ಮಡಿಕೇರಿ, ಆ. 30: ಕೊಡಗಿನಲ್ಲಿ ಕಂಡು ಕೇಳರಿಯದಷ್ಟು ಪ್ರಾಕೃತಿಕ ವಿಕೋಪ ಎದುರಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆಯ ಎಲ್ಲಾ ಶಾಸಕರು ತಮ್ಮ ಪ್ರದೇಶ ಅಭಿವೃದ್ಧಿ ನಿಧಿಯಿಂದ ತಲಾ ರೂ. 25 ಲಕ್ಷವನ್ನು ಕೊಡಗಿಗೆ ನೀಡಬೇಕೆಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಸಲಹೆ ಮಾಡಿದ್ದಾರೆ.
ಈ ಸಂಬಂಧ ಅವರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸರಕಾರದ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಮುಖೇನ ಗಮನ ಸೆಳೆದಿದ್ದಾರೆ. ದೇಶಕ್ಕೆ ಮಹಾನ್ ಸೇನಾನಿಗಳಾದ ಫೀ.ಮಾ. ಕಾರ್ಯಪ್ಪ, ಜನರಲ್ ಕೆ.ಎಸ್. ತಿಮ್ಮಯ್ಯ ಸೇರಿದಂತೆ ಇಂದಿಗೂ ಸೈನಿಕರನ್ನು ನೀಡುತ್ತಿರುವ ಕೊಡಗಿಗೆ ಎದುರಾಗಿರುವ ಸಂಕಷ್ಟದ ಬಗ್ಗೆ ರಮೇಶ್‍ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.ಸದ್ಯದ ಪರಿಸ್ಥಿತಿಯಲ್ಲಿ ವಿಧಾನ ಮಂಡಲ ಅದಿವೇಶನವೂ ಇಲ್ಲದ ಕಾರಣ, ಪತ್ರ ಮುಖೇನ ಶಾಸಕರು ಗಳಿಗೆ ಸಲಹೆ ನೀಡುತ್ತಿರುವದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ವಿಧಾನಸಭಾ ಅಧ್ಯಕ್ಷರ ತೀರ್ಮಾನಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಜಿಲ್ಲೆಯ ಜನತೆಯ ಪರವಾಗಿ ವಿಧಾನಸಭಾ ಅಧ್ಯಕ್ಷ ರಮೇಶ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.