ಕೂಡಿಗೆ, ಆ. 31: ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಬಸವ ಪೀಠಾಧ್ಯಕ್ಷ ಪೂಜ್ಯ ಶ್ರೀ ಮಹೇಂದ್ರಸ್ವಾಮಿಜಿ ಅವರು ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನಿರಾಶ್ರಿತರಿಗೆ ತೆರೆದಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ ಸ್ವಾಮೀಜಿ ಅವರು ಸಂತ್ರಸ್ತರಲ್ಲಿರುವ ವಿದ್ಯಾರ್ಥಿಗಳು ಇಚ್ಛೆಪಟ್ಟಲ್ಲಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ವಿದ್ಯಾರ್ಥಿ ಗಳಿಗೆ ಕೂಡಲಸಂಗಮದಲ್ಲಿ ತೆರೆದಿರುವ ವಿದ್ಯಾಪೀಠದಲ್ಲಿ ಉಚಿತವಾಗಿ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಕಲ್ಪಿಸಿಕೊಡಲಾಗುವದು ಎಂದರು.
ಕೂಡಲಸಂಗಮದ ಮಾತೆ ಮಹಾದೇವಿಯವರ ಪರವಾಗಿ ಅವರು ಕಳುಹಿಸಿಕೊಟ್ಟಿರುವ ದಿನೋಪಯೋಗಿ ಸಾಮಗ್ರಿಗಳನ್ನು ಸ್ವಾಮೀಜಿಯವರು ಸಾಂಕೇತಿಕವಾಗಿ ನೀಡಿ, ವಸ್ತುಗಳು ಸಂತ್ರಸ್ತರಿಗೆ ಸಿಗಬೇಕಾಗಿರುವ ನಿಟ್ಟಿನಲ್ಲಿ ಉಳಿದ ವಸ್ತುಗಳನ್ನು ಕಂದಾಯ ಇಲಾಖೆಯವರ ಸುಪರ್ದಿಗೆ ನೀಡಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್, ಗುಡ್ಡೆಹೊಸೂರಿನ ಚಂದ್ರಶೇಖರ್, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಜೇಶ್, ಹರೀಶ್, ಪ್ರಕಾಶ್, ಕೂಡುಮಂಗಳೂರು ಗ್ರಾ.ಪಂ. ಮಾಜಿ ಸದಸ್ಯ ಶೇಖರೇಗೌಡ, ಉದ್ಯಮಿ ಗೌತಮ್ ಸೇರಿದಂತೆ ಕೂಡಲಸಂಗಮ ವಿದ್ಯಾಸಂಸ್ಥೆಯ ಪದಾಧಿಕಾರಿಗಳು ಇದ್ದರು.