ನವದೆಹಲಿ, ಆ. 30: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಕೊಡಗಿನ ಪ್ರವಾಹಕ್ಕೆ ನೆರವು ನೀಡುವಂತೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಪ್ರಧಾನಮಂತ್ರಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ, ಕೊಡಗು ಪ್ರವಾಹ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದರು. ಸಿಎಂ ಕುಮಾರಸ್ವಾಮಿ ಅವರಿಗೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಸಚಿವರಾದ ಬಂಡೆಪ್ಪ ಕಾಶೆಂಪೂರ್ ಹಾಗೂ ಆರ್.ವಿ. ದೇಶಪಾಂಡೆ ಅವರು ಸಾಥ್ ನೀಡಿದರು. ತಾ. 24 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಸಿಎಂ ಕುಮಾರಸ್ವಾಮಿ ಅವರು, ಕೊಡಗು ಪ್ರವಾಹ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ರೂ. 2 ಸಾವಿರ ಕೋಟಿ ನೆರವು ನೀಡುವಂತೆ ಮನವಿ ಮಾಡಿದ್ದರು. ಪ್ರವಾಹದಿಂದಾಗಿ ಕನಿಷ್ಟ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 2,200 ಮನೆಗಳಿಗೆ ಹಾನಿಯಾಗಿದೆ ಎಂದು ಸಿಎಂ ಪತ್ರದಲ್ಲಿ ವಿವರಿಸಿದ್ದರು.
ಸಂಪುಟ ವಿಸ್ತರಣೆ : ಅವಕಾಶ ಕೋರಿದ ಸಿಎಂ
ನವದೆಹಲಿ, ಆ. 30: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸುಧೀರ್ಘ ಹೊತ್ತು ಮಾತುಕತೆ ನಡೆಸಿದ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರದ 100 ದಿನಗಳ ಕಾರ್ಯನಿರ್ವಹಣೆ ಬಗ್ಗೆ ರಾಹುಲ್ ಗಾಂಧಿಗೆ ಅಭಿನಂದನೆ ಸಲ್ಲಿಸಿದರು. ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಿಂದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುವದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಂಪುಟ ವಿಸ್ತರಣೆ ಹಾಗೂ ನಿಗಮ, ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಸಂಬಂಧ ಶೀಘ್ರವೇ ನಿರ್ಧಾರ ಕೈಗೊಳ್ಳುವಂತೆ ರಾಹುಲ್ ಗಾಂಧಿ ಅವರ ಬಳಿ ಮನವಿ ಮಾಡಲಾಗಿದೆ ಎಂದು ಹೇಳಿದರು.
ಏಕಕಾಲಕ್ಕೆ ಚುನಾವಣೆ : ಆಯೋಗ ಶಿಫಾರಸ್ಸು
ನವದೆಹಲಿ, ಆ. 30: ನಿರಂತರ ಚುನಾವಣಾ ಪ್ರಕ್ರಿಯೆ ತಡೆಗಟ್ಟಲು ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆ ನಡೆಸುವುದು ಪರಿಹಾರವಾಗಲಿದೆ ಎಂದು ಕರಡು ವರದಿಯಲ್ಲಿ ತಿಳಿಸಿರುವ ಕಾನೂನು ಆಯೋಗ, ಚುನಾವಣಾ ಕಾನೂನು ಪ್ರಕ್ರಿಯೆ ಹಾಗೂ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಶಿಫಾರಸ್ಸು ಮಾಡಿದೆ. ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಉಳಿದ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವಂತೆ ಶಿಫಾರಸು ಮಾಡಿರುವ ಆಯೋಗ ಕರಡು ವರದಿಯನ್ನು ಕಾನೂನು ಸಚಿವಾಲಯಕ್ಕೆ ಸಲ್ಲಿಸಿದೆ. ಏಕಕಾಲದಲ್ಲಿ ಚುನಾವಣೆ ನಡೆಸುವದರಿಂದ ಸಾರ್ವಜನಿಕರ ಹಣ ಉಳಿತಾಯವಾಗುತ್ತದೆ. ಭದ್ರತಾ ಪಡೆ ಹಾಗೂ ಆಡಳಿತಾತ್ಮಕ ವ್ಯವಸ್ಥೆಯಲ್ಲಿನ ಹೊರೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಸರ್ಕಾರದ ನೀತಿಗಳನ್ನು ಉತ್ತಮವಾಗಿ ಅನುಷ್ಠಾನಗಳಿಸಬಹುದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಏಕಕಾಲದಲ್ಲಿ ಚುನಾವಣೆ ನಡೆಸುವದರಿಂದ ದೇಶದಲ್ಲಿನ ಆಡಳಿತಾತ್ಮಕ ಯಂತ್ರ ಚುನಾವಣೆ ಬದಲಿಗೆ ನಿರಂತರವಾಗಿ ಅಭಿವೃದ್ಧಿ ಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತದೆ.
ಮತ್ತೊಂದು ರಾಜ್ಯದಲ್ಲಿ ಮೀಸಲಾತಿ ಇಲ್ಲ
ನವದೆಹಲಿ, ಆ. 30: ಒಂದು ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ(ಎಸ್‍ಸಿ-ಎಸ್‍ಟಿ)ದ ಸದಸ್ಯರು ಮತ್ತೊಂದು ರಾಜ್ಯದಲ್ಲಿ ಮೀಸಲಾತಿ ಸೌಲಭ್ಯ ಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಮತ್ತೊಂದು ರಾಜ್ಯಕ್ಕೆ ವಲಸೆ ಹೋದ ಎಸ್ಸಿ-ಎಸ್ಟಿ ಸದಸ್ಯರು ಆ ರಾಜ್ಯದಲ್ಲಿ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹರಲ್ಲ ಎಂದು ನ್ಯಾಯಮೂರ್ತಿ ರಂಜನ್ ಗೋಗೊಯಿ ನೇತೃತ್ವದ ಸಂವಿಧಾನಿಕ ಪೀಠ ಸ್ಪಷ್ಟಪಡಿಸಿದೆ. ಒಂದು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಎಂದು ಸೂಚಿಸಿದ ವ್ಯಕ್ತಿಯು ಮತ್ತೊಂದು ರಾಜ್ಯದಲ್ಲಿಯೂ ತಾನು ಪರಿಶಿಷ್ಟ ಜಾತಿಯ ವ್ಯಕ್ತಿ ಎಂದು ಘೋಷಿಸಲ್ಪಟ್ಟಿದೆ ಎಂಬ ಆಧಾರದ ಮೇಲೆ ಮೀಸಲಾತಿ ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಇತರೆ ರಾಜ್ಯಗಳ ಎಸ್ಸಿ-ಎಸ್ಟಿ ಸದಸ್ಯರು ದೆಹಲಿಯ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಸೌಲಭ್ಯ ಪಡೆಯಬಹುದೆ ಎಂಬ ಕುರಿತು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ಈ ತೀರ್ಪು ನೀಡಿದೆ.