ವೀರಾಜಪೇಟೆ, ಆ. 30: ಕಳೆದ ಮೂರು ತಿಂಗಳುಗಳಿಂದ ವೀರಾಜಪೇಟೆ ವಿಭಾಗ ಸೇರಿದಂತೆ ತಾಲೂಕಿನಾದ್ಯಂತ ಸುರಿದ ಮಳೆಗೆ ವೀರಾಜಪೇಟೆ ಪಟ್ಟಣಕ್ಕೆ ನಲ್ಲಿ ನೀರು ಪೊರೈಸುವ ಬೇತರಿ ಗ್ರಾಮದ ಕಾವೇರಿ ಹೊಳೆಯ ದಡದಲ್ಲಿರುವ ಮೂಲ ಸ್ಥಾವರದಲ್ಲಿ ಮೂರು ಅಡಿಗಳಷ್ಟು ಅಧಿಕ ಮರಳು ತುಂಬಿದನ್ನು ಖಾಲಿ ಮಾಡಲಾಗಿದೆ. ಇದೇ ರೀತಿಯಲ್ಲಿ ಮೂಲಸ್ಥಾವರದ ಒತ್ತಾಗಿರುವ ಫಿಲ್ಟರ್‍ಬೆಡ್‍ನ್ನು ಶುಚಿಗೊಳಿಸಿದ ನಂತರ ಪಟ್ಟಣಕ್ಕೆ ನೀರು ಪೊರೈಕೆಗೆ ಮರು ಚಾಲನೆ ನೀಡಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಪಿ. ಹೇಮ್‍ಕುಮಾರ್ ತಿಳಿಸಿದ್ದಾರೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಅತಿವೃಷ್ಟಿಯಿಂದ ಪ್ರವಾಹ ಉಂಟಾಗಿದ್ದು, ಈ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವದರಿಂದ ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸುಮಾರು 23 ತೆರೆದ ಬಾವಿಗಳಿಗೆ ಬ್ಲೀಚಿಂಗ್ ಪೌಡರ್‍ನ ರಾಸಾಯನಿಕ ಮಿಶ್ರಣ ಬಳಸಿ ಶುದ್ಧೀಕರಿಸಲಾಗಿದೆ. ಕಾವೇರಿ ಹೊಳೆಯ ದಡದಲ್ಲಿರುವ ಮೂಲ ಸ್ಥಾವರ ಸೇರಿದಂತೆ ಸುತ್ತ ಮುತ್ತಲ ಪ್ರದೇಶವನ್ನು ಶುಚಿಗೊಳಿಸಲಾಗಿದೆ ಎಂದು ಹೇಮ್‍ಕುಮಾರ್ ತಿಳಿಸಿದರು.