೆಗೆ 4 ಸಾವಿರಕ್ಕೂ ಅಧಿಕ ಮಂದಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಹೆಕ್ಟೇರ್‍ಗೆ ಇಲಾಖೆ ಯಿಂದ ಪ್ರಸ್ತುತ ನೀಡಲಾಗುತ್ತಿರುವ ಪರಿಹಾರ ಮೊತ್ತ 2,720 ಇದ್ದು, ಇದರ ಬದಲಾಗಿ ಹೆಚ್ಚುವರಿ ಪರಿಹಾರ ಒದಗಿಸುವಂತೆ ಕೃಷಿ ಇಲಾಖಾ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಡಾ. ರಾಜಶೇಖರ್ ತಿಳಿಸಿದ್ದಾರೆ.