ಸೋಮವಾರಪೇಟೆ, ಆ.30 : ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಂದಲ್‍ಪಟ್ಟಿ ಎಂಬ ನೈಸರ್ಗಿಕ ಸ್ವರ್ಗದ ಕೆಳಗೆ ಇರುವ ಮಕ್ಕಂದೂರು ಗ್ರಾಮ ಪಂಚಾಯಿಗೆ ಒಳಪಡುವ ಮುಕ್ಕೋಡ್ಲು ಗ್ರಾಮ ಅಕ್ಷರಶಃ ನರಕವಾಗಿದೆ. ಈ ಹಿಂದೆ ಇದ್ದಂತಹ ಪ್ರಕೃತಿಯ ಸೌಂದರ್ಯ ಕುರೂಪವಾಗಿದ್ದು, ಇಲ್ಲಿನ ಜನಜೀವನ ಗ್ರಾಮದಿಂದ ಹೊರಗೆ ದಬ್ಬಲ್ಪಟ್ಟಿದೆ.ಮೇಲೆ ಸ್ವರ್ಗ, ಅದರ ಕೆಳಭಾಗದ ಮುಕ್ಕೋಡ್ಲು ನರಕ ಎಂಬಷ್ಟರ ಮಟ್ಟಿಗೆ ಮುಕ್ಕೋಡ್ಲು ಗ್ರಾಮ ಬದಲಾಗಿದ್ದು, ಇಲ್ಲಿ ವಾಸಿಸುತ್ತಿದ್ದ ನೂರಾರು ಮಂದಿ ಇತ್ತ ತಲೆಹಾಕಲಾರದಷ್ಟು ಗ್ರಾಮ ಬದಲಾಗಿದೆ. ಕಳೆದ 15ಕ್ಕೆ ಶುರುವಾದ ಭಾರೀ ಮಳೆ 16ನೇ ತಾರೀಕಿನಂದು ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಎಂತೆಂಥ ಮಳೆಯನ್ನೇ ನೋಡಿದ್ದ ಇಲ್ಲಿನ ಮಂದಿ ಈ ಸಾಲಿನ ಮಹಾಮಳೆಗೆ ಭಯ ಗೊಂಡಿದ್ದು, ಜೀವ ಉಳಿಸಿಕೊಳ್ಳಲು ಗ್ರಾಮವನ್ನೇ ಬಿಟ್ಟು ಹೊರ ಬಂದಿದ್ದರು. ಇದೀಗ ಮಳೆಯ ರೌದ್ರಾವತಾರ ಕಡಿಮೆಯಾಗಿದ್ದು, ತಮ್ಮ ಗ್ರಾಮಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

(ಮೊದಲ ಪುಟದಿಂದ) ಕಳೆದ 14 ದಿನಗಳಿಂದ ಗ್ರಾಮಕ್ಕೆ ತೆರಳಲಾಗದೇ ಪರಿಹಾರ ಕೇಂದ್ರ, ನೆಂಟರಿಷ್ಟರ ಮನೆಯಲ್ಲಿದ್ದ ಮಂದಿ ಇತ್ತೀಚೆಗೆ ಗ್ರಾಮಕ್ಕೆ ಆಗಮಿಸುತ್ತಿದ್ದು, ಬದಲಾಗಿರುವ ಮುಕ್ಕೋಡ್ಲು ಕಂಡು ಮರುಕ ಪಟ್ಟುಕೊಳ್ಳುತ್ತಿದ್ದಾರೆ.

ಶ್ರಮದಿಂದ ಉತ್ತು ಬಿತ್ತು ನಾಟಿ ಮಾಡಿದ್ದ ಗದ್ದೆಗಳು ಮರು ಭೂಮಿಯಂತೆ ಮರಳಿನಿಂದಾ ವೃತ್ತವಾಗಿದ್ದು, ಯಾರದೋ ತೋಟ ಮತ್ತಿನ್ಯಾರದೋ ಗದ್ದೆಯ ಮೇಲಿದೆ. ಕೆಲವರ ತೋಟವಂತೂ ಕಣ್ಮರೆ ಯಾಗಿದ್ದು, ಬೃಹತ್ ಮರಗಳು, ಕಾಫಿ, ಕರಿಮೆಣಸು ಇದ್ದ ಪ್ರದೇಶದಲ್ಲಿ ಕೆಂಪು ಮಣ್ಣು ಮಾತ್ರ ಕಾಣಸಿಗುತ್ತಿದೆ.

