ಸುಸೋಮವಾರಪೇಟೆ, ಆ. 30: ಪಶುಪಾಲನಾ ಇಲಾಖೆಯಿಂದ ಪ್ರಕೃತಿ ವಿಕೋಪಕ್ಕೊಳಗಾದ ಜಾನುವಾರುಗಳ ರಕ್ಷಣೆ ಹಾಗೂ ಪೋಷಣೆಯ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಈವರೆಗೆ ತಾಲೂಕಿನ 13 ಗ್ರಾಮಗಳಲ್ಲಿ ಸಂಕಷ್ಟಕ್ಕೊಳಗಾದ ಜಾನುವಾರುಗಳ ರಕ್ಷಣೆ, ಚಿಕಿತ್ಸೆ ಹಾಗೂ ಕೂಡಿಗೆಯಲ್ಲಿರುವ ಗೋಶಾಲೆಗೆ ಸಾಗಿಸುವ ಕಾರ್ಯ ಇಲಾಖೆಯ ವತಿಯಿಂದ ಸಮರೋಪಾದಿ ಯಲ್ಲಿ ನಡೆಯುತ್ತಿದೆ. ಇದರೊಂದಿಗೆ ಹಾಸನ ಕೆಎಂಎಫ್ ಸೇರಿದಂತೆ ದಾನಿಗಳಿಂದ ಬಂದಿರುವ ಪಶು ಆಹಾರವನ್ನು ಸಂತ್ರಸ್ತ ಜಾನುವಾರುಗಳಿಗೆ ಮಾಲೀಕರ ಮೂಲಕ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ಪಶುವೈದ್ಯರ ನೇತೃತ್ವದಲ್ಲಿ 3 ತಂಡಗಳನ್ನು ರಚಿಸಿ, ಇಲಾಖೆಯ 3 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಸೋಮವಾರಪೇಟೆ, ಶಾಂತಳ್ಳಿ, ಐಗೂರು, ಮಾದಾಪುರ, ಸುಂಟಿಕೊಪ್ಪಗಳಲ್ಲಿರುವ ಪಶು ಆಸ್ಪತ್ರೆಗಳ ಮೂಲಕವೂ ಪಶು ಆಹಾರ ವಿತರಿಸುವ ಕಾರ್ಯ ನಡೆಯುತ್ತಿದೆ. ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮೂಲಕ ಪಶು ಆಹಾರ ವಿತರಿಸಲಾಗಿದೆ. ಈ ಸಂದರ್ಭ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ಪಶುವೈದ್ಯ ಡಾ. ಶ್ರೀದೇವ್, ಸಿಬ್ಬಂದಿ ಪನ್ನೀರ್, ಚಾಲಕ ದರ್ಶನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.