ಸೋಮವಾರಪೇಟೆ, ಆ. 30: ಪ್ರವಾಹಕ್ಕೆ ತುತ್ತಾಗಿ ರಸ್ತೆ ಸಂಪರ್ಕದ ಕೊರತೆ ಎದುರಿಸುತ್ತಿರುವ ತಾಲೂಕಿನ ಹಟ್ಟಿಹೊಳೆ ನಿರ್ಮಲ ವಿದ್ಯಾಭವನದ ವಿದ್ಯಾರ್ಥಿಗಳನ್ನು ಸುಂಟಿಕೊಪ್ಪದ ಸೆಂಟ್ಮೇರೀಸ್ ಶಾಲೆಗೆ ವರ್ಗಾಯಿಸಲು ಪೋಷಕರ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಈ ಬಗ್ಗೆ ಅನುಮತಿಗಾಗಿ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಶಾಲಾ ಸಭಾಂಗಣದಲ್ಲಿ ನಡೆದ ಪೋಷಕರು ಮತ್ತು ಶಾಲಾಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ವಿಸ್ತøತ ಚರ್ಚೆ ನಡೆಯಿತು. ಹಟ್ಟಿಹೊಳೆಗೆ ಮಾದಾಪುರ ಮತ್ತು ಮಕ್ಕಂದೂರು ಭಾಗದಿಂದ ಸಂಪರ್ಕ ಕಲ್ಪಿಸಲು ರಸ್ತೆಯ ಕೊರತೆ ಎದುರಾಗಿರುವ ದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸುಂಟಿಕೊಪ್ಪದ ಶಾಲೆಗೆ ತರಗತಿಗಳನ್ನು ವರ್ಗಾಯಿಸಲು ನಿರ್ಧರಿಸಲಾಯಿತು.
ಸುಂಟಿಕೊಪ್ಪದ ಸೆಂಟ್ಮೇರೀಸ್ ಶಾಲೆಯಲ್ಲಿ ಅಗತ್ಯ ಕೊಠಡಿಗಳನ್ನು ಕಲ್ಪಿಸಲು ಆಡಳಿತ ಮಂಡಳಿ ಮುಂದಾಗಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆಗೆ ಪತ್ರ ಬರೆದು ತುರ್ತಾಗಿ ಅನುಮತಿ ಪಡೆಯಬೇಕೆಂದು ಸಭೆಯಲ್ಲಿದ್ದ ಪೋಷಕರು ಅಭಿಪ್ರಾಯಿಸಿದರು.
ಹಟ್ಟಿಹೊಳೆ ಭಾಗದಲ್ಲಿರುವ ವಿದ್ಯಾರ್ಥಿಗಳನ್ನು ಮಾರುತಿ ಓಮ್ನಿ ವ್ಯಾನಿನಲ್ಲಿ ಮಾದಾಪುರದವರೆಗೆ ಕರೆತಂದು, ಅಲ್ಲಿಂದ ಸುಂಟಿಕೊಪ್ಪಕ್ಕೆ ಶಾಲಾ ವಾಹನಗಳಲ್ಲಿ ಕರೆದುಕೊಂಡು ಹೋಗುವಂತೆ ತೀರ್ಮಾನಿಸ ಲಾಯಿತು. ತೀರಾ ಸಂಕಷ್ಟಕ್ಕೆ ಈಡಾಗುವ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ತಲಾ ಈರ್ವರಂತೆ ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗುವದು ಎಂದು ಸಭೆಯಲ್ಲಿದ್ದ 15ಕ್ಕೂ ಅಧಿಕ ಪೋಷಕರು ತಿಳಿಸಿದರು.
ಶಾಲೆಯಲ್ಲಿ 525 ವಿದ್ಯಾರ್ಥಿಗಳಿದ್ದು, ಸೋಮವಾರದಿಂದ 10ನೇ ತರಗತಿಯ ಪಾಠಗಳನ್ನು ಪ್ರಾರಂಭಿಸಬೇಕು. ಶಾಸಕ ಅಪ್ಪಚ್ಚು ರಂಜನ್ ಅವರು ಈ ಭಾಗದಲ್ಲಿ ರಸ್ತೆ ವ್ಯವಸ್ಥೆ ಕಲ್ಪಿಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಮಕ್ಕಳನ್ನು ಸದ್ಯದ ಮಟ್ಟಿಗೆ ಸುಂಟಿಕೊಪ್ಪದ ಶಾಲೆಗೆ ಕಳುಹಿಸಲು ಇಲಾಖೆಯಿಂದ ಅನುಮತಿ ಬೇಕಾಗಿದ್ದು, ಈ ಬಗ್ಗೆ ಶಾಸಕರನ್ನು ಭೇಟಿ ಮಾಡಿ ಸಹಕಾರ ಪಡೆಯಬೇಕೆಂದು ಸಭೆಯಲ್ಲಿದ್ದ ಅನೇಕರು ಅಭಿಪ್ರಾಯಿಸಿದರು.
ಶಾಲೆಯ ಕೆಲಸಕಾರ್ಯಗಳು, ತರಗತಿ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಗ್ರಾ.ಪಂ. ಸದಸ್ಯ ಮಜೀದ್, ವಾಹನ ಚಾಲಕರ ಸಂಘದ ಅಧ್ಯಕ್ಷ ಹನೀಫ್, ಪ್ರಮುಖರಾದ ಕೊಪ್ಪತಂಡ ಗಣೇಶ್, ಡಿ.ಕೆ. ಡಾಲಿ, ಕೆ.ಎಂ. ಹನೀಫ್, ದಾದು ಬೋಪಯ್ಯ ಅವರುಗಳನ್ನು ಒಳಗೊಂಡಂತೆ ಸಮಿತಿ ರಚಿಸಲಾಯಿತು.
ಸಭೆಯಲ್ಲಿ ಮೈಸೂರು ಧರ್ಮಕ್ಷೇತ್ರದ ಗುರು ಲೆಸ್ಲಿ ಮೋರಸ್, ಎಂಡಿಇಎಸ್ನ ಕಾರ್ಯದರ್ಶಿ ವಿಜಯ್, ಮಾಜಿ ವ್ಯವಸ್ಥಾಪಕ ಚಾಲ್ರ್ಸ್ ಜೋಸೆಫ್, ನಿರ್ಮಲ ವಿದ್ಯಾಭವನದ ವ್ಯವಸ್ಥಾಪಕ ಎಡ್ವರ್ಡ್ ವಿಲಿಯಂ ಸಲ್ಡಾನ, ಹಟ್ಟಿಹೊಳೆ ಚರ್ಚ್ನ ಗುರು ವಿಲಿಯಂ ಅಲ್ಬುಕರ್ಕ್, ಸಹಾಯಕ ಗುರುಗಳಾದ ಜೆರಾಲ್ಡ್ ಸಿಕ್ವೇರಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಭೆಯಲ್ಲಿ 500ಕ್ಕೂ ಅಧಿಕ ಪೋಷಕರು ಭಾಗವಹಿಸಿದ್ದರು.