ವರುಣದ ರುದ್ರನರ್ತನಕ್ಕೆ ಮುಕ್ಕೋಡ್ಲು ಗ್ರಾಮದ ಸುಭಾಷ್ ಅವರ ಮನೆ ನಾಮಾವಶೇಷ ವಾಗಿದ್ದು, ಇಲ್ಲಿ ಮನೆ ಇತ್ತು ಎಂದರೆ ಯಾರೂ ನಂಬದ ಸ್ಥಿತಿಯಿದೆ. ಇದರೊಂದಿಗೆ ಆವಂಡಿ ಗ್ರಾಮದ ತಡಿಯಪ್ಪನ ಚಿಮ್ಮ ಕುಶಾಲಪ್ಪ ಅವರ ಮನೆ, ಕಾರು, ಚಿನ್ನ, ಹಣ, ಕರಿಮೆಣಸು, ಕಾಫಿ ಇತ್ಯಾದಿ ಎಲ್ಲಿ ಹೋಯಿತು ಎಂಬದೇ ತಿಳಿಯ ದಾಗಿದೆ. ಭೂ ಕುಸಿತ ಇವರ ಬದುಕಿನ ಸರ್ವಸ್ವವನ್ನೂ ಕಸಿದುಕೊಂಡಿದೆ.

ಮುಕ್ಕೋಡ್ಲು ಗ್ರಾಮದ ಶಾಂತೆಯಂಡ ಉತ್ತಯ್ಯ ಅವರಿಗೆ ಸೇರಿದ 2 ಮನೆ ಸಂಪೂರ್ಣ ನಾಶವಾಗಿದೆ. ನಂದೀರ ಸುಜು ಸೋಮಯ್ಯ, ಮೇಘತ್ತಾಳಿನ ಬೇರನ ಸವಿತ ಪೂವಯ್ಯ, ಬಿಲ್ಲವರ ರಾಜು ಅವರುಗಳ ಮನೆಗಳೂ ಕಣ್ಮರೆ ಯಾಗಿವೆ. ತೇಲಬೈಲು ವಿಜಯ ಪ್ರಕಾಶ್ ಸೇರಿದಂತೆ ನೂರಾರು ಮಂದಿಯ ಮನೆಗಳು ಭಾಗಶಃ ಕುಸಿತಗೊಂಡಿದ್ದು, ವಾಸಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ. ಮುಕ್ಕೋಡ್ಲು, ಆವಂಡಿ, ಹಚ್ಚಿನಾಡು ವ್ಯಾಪ್ತಿಯಲ್ಲಿ ಭಾರೀ ಅನಾಹುತಗಳು ಸಂಭವಿಸಿದ್ದು, ಗ್ರಾಮಕ್ಕೆ ಗ್ರಾಮವೇ ಮಹಾಮಳೆಯ ಹೊಡೆತಕ್ಕೆ ನಲುಗಿಹೋಗಿವೆ.

ಮಹಾಮಳೆಯಿಂದಾಗಿ ಮುಕ್ಕೋಡ್ಲು ಗ್ರಾಮ 2 ಭಾಗವಾಗಿ ವಿಂಗಡಣೆಯಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಭಾರೀ ಪ್ರಮಾಣದ ಭೂ ಕುಸಿತವಾಗಿದ್ದು, ಬೃಹತ್ ಗಾತ್ರದ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಹತ್ತಿರ ಹೋದರೆ ಸೊಂಟದವರೆಗೂ ಹೂತುಕೊಳ್ಳುವಷ್ಟು ಕೆಸರಿದೆ.

