ಮಡಿಕೇರಿ, ಆ. 30: ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ರಸ್ತೆಗಳು ಹಾನಿಗೊಳಗಾಗಿ ಖಾಸಗಿ ಬಸ್ಗಳ ಓಡಾಟಕ್ಕೆ ಕಳೆದ ಮೂರು ತಿಂಗಳಿನಿಂದ ತೀವ್ರ ತೊಂದರೆಯಾಗಿದ್ದು, ಸರಕಾರವು ರಸ್ತೆ ತೆರಿಗೆ ಮನ್ನಾಗೊಳಿಸುವಂತೆ ಕೊಡಗು ಬಸ್ ಮಾಲೀಕರ ಸಂಘ ಆಗ್ರಹಿಸಿದೆ.
ಸಂಘದ ಪದಾಧಿಕಾರಿಗಳು ಈ ಸಂಬಂಧ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ರಾಜ್ಯ ಸಾರಿಗೆ ಸಚಿವರು, ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಅಲ್ಲದೆ ಜಿಲ್ಲೆಯ ಕೇಂದ್ರ ಮಡಿಕೇರಿಯಿಂದ ಬಹುತೇಕ ಮಾರ್ಗಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿರುವ ಪರಿಣಾಮ ಬಸ್ಗಳಿಗೆ ಇಂಧನಕ್ಕೂ ತೊಂದರೆಯಾಗಿ ಮಾಲೀಕರೊಂದಿಗೆ, ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗಿ ಗಮನ ಸೆಳೆದಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರದ ಗಮನ ಸೆಳೆದಿರುವ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಉಪಾಧ್ಯಕ್ಷ ಎ.ಜಿ. ಬೋಪಣ್ಣ, ಕಾರ್ಯದರ್ಶಿ ಜನಾರ್ಧನ ಪ್ರಭು ಹಾಗೂ ಖಜಾಂಚಿ ಸುಬ್ಬಯ್ಯ ಸರಕಾರ ಮತ್ತು ಜಿಲ್ಲಾಡಳಿತ ಅಗತ್ಯ ಸಹಕಾರದೊಂದಿಗೆ ತೆರಿಗೆ ಮನ್ನಾಗೊಳಿಸಿ, ಬಸ್ಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡುವಂತೆ ಆಗ್ರಹಪಡಿಸಿದ್ದಾರೆ.