ಮಡಿಕೇರಿ, ಆ. 30: ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮ ವತಿಯಿಂದ ಕೊಡಗಿನ ಅನೇಕ ಕಡೆಗಳಲ್ಲಿ ನೆರೆ ಪರಿಹಾರ ವಿತರಣೆಯ ಸೇವೆಯನ್ನು ಕೈಗೊಂಡಿದ್ದರು.
ಅನೇಕ ಪರಿಹಾರ ಕೇಂದ್ರಗಳಿಗೆ ಅಧ್ಯಕ್ಷ ಶ್ರೀ ಬೋಧಸ್ವರೂಪಾನಂದಜೀ ಮಹಾರಾಜ್ ನೇತೃತ್ವದಲ್ಲಿ ತಂಡವೊಂದು ಭೇಟಿ ನೀಡಿ ಅವಶ್ಯಕತೆಯಿರುವ ವಸ್ತುಗಳ ಪೂರೈಕೆ ಕಾರ್ಯವನ್ನು ಕೈಗೊಂಡಿದ್ದರು.
ಬೆಂಗಳೂರು, ಮೈಸೂರು, ಶ್ರೀರಂಗಪಟ್ಟಣ, ಹುಬ್ಬಳ್ಳಿ, ದಾವಣಗೆರೆ, ಕುಣಿಗಲ್, ಮಂಡ್ಯ ಮುಂತಾದ ವುಗಳಿಂದ ಆಶ್ರಮದ ಭಕ್ತಾದಿಗಳು ಶ್ರಮಪಟ್ಟು ನಮ್ಮ ಕೊಡಗಿನ ಜನತೆಗೆ ವಿತರಣೆಗೆಂದು ನೀಡಿದ್ದ ಸರಕುಗಳನ್ನು ಆಶ್ರಮವು ವಿತರಿಸಿದೆ.
ಈವರೆಗೆ ಸುಮಾರು 457 ಕುಟುಂಬಗಳಿಗೆ ವಿತರಿಸಲಾಗಿದೆ. ಒಂದು ಕುಟುಂಬಕ್ಕೆ ಒಂದು ಕಿಟ್ನಲ್ಲಿ ಸುಮಾರು 1500 ರೂಪಾಯಿ ಬೆಲೆಬಾಳುವ ವಸ್ತುಗಳಾದ 2 ಲೀ. ನೀರು, 1 ಲೀ. ಹಾಲು, 5ಕೆಜಿ ಅಕ್ಕಿ, ಕಂಬಳಿ, ಹೊದಿಕೆ, ಚಾಪೆ, ಸೊಳ್ಳೆ ಬತ್ತಿ, ಮ್ಯಾಗಿ. ಬಿಸ್ಕತ್ತು, ಬೆಂಕಿ ಪಟ್ಟಣ, ಕಾಫಿ ಪುಡಿ, ಬ್ರಷ್, ಟೂತ್ಪೇಸ್ಟ್, ಸೋಪು, ಬಟ್ಟೆ ಸೋಪು, ಮೇಣದ ಬತ್ತಿ, ಟವಲ್, ಅಯೋಡೆಕ್ಸ್, ಸ್ಯಾನಿಟರಿ ಪ್ಯಾಡ್ ಮುಂತಾದ ವಸ್ತುಗಳನ್ನು ವಿತರಿಸಲಾಗಿದೆ.
ಇದಲ್ಲದೇ ಕರಡಿಗೋಡು ಬಸವೇಶ್ವರ ಪರಿಹಾರ ಕೇಂದ್ರದಲ್ಲಿ ಚಾಮುಂಡಿ ಬೆಟ್ಟ ದೇವಾಲಯದ ನೌಕರರ ಸಂಘದಿಂದ ಆಶ್ರಮಕ್ಕೆ ವಿತರಣೆಗೆಂದು ನೀಡಿದ್ದ ಸುಮಾರು 150 ಸೀರೆಗಳನ್ನು ನಿರಾಶ್ರಿತರಿಗೆ ವಿತರಿಸಲಾಯಿತು. ಇದುವರೆಗೆ ಸುಮಾರು 200 ಕಂಬಳಿಗಳನ್ನು ಹಲವಾರು ಕಡೆಗಳಲ್ಲಿ ವಿತರಿಸಲಾಗಿದೆ.
ನಿರಾಶ್ರಿತರ ಬಟ್ಟೆ ಒಗಿಯುವ ಸಮಸ್ಯೆಗೆ ವಿನೂತನ ರೀತಿಯಲ್ಲಿ ಸ್ಪಂದಿಸಿದ ಆಶ್ರಮವು, ಮಡಿಕೇರಿಯ ಚೌಡೇಶ್ವರಿ ದೇವಾಲಯ ಹಾಗೂ ಬ್ರಾಹ್ಮಣರ ಸಂಘಕ್ಕೆ ಒಂದೊಂದು ವಾಷಿಂಗ್ ಮಿಷಿನ್ ಅವಶ್ಯಕತೆಯನ್ನು ಪೂರೈಸಿದೆ.