ಕುಶಾಲನಗರ, ಆ. 30: ಸಂತ್ರಸ್ತರ ಆಕಾಂಕ್ಷೆ, ನಿರೀಕ್ಷೆಗೆ ತಕ್ಕಂತೆ ಪರಿಹಾರ ವ್ಯವಸ್ಥೆ ಕಲ್ಪಿಸಲು ಪ್ರಥಮ ಆದ್ಯತೆ ನೀಡುವಂತೆ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕುಶಾಲನಗರದ ಹಾರಂಗಿ ರಸ್ತೆಯಲ್ಲಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಂತ್ರಸ್ತರು ಅಧಿಕಾರಿಗಳೊಂದಿಗೆ ಸಹಕರಿಸಿ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದ ಲೋಕಾಯುಕ್ತರು, ಯಾವದೇ ರೀತಿಯ ಕುಂದುಕೊರತೆ ಇಲ್ಲದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದರು.ಕುಶಾಲನಗರದ ವಾಲ್ಮೀಕಿ ಸಮುದಾಯ ಭವನ, ಡಾ. ಅಂಬೇಡ್ಕರ್ ಭವನ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಒಟ್ಟು 392 ಮಂದಿ ಸಂತ್ರಸ್ತರು ಆಶ್ರಯ ಪಡೆದಿದ್ದು ಪ್ರಾರಂಭದಲ್ಲಿ ಕೆಲವು ಸೌಕರ್ಯಗಳ ಕೊರತೆ ಹಿನ್ನೆಲೆ ಅಸಮಾಧಾನ ಭುಗಿಲೆದ್ದಿತ್ತು. ತಕ್ಷಣ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ ಲೋಕಾಯುಕ್ತರು ಮಾಧ್ಯಮಗಳಲ್ಲಿ (ಮೊದಲ ಪುಟದಿಂದ) ದಿಢೀರನೆ ಸುದ್ದಿಗಳನ್ನು ಬಿತ್ತರಿಸುವ ಸಂದರ್ಭ ಸಮಾಜಕ್ಕೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಚಿಕ್ಕಪುಟ್ಟ ತೊಡಕನ್ನು ಮಾಧ್ಯಮಗಳಲ್ಲಿ ಬಿಂಬಿಸದಂತೆ ಅವರು ಸಲಹೆ ನೀಡಿದರು. ಎಲ್ಲರೂ ಒಟ್ಟಿಗೆ ಸೇರಿ ಜನರ ಕಷ್ಟ ನಿವಾರಣೆಗೆ ಮುಂದಾಗಬೇಕು ಎಂದರು.ಲೋಕಾಯುಕ್ತರು ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿ ಅವರನ್ನು ಸಂತೈಸುವಲ್ಲಿ ಯಶಸ್ವಿಯಾದರಲ್ಲದೆ ಅಧಿಕಾರಿಗಳಿಗೆ ಸೂಕ್ತ ಸಲಹೆಗಳನ್ನು ನೀಡಿದರು. ಈ ಸಂದರ್ಭ ನ್ಯಾಯಾಧೀಶ ವಿಜಯಕುಮಾರ್ ರೈ, ಲೋಕಾಯುಕ್ತ ಎಸ್ಪಿಗಳಾದ ಮಾದಯ್ಯ, ಶಿವಕುಮಾರ್, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸಂಜಯ್, ವಿಶೇಷ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಭೂಮಾಪನಾ ಇಲಾಖೆಯ ಸಹಾಯಕ ನಿರ್ದೇಶಕ ಷಂಶುದ್ದೀನ್, ತಹಶೀಲ್ದಾರ್ ಮಹೇಶ್ ಮತ್ತಿತರ ಅಧಿಕಾರಿಗಳು ಇದ್ದರು.

