ಕುಶಾಲನಗರ, ಆ. 30: ಕೊಡಗು ಜಿಲ್ಲೆ ಹಾಗೂ ನೆರೆಯ ಮೈಸೂರು ಗಡಿಭಾಗದಲ್ಲಿ ಕಳೆದ 1 ತಿಂಗಳ ಅವಧಿ ಯಲ್ಲಿ ಉಂಟಾಗಿರುವ ಮಳೆಹಾನಿ ಯಿಂದ ಕಾರ್ಮಿಕರಿಗೆ ಕೂಲಿ ಕೆಲಸ ದೊರೆಯದೆ ಅತಂತ್ರ ಸ್ಥಿತಿ ಎದುರಿಸು ತ್ತಿದ್ದಾರೆ ಎಂದು ಸಿಪಿಐಎಂಎಲ್ ಲಿಬರೇಷನ್ ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ. ಕುಶಾಲನಗರ ಬಸವನಹಳ್ಳಿಯ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರ ಸೇರಿದಂತೆ ಸುತ್ತಮುತ್ತಲ ಗಿರಿಜನ ಹಾಡಿಗಳಿಗೆ ಭೇಟಿ ನೀಡಿದ ಸಂಸ್ಥೆಯ ರಾಜ್ಯ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಮೈಸೂರು ಜಿಲ್ಲಾ ಕಾರ್ಯದರ್ಶಿ ಯಾಗಿರುವ ಸಿ. ಜವರಯ್ಯ ಮಾಹಿತಿ ನೀಡಿದ್ದು, ಕಾಫಿ ತೋಟದಲ್ಲಿ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದು ಕೂಲಿ ಕಾರ್ಮಿಕರು ತಮ್ಮ ಕುಟುಂಬವನ್ನು ನಿಭಾಯಿಸಲು ಪರದಾಡುತ್ತಿದ್ದಾರೆ. ಕೊಡಗು ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಿದ್ದರೂ ಸರಕಾರದ ನಿರ್ಲಕ್ಷ್ಯದಿಂದ ಯಾವದೇ ಕಾರ್ಯ ಕ್ರಮಗಳು ಅನುಷ್ಠಾನ ಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪ್ರಕೃತಿ ವಿಕೋಪ ಸಂದರ್ಭ ಜಿಲ್ಲೆಗೆ ಆಗಮಿಸಿದ ಸಂತ್ರಸ್ತರ ಪರಿಹಾರ ಆಹಾರ ಸಾಮಗ್ರಿಗಳು ಕೂಡ ಗಿರಿಜನ ಹಾಡಿಗಳು ಮತ್ತು ಆದಿವಾಸಿಗಳ ಪುನರ್ವಸತಿ ಕೇಂದ್ರಗಳಿಗೆ ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಅವರು ತಿಳಿಸಿದ್ದಾರೆ. ಕೆಲವೆಡೆ ಗಿರಿಜನ ಹಾಡಿಗಳಲ್ಲಿ ಮಳೆಹಾನಿ ಉಂಟಾಗಿದ್ದು ಅಲ್ಲಿನ ಕುಟುಂಬ ಸದಸ್ಯರಿಗೆ ಮೂಲಭೂತ ವ್ಯವಸ್ಥೆಗಳ ಕೊರತೆ ಕೂಡ ಎದುರಾಗಿದೆ ಎಂದಿರುವ ಜವರಯ್ಯ ತಕ್ಷಣ ಸರಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ. ಜಿಲ್ಲೆಯ ಕಟ್ಟೆಹಾಡಿ, ಮಾವಿನಹಳ್ಳ, ಬಸವನಹಳ್ಳಿ ಮತ್ತಿತರ ಹಾಡಿಗಳಿಗೆ ತಂಡ ಭೇಟಿ ನೀಡಿದ್ದು ಅಲ್ಲಿನ ಗಿರಿಜನರ ಜೊತೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಆದಿವಾಸಿಗಳು ಮತ್ತು ಗಿರಿಜನರ ಸಮಸ್ಯೆಗಳ ತಾತ್ಕಾಲಿಕ ಪರಿಹಾರಕ್ಕಾಗಿ ಸಿಪಿಐಎಂಎಲ್ ಲಿಬರೇಷನ್ ಮೂಲಕ 10 ತಂಡಗಳನ್ನು ರಚಿಸಿರುವದಾಗಿ ತಿಳಿಸಿದ್ದಾರೆ.