ಸೋಮವಾರಪೇಟೆ, ಆ.31: ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿರುವ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳಿಗೆ ಸಾರಿಗೆ ಇಲಾಖೆಯ ಬಸ್ ಸಂಚಾರವನ್ನು ರದ್ದು ಪಡಿಸಿರುವ ಕ್ರಮವನ್ನು ಖಂಡಿಸಿ, ಸಾರ್ವಜನಿಕರು ಇಲ್ಲಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಸಂಚಾರಿ ನಿಯಂತ್ರಕರ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮಕ್ಕೆ ತೆರಳುವ ಬಸ್‍ಗಳನ್ನು ಏಕಾಏಕಿ ರದ್ದುಗೊಳಿಸಿರುವ ಕ್ರಮ ಸರಿಯಲ್ಲ. ಇದರಿಂದ ಗ್ರಾಮಸ್ಥರು ಹಾಗು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದ್ದು ಈಗಾಗಲೇ ಕ್ಷೇತ್ರದ ಶಾಸಕರು ಮತ್ತು ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಸಮಸ್ಯೆ ಪರಿಹಾರಗೊಂಡಿಲ್ಲ ಎಂದು ಆರೋಪಿಸಿ, ಕೊಚ್ಚೇರ ಓಂಕಾರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಗರ್ವಾಲೆ ಗ್ರಾಮ ಪಂಚಾಯಿತಿಗೆ ಒಳಪಡುವ ಸೂರ್ಲಬ್ಬಿ, ಮಂಕ್ಯ, ಕುಂಬಾರಗಡಿಗೆ, ಕಿಕ್ಕರಳ್ಳಿ ಗ್ರಾಮಕ್ಕೆ ಈ ಹಿಂದೆ ದಿನಕ್ಕೆ 3 ಬಾರಿ ಸರಕಾರಿ ಬಸ್ ಸಂಚರಿಸುತಿತ್ತು. ಆದರೆ ಈಗ ಕೆಲವರ ಒತ್ತಡಕ್ಕೆ ಮಣಿದು ಮಾರ್ಗವನ್ನು ತಡೆಹಿಡಿಯುವ ಹುನ್ನಾರ ನಡೆಯುತ್ತಿದೆ. ಮಧ್ಯಾಹ್ನ 1.30 ಗಂಟೆಗೆ ಹೊರಡಬೇಕಾದ ಬಸ್ಸನ್ನು ಸಂಚಾರ ನಿಯಂತ್ರಕರು ಕಳುಹಿಸದೆ ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದ ಸಾರ್ವಜನಿಕರು, ನಿಲ್ದಾಣದಲ್ಲಿ ಧರಣಿ ಕುಳಿತರು.

ಈ ಸಂದರ್ಭ ದೂರವಾಣಿ ಮೂಲಕ ಘಟಕದ ವ್ಯವಸ್ಥಾಪಕರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅಧಿಕಾರಿ ಇರಸಪ್ಪ ಎಂಬವರು ಪ್ರತಿಭಟನಾಕಾರರಿಗೆ ಉಡಾಫೆಯ ಉತ್ತರ ನೀಡಿದರು. ಇದರಿಂದ ಇನ್ನಷ್ಟು ಅಸಮಾಧಾನಿತರಾದ ಗ್ರಾಮಸ್ಥರು, ನಿಲ್ದಾಣದಲ್ಲಿದ್ದ ಇತರ ಬಸ್‍ಗಳನ್ನು ತೆರಳಲು ಬಿಡುವದಿಲ್ಲವೆಂದು ಎಚ್ಚರಿಕೆ ನೀಡಿದರು.

ಇದಾಗಿ ಕೆಲಸ ಸಮಯದಲ್ಲೇ ಗರ್ವಾಲೆ ಭಾಗಕ್ಕೆ ಬದಲಿ ಬಸ್ ವ್ಯವಸ್ಥೆ ಕಲ್ಪಿಸಲಾಯಿತು. ನಾಳೆಯಿಂದ ನಿಗದಿತ ಅವಧಿಗೆ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವದು ಎಂದು ಸಂಚಾರಿ ನಿಯಂತ್ರಕ ಕಾರ್ಯಪ್ಪ ತಿಳಿಸಿದ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂತೆಗೆದು ಕೊಳ್ಳಲಾಯಿತು. ಪ್ರತಿಭಟನೆಯಲ್ಲಿ ಗರ್ವಾಲೆ ಗ್ರಾಮಾಧ್ಯಕ್ಷ ಮುದ್ದಂಡ ಎಸ್.ತಿಮ್ಮಯ್ಯ, ಜನಾಂದೋಲನ ಸಮಿತಿಯ ಕೆ.ಪಿ.ದಿನೇಶ್, ಮಾಜಿ ಸೈನಿಕ ಅಡ್ಡಂಡ ಎಸ್.ಪೂವಯ್ಯ ಸೇರಿದಂತೆ ಇತರರು ಪಾಲ್ಗೊಂಡಿದರು.