ಮಡಿಕೇರಿ, ಆ. 31 : ಮಡಿಕೇರಿ ತಾಲೂಕಿನ ಬ್ರಹ್ಮಗಿರಿ ಬೆಟ್ಟದ ತಪ್ಪಲಲ್ಲಿ ವಾಸಿಸುವ ಕುಡಿಯ ಜನಾಂಗದವರು ಕಳೆದ ಎರಡು ತಿಂಗಳುಗಳಿಂದ ಕೂಲಿ ಕೆಲಸವಿಲ್ಲದಿರುವದರಿಂದ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದೆ. ಅತಿವೃಷ್ಟಿಯಿಂದ ಮುಂದಿನ ಎರಡು ತಿಂಗಳುಗಳ ಕಾಲವೂ ಕೂಲಿ ಕೆಲಸ ದೊರೆಯುವದು ಕಷ್ಟವಾಗಿದ್ದು, ಸರಕಾರ ಕುಡಿಯ ಜನಾಂಗದ ಕುಟುಂಬಗಳಿಗೆ ಮಾಸಿಕ 25 ಕೆ.ಜಿ ಅಕ್ಕಿ ಹಾಗೂ 5 ಲೀಟರ್ ಸೀಮೆಎಣ್ಣೆಯನ್ನು ಒದಗಿಸಬೇಕು ಎಂದು ಬುಡಕಟ್ಟು ಕೃಷಿಕರ ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷ ಕುಡಿಯರ ಎ. ಮುತ್ತಪ್ಪ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದಾಗಿ ಕೊಡಗಿನ ಬೆಳೆಗಾರರು ಸೇರಿದಂತೆ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಹಕಾರ ಸಂಸ್ಥೆ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಮಾಡಿರುವ ಎಲ್ಲಾ ವಿಧದ ಸಾಲಗಳನ್ನು ಸರಕಾರ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಐಟಿಡಿಪಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಶಿವಕುಮಾರ್ ಅವರು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಂದ ಜಿಲ್ಲೆಯ ಪರಿಶಿಷ್ಟ ಪಂಗಡದ ಜನತೆಗೆ ಹಲವಾರು ಯೋಜನೆಗಳು ತಲುಪುತ್ತಿವೆ. ಆದರೆ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡುವ ಕುರಿತು ಮಾಹಿತಿ ದೊರೆತ್ತಿದ್ದು, ಯಾವದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಮುತ್ತಪ್ಪ ಒತ್ತಾಯಿಸಿದರು.

ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಜೇನುಕುರುಬ, ಯರವ, ಸೋಲಿಗ ಮತ್ತು ಕಾಡುಕುರುಬ ಜನಾಂಗಗಳಿಗೆ ವಿತರಿಸಲಾಗುತ್ತಿದ್ದ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ಪ್ರಸಕ್ತ ಜಿಲ್ಲೆಯಲ್ಲಿರುವ 400 ಕುಡಿಯ ಜನಾಂಗದ ಕುಟುಂಬಗಳಿಗೂ ವಿಸ್ತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಜಿಲ್ಲೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಜೇನುಕುರುಬ, ಯರವ, ಸೋಲಿಗ ಕಾಡುಕುರುಬ ಜನಾಂಗದ ಕುಟುಂಬಗಳಿಗೆ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿತ್ತು. ಅದನ್ನು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಕುಡಿಯ ಜನಾಂಗದವರಿಗೂ ವಿಸ್ತರಿಸುವಂತೆ 2012 ರಿಂದಲೂ ಮನವಿ ನೀಡಿ ಹೋರಾಟಗಳನ್ನು ನಡೆಸಲಾಗಿತ್ತು. ಆದರೆ ಈ ಸಂಬಂಧ ಸರಕಾರದಿಂದ ಯಾವದೇ ಆದೇಶ ಹೊರಬಿದ್ದಿರಲಿಲ್ಲ. ಆದರೆ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಉಂಟಾದ ಹಾನಿಯಲ್ಲಿ ಕುಡಿಯ ಜನಾಂಗ ದವರಿಗೂ ತೀವ್ರ ಹಾನಿಯಾಗಿರು ವದನ್ನು ಹಾಗೂ ಮಳೆಗಾಲದಲ್ಲಿ ಕೂಲಿ ಕೆಲಸ ದೊರೆಯದೆ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿರು ವದರಿಂದ ತಮಗೂ ಪೌಷ್ಟಿಕ ಆಹಾರಗಳನ್ನು ಒದಗಿಸಬೇಕೆಂದು ಜಿಲ್ಲೆಗೆ ಭೇಟಿ ನೀಡಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿದ ಮೇರೆ ಇದೀಗ ಕುಡಿಯ ಜನಾಂಗದ 400 ಕುಟುಂಬಗಳಿಗೆ ಪೌಷ್ಟಿಕ ಆಹಾರ ವಿತರಿಸುವಂತೆ ಸರಕಾರ ಆದೇಶಿಸಿದೆ ಎಂದು ಅವರು ತಿಳಿಸಿದರು.

ಸಂಘದ ವತಿಯಿಂದ ಸಲ್ಲಿಸಿದ ಮನವಿಗೆ ಸ್ಪಂದಿಸಿದ ನಿರ್ದೇಶಕರು ಸರಕಾರದ ಗಮನ ಸೆಳೆಯುವ ದರೊಂದಿಗೆ ಈ ಆದೇಶವನ್ನು ಹೊರಡಿಸುವಲ್ಲಿ ಯಶಸ್ವಿಯಾಗಿದ್ದು, ಕುಡಿಯ ಜನಾಂಗಕ್ಕೂ ಪೌಷ್ಟಿಕ ಆಹಾರ ಸಾಮಗ್ರಿ ದೊರಕಿಸಲು ಕಾರಣರಾದ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಸಚಿವರು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಸಮಾಜ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ, ಜಿ.ಪಂ. ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಗಳು ಹಾಗೂ ಐಟಿಡಿಪಿ ಅಧಿಕಾರಿ ಗಳಿಗೆ ಕುಡಿಯ ಜನಾಂಗದ ಪರವಾಗಿ ಹಾಗೂ ಸಂಘಟನೆಯ ಪರವಾಗಿ ಕೃತಜ್ಞತೆ ಸಲ್ಲಿಸುವದಾಗಿ ಮುತ್ತಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಭಾಗಮಂಡಲ ಲ್ಯಾಂಪ್ಸ್ ಅಧ್ಯಕ್ಷ ಕೆ.ಕುಮಾರ, ಸಂಘಟನೆಯ ಪ್ರಮುಖರಾದ ಮಿಲನ್, ಬೋಪಯ್ಯ, ರತ್ನಾಕರ ಹಾಗೂ ನಾಣಯ್ಯ ಉಪಸ್ಥಿತರಿದ್ದರು.