ಮಡಿಕೇರಿ, ಆ. 30 : ಪ್ರಾಕೃತಿಕ ವಿಕೋಪಕ್ಕೆ ಸಿಲುಕಿರುವ ಮಕ್ಕಳಿಗೆ ಮಡಿಕೇರಿಯ ಸಂತ ಜೋಸೆಫರ ವಿದ್ಯಾಸಂಸ್ಥೆ ಸ್ಪಂದಿಸಿದೆ. ಈ ಬಾರಿ ಜಿಲ್ಲೆಯಲ್ಲಿ ಸುರಿದ ಮಹಾ ಮಳೆಗೆ ಪ್ರಕೃತಿ ವಿಕೋಪಕ್ಕೆ ತತ್ತರಿಸಿದ ಕೊಡಗು ಜಿಲ್ಲೆಯಲ್ಲಿ ಮನೆ, ಆಸ್ತಿಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದರು. ಅಲ್ಲದೇ ಮನೆ ಇದ್ದರು ಮನೆಗೆ ತೆರಳಲು ಮಾರ್ಗವಿಲ್ಲದೇ ಅಸುರಕ್ಷತೆಯ ಭಯದಲ್ಲಿರುವ ಸುಮಾರು 25 ವಿದ್ಯಾರ್ಥಿಗಳಿಗೆ ಮಡಿಕೇರಿಯ ಸಂತ ಜೋಸೆಫರ ವಿದ್ಯಾರ್ಥಿ ವಸತಿ ನಿಲಯದಲ್ಲಿ ಆಶ್ರಯ ನೀಡಿ ವಿದ್ಯಾಸಂಸ್ಥೆಯು ಮಾನವೀಯತೆಯನ್ನು ಮೆರೆದಿದೆ. ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಒಳಗೊಂಡಂತೆ ವಿದ್ಯಾರ್ಜನೆಗೆ ಬೇಕಾದ ಸಕಲ ಸಾಮಗ್ರಿಗಳನ್ನೂ ಪೂರೈಸುವದರ ಜೊತೆಗೆ ವಸತಿ ನಿಲಯದ ಶುಲ್ಕ ಪಾವತಿಸಿರುವ ವಿದ್ಯಾರ್ಥಿ ವರ್ಗದೊಂದಿಗೆ ಈ ಮಕ್ಕಳನ್ನು ಸೇರಿಸಿ ಅವರಲ್ಲಿ ಅನಾಥ ಪ್ರಜ್ಞೆ ಕಾಡದಂತೆ, ಕೀಳರಿಮೆ ಮೂಡದಂತೆ ಮಕ್ಕಳನ್ನು ಬೌಧಿಕ ಬೆಳವಣಿಗೆ, ಮಾನಸಿಕ ಸ್ಥಿರತೆ, ಆಧ್ಯಾತ್ಮಿಕ ಚಿಂತನೆ ಹಾಗೂ ಭಾವನಾತ್ಮಕ ಪ್ರಭುದ್ಧತೆಯತ್ತ ಕೊಂಡುಯ್ಯುವ ಪ್ರಯತ್ನ ನಡೆಸಲಾಗುತ್ತಿದೆ.
ಸದ್ಯಕ್ಕೆ ಸಂತ ಜೋಸೆಫರ ಸಿಸ್ಟರ್ಸ್‍ಗಳೇ ಈ ಮಕ್ಕಳ ಖರ್ಚು ವೆಚ್ಚಗಳ ಬಗ್ಗೆ ಕಾಳಜಿ ವಹಿಸಿದ್ದು ಒಂದಿಬ್ಬರು ದಾನಿಗಳು ಸಹಾಯಹಸ್ತ ಚಾಚುವ ಭರವಸೆ ನೀಡಿದ್ದಾರೆ. ಇಲ್ಲಿರುವ ಮಕ್ಕಳ ಊಟ, ವಸತಿ, ಓದು ಇತ್ಯಾದಿಗಳ ಬಗ್ಗೆ ಈ ಶೈಕ್ಷಣಿಕ ವರ್ಷದ ಏಪ್ರಿಲ್ ತಿಂಗಳವರೆಗೆ ಸಂತ ಜೋಸೆಫರ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಜವಬ್ದಾರಿವಹಿಸಲಿದೆ ಎಂದು ಸಂಸ್ಥೆಯ ಸಂಚಾಲಕಿಯರು ತಿಳಿಸಿದ್ದಾರೆ.