ಮಡಿಕೇರಿ, ಆ. 31: ಮಡಿಕೇರಿ ತಾಲೂಕಿನ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ ವಸತಿಯನ್ನು ಕಲ್ಪಿಸಲಾಗಿದೆ. ಪರಿಹಾರ ಕೇಂದ್ರಗಳಲ್ಲಿರುವ 1 ರಿಂದ 10ನೇ ತರಗತಿಯವರೆಗಿನ 405 ವಿದ್ಯಾರ್ಥಿಗಳಿಗೆ ಕೇಂದ್ರಗಳಲ್ಲಿಯೇ ಕಲಿಕಾ ಕೇಂದ್ರಗಳನ್ನು ಶಿಕ್ಷಣ ಇಲಾಖೆಯಿಂದ ಪ್ರಾರಂಭಿಸಲಾಗಿದೆ. ತಾ. 27 ರಿಂದ ಕೇಂದ್ರಗಳಲ್ಲಿರುವ ಶಾಲಾ ಮಕ್ಕಳ ಕಲಿಕೆಗೆ ಯಾವದೇ ರೀತಿ ತೊಂದರೆಯಾಗದಂತೆ ಮಕ್ಕಳನ್ನು ಅಕ್ಕಪಕ್ಕದ ಶಾಲೆಗಳಿಗೆ ತರಗತಿವಾರು ದಾಖಲಿಸಿ ಕಲಿಕೆಯನ್ನು ಎಂದಿನಂತೆ ಮುಂದುವರೆಸಿಕೊಂಡು ಹೋಗಲು ಎಲ್ಲಾ ಅಗತ್ಯ ಕ್ರಮಗಳನ್ನು ಶಿಕ್ಷಣ ಇಲಾಖೆ ಕೈಗೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ತಿಳಿಸಿದ್ದಾರೆ.

ಪರಿಹಾರ ಕೇಂದ್ರದಲ್ಲಿರುವ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಲೇಖನ ಸಾಮಗ್ರಿ, ಡ್ರಾಯಿಂಗ್ ಪುಸ್ತಕ ಹಾಗೂ ಕ್ರೈಯಾನ್ಸ್‍ಗಳನ್ನು ವಿತರಿಸಲಾಗಿದೆ. ಅತಿವೃಷ್ಟಿಯಿಂದ ಹಾನಿಗೊಳಗಾಗಿ ಪರಿಹಾರ ಕೇಂದ್ರಗಳಲ್ಲಿರುವ ಮಕ್ಕಳಿಗೆ ಕೆ.ಟಿ.ಬಿ.ಎಸ್. ಇವರಿಂದ 33,983 ಪಠ್ಯ ಪುಸ್ತಕಗಳನ್ನು 1 ರಿಂದ 10ನೇ ತರಗತಿಯವರೆಗಿನ ವಿತರಿಸಲು ಸರಬರಾಜು ಮಾಡಲಾಗಿದ್ದು, ಈ ಪಠ್ಯ ಪುಸ್ತಕಗಳನ್ನು ಜಿಲ್ಲಾ ಉಪ ನಿರ್ದೇಶಕರ ಉಸ್ತುವಾರಿಯಲ್ಲಿ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿರುವ ಎಲ್ಲಾ ಮಕ್ಕಳಿಗೂ ತಾಲೂಕಿನ ಸಂಖ್ಯೆಗನುಗುಣವಾಗಿ ವಿತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಂತಸ ಕಲಿಕೆಗೆ ಉತ್ತೇಜನ: ಅತಿವೃಷ್ಟಿಯಿಂದ ಹಾನಿಗೊಳಗಾಗಿ ಪಠ್ಯ-ಪುಸ್ತಕಗಳನ್ನು ಕಳೆದುಕೊಂಡ ಮಕ್ಕಳಿಗೆ ಎಸ್‍ಡಬ್ಲುಎಫ್ ಮತ್ತು ಟಿಡಬ್ಲುಎಫ್ ಬೆಂಗಳೂರು ವತಿಯಿಂದ ಚಿತ್ರಕಲಾ ಪುಸ್ತಕ ಹಾಗೂ ಕ್ರೈಯನ್ಸ್‍ಗಳನ್ನು ವಿತರಣೆ ಮಾಡಿದ್ದು, ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ ನಿಯೋಜನೆಗೊಂಡಿರುವ ಶಿಕ್ಷಕರು ಮಕ್ಕಳಿಗೆ ಡ್ರಾಯಿಂಗ್ ಕಲಿಸುವ ಮೂಲಕ ಸಂತಸ ಕಲಿಕೆಯನ್ನು ಉತ್ತೇಜಿಸುತ್ತಿದ್ದಾರೆ.

ಕರ್ನಾಟಕದ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘ ವತಿಯಿಂದ ಎಲ್ಲಾ ಮಕ್ಕಳಿಗೆ ನೋಟ್-ಪುಸ್ತಕ ಹಾಗೂ ಪೆನ್ ವಿತರಿಸಿ ಮಕ್ಕಳ ನಿರಂತರ ಕಲಿಕೆ ಮುಂದುವರೆಸಲು ಸಹಕರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.