ಮಡಿಕೇರಿ, ಆ. 30: ತೀವ್ರ ಅತಿವೃಷ್ಟಿಗೆ ಒಳಗಾಗಿರುವ ಪ್ರದೇಶದ ಕುಟುಂಬಗಳಿಗೆ ಕೂಡಲೇ ಆಹಾರ ಕಿಟ್‍ಗಳನ್ನು ನ್ಯಾಯಬೆಲೆ ಅಂಗಡಿ ಮೂಲಕ ತಲಪಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ತೀರ್ಮಾನದಂತೆ ನ್ಯಾಯಬೆಲೆ ಅಂಗಡಿ ಮೂಲಕವೇ ಆಹಾರ ಕಿಟ್‍ಗಳನ್ನು ವಿತರಿಸುವಂತೆ ಸೂಚನೆ ನೀಡಿದ್ದು, ಅದರಂತೆ ಅನುಸರಿಸಬೇಕು ಎಂದು ಹೇಳಿದರು.

ಈಗಾಗಲೇ ಆಹಾರ ಮತ್ತು ನಾಗರಿಕ ಸಚಿವರು 50 ಸಾವಿರ ಸಂತ್ರಸ್ತ ಕುಟುಂಬಗಳಿಗೆ ವಿಶೇಷ ಅನ್ನಭಾಗ್ಯ ಯೋಜನೆಯಡಿ ಆಹಾರ ಕಿಟ್‍ಗಳನ್ನು ವಿತರಿಸಲು ಚಾಲನೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ತೀವ್ರ ಅತಿವೃಷ್ಟಿಗೆ ತುತ್ತಾಗಿರುವ ಮದೆ, ಮಕ್ಕಂದೂರು, ಗಾಳಿಬೀಡು, ಮಾದಾಪುರ ಮತ್ತಿತರ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಕೂಡಲೇ ಆಹಾರ ಕಿಟ್‍ಗಳನ್ನು ಪೂರೈಸುವಂತೆ ಸೂಚನೆ ನೀಡಿದರು.

ಮುಟ್ಲು, ಹಮ್ಮಿಯಾಲ, ಕಾಲೂರು, ಗರ್ವಾಲೆ, ಸೂರ್ಲಬ್ಬಿ ಮತ್ತಿತರ ಗ್ರಾಮಗಳಿಗೆ ಸಂಚಾರಿ ವಾಹನದ ಮೂಲಕ ಆಹಾರ ಕಿಟ್‍ಗಳನ್ನು ವಿತರಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಆಹಾರ ಕಿಟ್ ವಿತರಿಸುವ ಸಂಬಂಧ ಹೆಚ್ಚುವರಿ ಸಂಚಾರಿ ವಾಹನ ಅಗತ್ಯವಿದ್ದಲ್ಲಿ ಮೈಸೂರಿನಿಂದ ತರಿಸಿಕೊಳ್ಳಬೇಕು. ಹಾಗೆಯೇ ಮೊಬೈಲ್ ವಾಹನ ಗ್ರಾಮಕ್ಕೆ ಹೋಗುವ ಮೊದಲೇ ಮಾಹಿತಿ ನೀಡುವಂತೆ ಸಲಹೆ ಮಾಡಿದರು.

ಈಗಾಗಲೇ 10 ಸಾವಿರ ಆಹಾರ ಕಿಟ್‍ಗಳು ಬಂದಿದ್ದು, ವಿತರಣೆಯಾಗುತ್ತಿದೆ. ಉಳಿದ 40 ಸಾವಿರ ಆಹಾರ ಕಿಟ್‍ಗಳನ್ನು ಇಂದೇ ತರಿಸಿಕೊಂಡು ತ್ವರಿತವಾಗಿ ವಿತರಿಸುವಂತೆ ಸೂಚನೆ ನೀಡಿದರು.

ಹೆಚ್ಚುವರಿ ಸೀಮೆ ಎಣ್ಣೆಯನ್ನು ತರಿಸಿಕೊಂಡು ಅತಿವೃಷ್ಟಿ ಪ್ರದೇಶದಲ್ಲಿರುವ ಕುಟುಂಬಗಳಿಗೆ ಒದಗಿಸಬೇಕು ಎಂದು ಸೂಚನೆ ನೀಡಿದರು. ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ, ಉಪ ನಿರ್ದೇಶಕ ಪುಟ್ಟಸ್ವಾಮಿ, ಆಹಾರ ಇಲಾಖೆಯ ಇನ್ಸ್‍ಪೆಕ್ಟರ್‍ಗಳು, ಐಎಎಸ್ ಪ್ರೊಬೆಷನರ್ ಅಧಿಕಾರಿಗಳು ಇತರರು ಇದ್ದರು.