ರಸ್ತೆ ಸಂಪರ್ಕಕ್ಕೆ ಸಾಹಸ : ಮಕ್ಕಂದೂರು ಮೂಲಕ ಮುಕ್ಕೋಡ್ಲು ಸಂಪರ್ಕಿಸುವ ರಸ್ತೆ ಕೊಚ್ಚಿಹೋಗಿದ್ದು, ಇದೀಗ ಮಡಿಕೇರಿ-ಸುಂಟಿಕೊಪ್ಪ-ಮಾದಾಪುರ-ಹಟ್ಟಿಹೊಳೆ ಮಾರ್ಗವಾಗಿ ಮುಕ್ಕೋಡ್ಲು ಸಂಪರ್ಕಿಸುವ ಬಳಸು ದಾರಿಯಲ್ಲಿ ತಾತ್ಕಾಲಿಕ ಸಂಪರ್ಕ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಮುಕ್ಕೋಡ್ಲು ನಿವಾಸಿ, ಜಿ.ಪಂ. ಮಾಜಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಅವರು ಕಳೆದ 4 ದಿನಗಳಿಂದ ಸ್ಥಳೀಯ 30 ಮಂದಿಯ ತಂಡದೊಂದಿಗೆ ಯಂತ್ರಗಳ ಸಹಾಯದಿಂದ ರಸ್ತೆ ಸರಿಪಡಿಸಲು ಶ್ರಮಿಸುತ್ತಿದ್ದಾರೆ.

ಈ ಭಾಗದಲ್ಲಿ ಆಗಾಗ್ಗೆ ಸುರಿಯುವ ಮಳೆ, ಬೆಟ್ಟದ ಮೇಲಿನಿಂದ ಹರಿದುಬರುತ್ತಿರುವ ಜಲದ ಸೆಲೆಯಿಂದ ನಿರೀಕ್ಷಿತ ಯಶಸ್ಸು ಸಾಧ್ಯವಾಗುತ್ತಿಲ್ಲ. ಹಿಟಾಚಿ ಮತ್ತು ಜೆಸಿಬಿ ಯಂತ್ರಗಳಿಂದ ಮಣ್ಣು ತೆಗೆಯುತ್ತಿದ್ದಂತೆ ಮತ್ತೆ ಕುಸಿತ ಗೊಳ್ಳುತ್ತಿದೆ ಎಂದು ರವಿಕುಶಾಲಪ್ಪ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಸ್ತೆಯ ಬದಿಗೆ ಮರಳಿನ ಮೂಟೆ, ಮರದ ತುಂಡು ಸೇರಿದಂತೆ ದುರಸ್ತಿಗೀಡಾಗಿರುವ ವಿದ್ಯುತ್ ಕಂಬಗಳನ್ನು ಹಾಕಿ ಭೂ ಕುಸಿತವನ್ನು ತಡೆಯುವ ಯತ್ನ ಮಾಡಲಾಗುತ್ತಿದೆ. ಭದ್ರಕಾಳಿ ದೇವಾಲಯದವರೆಗೆ ರಸ್ತೆಗೆ ಬಿದ್ದಿದ್ದ ಮಣ್ಣು ತೆರವುಗೊಳಿಸ ಲಾಗಿದೆ. ಭದ್ರಕಾಳಿ ದೇವಾಲಯದ ಗರ್ಭಗುಡಿಯನ್ನು ಹೊರತುಪಡಿಸಿ ಬೇರೆಲ್ಲವೂ ಹಾನಿಗೀಡಾಗಿದೆ. ಈ ಮಾರ್ಗವಾಗಿ ಹಚ್ಚಿನಾಡು-ಮಾಂದಲಪಟ್ಟಿ ತಲಪಲು ಅಸಾಧ್ಯ. ಸುಮಾರು 2 ಕಿ.ಮೀ. ರಸ್ತೆಯೇ ಇಲ್ಲವಾಗಿದೆ. ಒಟ್ಟಾರೆ ಗ್ರಾಮಕ್ಕೆ ಸಂಪರ್ಕಿಸಲು ಪ್ರಥಮ ಆದ್ಯತೆಯಾಗಿ ರಸ್ತೆ ನಿರ್ಮಾಣವಾಗಬೇಕಿದೆ. ಆನಂತರವಷ್ಟೇ ಗ್ರಾಮದ ಒಳಭಾಗದಲ್ಲಿ ಆಗಿರುವ ಹಾನಿಯ ಸಂಪೂರ್ಣ ಚಿತ್ರಣ ಸಿಗುತ್ತದೆ ಎಂದು ರವಿಕುಶಾಲಪ್ಪ ಮಾಹಿತಿ ಒದಗಿಸಿದ್ದಾರೆ

