ಮಡಿಕೇರಿ, ಆ. 31: ಇಲ್ಲಿನ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಸಮರ್ಪಕ ನೀರಿನ ವ್ಯವಸ್ಥೆಯಿಲ್ಲದೆ ಬವಣೆ ಪಡುವಂತಾಗಿದೆ ಎಂದು ಆಡಳಿತ ಮುಖ್ಯಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇಂದು ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ವೈದ್ಯಕೀಯ ಕಾಲೇಜಿನ ಸ್ಥಿತಿಗತಿ ಬಗ್ಗೆ ಖುದ್ದು ಭೇಟಿ ನೀಡಿ ವೀಕ್ಷಣೆ ನಡೆಸಿದರು. ಪ್ರಸಕ್ತ ಮಳೆಯಿಂದಾಗಿ ಕಾಲೇಜು ಕಟ್ಟಡಕ್ಕೆ ಹಾನಿಯಾಗಿರುವ ಊಹಾಪೋಹಾಗಳ ಬಗ್ಗೆ ಅವರು ಮಾಹಿತಿ ಬಯಸಿದರು.
ಅಂತಹ ಯಾವದೇ ಆತಂಕಕಾರಿ ಸನ್ನಿವೇಶ ಎದುರಾಗಿಲ್ಲವೆಂದು ವೈದ್ಯಕೀಯ ಕಾಲೇಜು ಮುಖ್ಯಸ್ಥರಾದ ಡಾ. ಕಾರ್ಯಪ್ಪ ಹಾಗೂ ಮೇರಿ ನಾಣಯ್ಯ ಈ ಸಂದರ್ಭ ಸ್ಪಷ್ಟಪಡಿಸಿದರು. ಬದಲಾಗಿ ಸಂಸ್ಥೆಗೆ ಆಗಮಿಸುವ ಮಾರ್ಗದ ಅಲ್ಲಲ್ಲಿ ಭೂಕುಸಿತದಿಂದ ಹಾನಿ ಉಂಟಾಗಿರುವದಾಗಿ ಗಮನ ಸೆಳೆದರು.
ಉತ್ತಮ ಪರಿಸರದಲ್ಲಿ ತಲೆಯೆತ್ತಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಟ್ಟಡವು ಸುಸಜ್ಜಿತವಾಗಿದ್ದು, ಪ್ರಸಕ್ತ ಮೂರನೇ ವರ್ಷದ ಕಲಿಕೆಯೊಂದಿಗೆ ವಿದ್ಯಾರ್ಥಿಗಳ ಸಂಖ್ಯೆ 450ಕ್ಕೆ ಏರಲಿದ್ದು, ನೀರಿನ ತೊಂದರೆ ಎದುರಿಸುತ್ತಿರುವದಾಗಿ ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಸರಕಾರ ಹಾಗೂ ಸಂಬಂಧಿಸಿದ ಸಚಿವರ ಗಮನ ಸೆಳೆಯುವದಾಗಿ ಸುನಿಲ್ ಸುಬ್ರಮಣಿ ಭರವಸೆ ನೀಡಿದರು. ನಿನ್ನೆಯಿಂದ ವೈದ್ಯಕೀಯ ಶಿಕ್ಷಣ ಚಟುವಟಿಕೆ ಆರಂಭಗೊಂಡಿದ್ದು, ತೃತೀಯ ವರ್ಷದಲ್ಲಿ ಪ್ರವೇಶ ಪಡೆದಿರುವ ಪ್ರಥಮ ಹಂತದ 150 ವಿದ್ಯಾರ್ಥಿಗಳು ಸೆ. 5 ರಿಂದ ತರಗತಿಗಳಿಗೆ ಹಾಜರಾಗಲಿದ್ದು, ಒಟ್ಟು 450 ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯದೊಂದಿಗೆ ಸಮರ್ಪಕ ನೀರಿನ ಅಗತ್ಯವನ್ನು ಮಾಡಬೇಕಿದೆ.