ಗೋಣಿಕೊಪ್ಪ ವರದಿ, ಆ. 31 : ಬಿರುನಾಣಿ ವ್ಯಾಪ್ತಿಗೆ 3 ತಿಂಗಳುಗಳ ಕಾಲ ನಿರಂತರ ಮಳೆ ಸುರಿದು ಬೆಳೆನಷ್ಟವಾಗಿರುವದನ್ನು ಪರಿಗಣಿಸಿ ಶ್ರೀಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘದ ಮೂಲಕ ಪಡೆದಿರುವ ಸಾಲ ಮರುಪಾವತಿಗೆ ದೀರ್ಘಾವಧಿ ಅವಕಾಶ ನೀಡುವಂತೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರಹೆಗಡೆ ಅವರಲ್ಲಿ ಮನವಿ ಮಾಡಿಕೊಳ್ಳುವ ನಿರ್ಧಾರವನ್ನು ಬಿರುನಾಣಿ ವ್ಯಾಪ್ತಿಯ ಶ್ರೀಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯರ ತುರ್ತು ಸಭೆ ಯಲ್ಲಿ ತೆಗೆದುಕೊಳ್ಳಲಾಯಿತು.

ಸಂಘದಲ್ಲಿ ನಡೆದ ಸಭೆಯಲ್ಲಿ ಬಿರುನಾಣಿ, ಬಾಡಗರಕೇರಿ, ಪರಕಟಗೇರಿ ಹಾಗೂ ತೆರಾಲು ವ್ಯಾಪ್ತಿಯಲ್ಲಿ ಸುಮಾರು 3 ತಿಂಗಳುಗಳ ಕಾಲ ನಿರಂತರ ಮಳೆಯಾಗಿದೆ. 300 ಇಂಚುಗಳಷ್ಟು ಮಳೆಯಾದ ಪರಿಣಾಮ ಕಾಫಿ, ಕಾಳುಮೆಣಸು, ಅಡಕೆ ಬೆಳೆ ನೆಲಕಚ್ಚಿವೆ. ಧರ್ಮಸ್ಥಳ ಸಂಘವು ವೀರಾಜಪೇಟೆ ತಾಲೂಕಿಗೆ ಸಾಲ ಮರುಪಾವತಿಗೆ ಹೆಚ್ಚಿನ ಸಮಯ ಅವಕಾಶ ನೀಡಿರುವದಿಲ್ಲ. ಇದರಿಂದಾಗಿ ಪಾವತಿಗೆ ತೊಂದರೆಯಾಗಿದೆ. ಸದಸ್ಯರು ಸಂಕಷ್ಟದಲ್ಲಿರುವದನ್ನು ಮನಗಂಡು ದೀರ್ಘಾವಧಿ ಪಾವತಿಗೆ ಅವಕಾಶ ನೀಡುವಂತೆ ವೀರೇಂದ್ರಹೆಗಡೆಗೆ ಮನವಿ ಸಲ್ಲಿಸುವಂತೆ ಸದಸ್ಯರ ಒತ್ತಾಯದಂತೆ ನಿರ್ಧರಿಸಲಾಯಿತು. ಸರ್ಕಾರದ ಗಮನ ಸೆಳೆದು ಸಾಲಮನ್ನಾ ಮಾಡಲು ಸರ್ಕಾರವನ್ನು ಮನವಿ ಮಾಡಿಕೊಳ್ಳುವಂತೆ ಒತ್ತಾಯಿಸಲು ತಾಲೂಕು ಯೋಜನಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷೆ ರೇವತಿ ಪರಮೇಶ್ವg, ಸಂಘದ ಸದಸ್ಯರುಗಳು ಹಾಗೂ ಉಪಸಮಿತಿ ಸದಸ್ಯರು ಪಾಲ್ಗೊಂಡಿದ್ದರು.