ಈ ಮಾರ್ಗ ಸುಲಲಿತವಾದರೆ ಮುಕ್ಕೋಡ್ಲಿನ ಅರ್ಧ ಭಾಗವನ್ನು ಸಂಪರ್ಕಿಸಬಹುದಾಗಿದೆ. ಉಳಿದ ಅರ್ಧ ಭಾಗವನ್ನು ದೇವಸ್ತೂರು-ಹಚ್ಚಿನಾಡು-ಮಾಂದಲಪಟ್ಟಿ ಮಾರ್ಗವಾಗಿ ಸಂಪರ್ಕಿಸಬಹು ದಾಗಿದ್ದು, ರಸ್ತೆಯ ಮೇಲೆ ಕುಸಿದಿರುವ ಮಣ್ಣು ತೆರವುಗೊಳಿಸ ಲಷ್ಟೇ ಸದ್ಯಕ್ಕೆ ಆದ್ಯತೆ ನೀಡಲಾಗಿದೆ. ಕೆಲವೆಡೆ ರಸ್ತೆಯೇ ಸಂಪೂರ್ಣ ಕೊಚ್ಚಿ ಹೋಗಿದ್ದು, ಗ್ರಾಮಸ್ಥರು ಕಾಲ್ನಡಿಗೆಯಲ್ಲೇ ತೆರಳಬೇಕಿದೆ.

ಮೇಘತ್ತಾಳು ಗ್ರಾಮದಲ್ಲಿ ಸದ್ಯ ರವಿಕುಶಾಲಪ್ಪ ಮತ್ತು ಅವರ ಪತ್ನಿ ಜಾನ್ಸಿ ಅವರುಗಳು ಮಾತ್ರ ಉಳಿದಿದ್ದಾರೆ. ಇವರ ಮನೆಯಲ್ಲಿ ಗ್ರಾಮದವರ ಹಲವಷ್ಟು ಜಾನುವಾರುಗಳು ಆಶ್ರಯಪಡೆದಿವೆ. ಮುಕ್ಕೋಡ್ಲು,ಹಚ್ಚಿನಾಡು, ಆವಂಡಿ, ಮೇಘತ್ತಾಳು, ಹೊದಕಾನ ಭಾಗದಲ್ಲಿ 370ಕ್ಕೂ ಅಧಿಕ ಮನೆಗಳಿದ್ದು, ಈ ವ್ಯಾಪ್ತಿಯಲ್ಲಿ ಇದೀಗ 15 ರಿಂದ 20 ಮಂದಿಯಷ್ಟೇ ಇದ್ದಾರೆ. ಉಳಿದ ವರೆಲ್ಲರೂ ಮಹಾಮಳೆ ಯಿಂದ ಸಂಬಂಧಿಕರ ಮನೆ ಹಾಗೂ ಪರಿಹಾರ ಕೇಂದ್ರಗಳಲ್ಲಿ ನೆಲೆಸಿದ್ದಾರೆ. ಹಗಲಿನ ವೇಳೆ ಗ್ರಾಮಕ್ಕೆ ಆಗಮಿಸಿ ಜಾನುವಾರುಗಳಿಗೆ ಮೇವು ನೀಡಿದ ನಂತರ ವಾಪಸ್ ಆಗುತ್ತಿದ್ದಾರೆ.