ಸಂತ್ರಸ್ತ ಕೇಂದ್ರದಲ್ಲಿ ಕಂಡುಬಂದ ಹೈಲೈಟ್ಸ್

* ಕಳೆದ ಎರಡು ವಾರಗಳ ಅವಧಿ ಕಾಲ ಮಡಿಕೇರಿಯಲ್ಲಿದ್ದ 266 ಸಂತ್ರಸ್ತರು ಮತ್ತು ಸುಂಟಿಕೊಪ್ಪ ರಾಮ ಮಂದಿರದಲ್ಲಿದ್ದ 126 ಮಂದಿಯನ್ನು ಕುಶಾಲನಗರಕ್ಕೆ ಸ್ಥಳಾಂತರಿಸಲಾಗಿದೆ.

* ಶಿಬಿರದಲ್ಲಿ ತಾತ್ಕಾಲಿಕವಾಗಿ 16 ಮೊಬೈಲ್ ಶೌಚಾಲಯಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಕಟ್ಟಡದಲ್ಲಿರುವ 9 ಶೌಚಾಲಯಗಳನ್ನು ಸಂತ್ರಸ್ತರಿಗೆ ಬಳಸಲು ನೀಡಲಾಗಿದೆ. ನೆರೆಯ ಪ್ರಭಾಕರ್ ಎಂಬವರ ಮನೆಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯಲು ಬಾಟಲಿ ನೀರನ್ನು ಒದಗಿಸಲಾಗುತ್ತಿದೆ.

* ಸುಮಾರು 30 ವಿದ್ಯಾರ್ಥಿಗಳಿಗೆ ಸಮೀಪದ ಮೂಕಾಂಬಿಕ ಮತ್ತು ಕ್ರೈಸ್ಟ್ ಶಾಲೆಯಲ್ಲಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಿಕ್ಷಣ ಇಲಾಖೆಯಿಂದ 6 ಮಂದಿ ಶಿಕ್ಷಕರನ್ನು ನಿಯೋಜಿಸಲಾಗಿದೆ.

* ಸಂತ್ರಸ್ತರಿಗೆ ಗುರುತಿನ ಚೀಟಿ ನೀಡಲಾಗಿದೆ. ಪರಿಹಾರ ಕೇಂದ್ರದಿಂದ ಕುಶಾಲನಗರಕ್ಕೆ ಸರಕಾರಿ ಬಸ್ ಸಂಚಾರ ವ್ಯವಸ್ಥೆ, ಸಂತ್ರಸ್ತರ ಮನೆಗಳಿಗೆ ತೆರಳಲು ಉಚಿತ ಬಸ್‍ಪಾಸ್ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

* ಕೇಂದ್ರದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆಗೆ ವಿಶೇಷ ಚಿಕಿತ್ಸಾ ಕೇಂದ್ರ ತೆರೆಯಲಾಗಿದ್ದು ವೈದ್ಯಕೀಯ ತಂಡ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದೆ.

* ತಾತ್ಕಾಲಿಕ ಶೆಡ್‍ಗಳಿಗೆ ತೆರಳುವ ತನಕ ಪರಿಹಾರ ಕೇಂದ್ರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.

* ಹಾರಂಗಿ ರಸ್ತೆಯಿಂದ ಕೇಂದ್ರದ ತನಕ ಇರುವ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸುವದರೊಂದಿಗೆ ಬೀದಿದೀಪ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

* ಎರಡೂ ಕೇಂದ್ರಗಳಿಂದ ಸ್ಥಳಾಂತರಗೊಂಡ ಒಟ್ಟು 403 ಸಂತ್ರಸ್ತರಲ್ಲಿ 10 ಕ್ಕೂ ಅಧಿಕ ಮಂದಿ ಸ್ಥಳೀಯ ಪರಿಸ್ಥಿತಿಗೆ ಹೊಂದಾಣಿಕೆಯಾಗದೆ ಹಿಂತೆರಳಿದ ಪ್ರಸಂಗವೂ ನಡೆದಿದೆ.