ಒತ್ತಡ ಹೇರಿದ ನಂತರ ಸದ್ಯ ಗ್ರಾಮದಲ್ಲಿ ಮೊಬೈಲ್ ನೆಟ್‍ವರ್ಕ್ ಲಭ್ಯವಾಗಿದೆ. ಟವರ್ ಕೇಂದ್ರದಲ್ಲಿ ಜನರೇಟರ್ ಅಳವಡಿಸಿ ನೆಟ್‍ವರ್ಕ್ ನೀಡಿರುವದರಿಂದ ಪರಸ್ಪರ ಸಂವಹನ ಪ್ರಾರಂಭವಾಗಿದೆ ಎಂದು ರವಿಕುಶಾಲಪ್ಪ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಮಡಿಕೇರಿಯಿಂದ ವಿದ್ಯುತ್ ಸಂಪರ್ಕ ಪಡೆಯುವದು ಕಷ್ಟಸಾಧ್ಯ. ಈ ಹಿನ್ನೆಲೆ ಗ್ರಾಮಕ್ಕೆ ಮಾದಾಪುರದಿಂದ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಈ ಬಗ್ಗೆ ಅಧಿಕಾರಿಗಳು ತಕ್ಷಣ ಗಮನ ಹರಿಸಬೇಕು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಇನ್ನಷ್ಟು ಕ್ರಿಯಾಶೀಲ ರಾಗಬೇಕು ಎಂದು ಒತ್ತಾಯಿಸಿ ದ್ದಾರೆ. ಈ ಭಾಗದಲ್ಲಿರುವ ಮಾನಡ್ಕ ಕುಟುಂಬಸ್ಥರಿಗೆ ಸೇರಿದ 20 ಏಕರೆ ಗದ್ದೆ, ಶಾಂತೆಯಂಡ ಕುಟುಂಬಸ್ಥರ 15 ಏಕರೆ ಗದ್ದೆ, ಬೇರಣ್ಣನ ಕುಟುಂಬ, ಮಡ್ಲಂಡ, ಬೈಮನ, ಕಿರುವಾಲೆ ಲಿಂಗಾಯತರ ಕುಟುಂಬಕ್ಕೆ ಸೇರಿದ ಹತ್ತಾರು ಏಕರೆ ಗದ್ದೆ, ಕಾಫಿ ತೋಟ ಸಂಪೂರ್ಣ ನಾಶವಾಗಿದ್ದು, ನಷ್ಟವನ್ನು ಅಂದಾಜಿಸುವದೇ ಕಷ್ಟಸಾಧ್ಯವಾಗಿದೆ.

ಮಳೆಯ ಹೊಡೆತಕ್ಕೆ ಕಾಫಿ ಗಿಡಗಳು ಸಂಪೂರ್ಣ ನಾಶವಾಗಿದ್ದು, ಎಲೆಗಳೊಂದಿಗೆ ಕೊಂಬೆಗಳೂ ಕೊಳೆಯುತ್ತಿವೆ. ಸಣ್ಣಪುಟ್ಟ ತೊರೆಗಳೊಂದಿಗೆ, ಹಚ್ಚಿನಾಡು ಹೊಳೆ ಅಪಾಯದ ಮಟ್ಟ ಮೀರಿದ ಪರಿಣಾಮ ಹೊಳೆಪಾತ್ರದ ಗದ್ದೆಗಳು ಸಂಪೂರ್ಣ ಹಾಳಾಗಿವೆ. ಉಳಿದೆಡೆ ಭೂ ಕುಸಿದು ಗದ್ದೆಗಳೇ ಇಲ್ಲವಾಗಿವೆ.

‘ಕಳೆದೆರಡು ದಿನಗಳಿಂದ ಮಳೆ ಕಡಿಮೆಯಾಗಿರುವದರಿಂದ ಗ್ರಾಮಕ್ಕೆ ಬರುತ್ತಿದ್ದೇನೆ. ಮನೆ ಏನಾಗಿದೆಯೋ ಏನೋ..,ದನಕರುಗಳು ಏನಾದವೋ..’ ಎಂಬ ಆತಂಕದಲ್ಲೇ ಕಾಳಚಂಡ ದೇಚವ್ವ ಅವರು ಪರಿಹಾರ ಕೇಂದ್ರದಲ್ಲಿ ಸಿಕ್ಕಿದ ಕೆಲ ವಸ್ತುಗಳನ್ನು ಹೆಗಲಿಗೆ ಸಿಕ್ಕಿಸಿಕೊಂಡು ಗ್ರಾಮದತ್ತ ಹೆಜ್ಜೆ ಹಾಕಿದ್ದಾರೆ.

- ವಿಜಯ್ ಹಾನಗಲ್