ಗೋಣಿಕೊಪ್ಪಲು.ಆ.29: ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಿಂದೂ ರುದ್ರಭೂಮಿಯ ಶವಾಗಾರವು ನಿರ್ವಹಣೆ ಇಲ್ಲದೆ ಕಾಡು ಸೇರಿದೆ. ಗೋಣಿಕೊಪ್ಪಲುವಿನ ಸುತ್ತ ಮುತ್ತಲ ಪ್ರದೇಶದಲ್ಲಿ ಸಾವಿಗೀಡಾದ ಸಂದರ್ಭ ಇಲ್ಲಿರುವ ಚಿತಾಗಾರವನ್ನು ಬಳಕೆ ಮಾಡುತ್ತಾರೆ. ಚಿತಾಗಾರದ ಮೇಲ್ಚಾವಣಿಯ ಶೀಟ್ಗಳು ಮುರಿದು ಹೋಗಿದ್ದು, ಚಿತಾಗಾರದ ಒಳಭಾಗದಲ್ಲಿ ನೀರು ಸುರಿಯುತ್ತಿದೆ. ಹಲವು ವರ್ಷದಿಂದ ನಿರ್ವಹಣೆ ಮಾಡುತ್ತಿದ್ದ ಗ್ರಾಮದ ಹಿರಿಯರು ನಿರ್ವಹಣೆಯನ್ನು ಕೈಬಿಟ್ಟಿದ್ದಾರೆ.
ರುದ್ರಭೂಮಿಯು ಕಾಡಿನಿಂದ ಕೂಡಿದ್ದು, ಆಳೆತ್ತರಕ್ಕೆ ಗಿಡಗಂಟಿಗಳು ಬೆಳೆದು ನಿಂತಿವೆ. ಇದರಿಂದ ಭಯದ ವಾತಾವರಣದಲ್ಲಿ ಒಳಪ್ರವೇಶಿಸುವ ಪ್ರಮೇಯ ಬಂದೊದಗಿದೆ.ವರ್ಷಕ್ಕೆ ಎರಡು ಬಾರಿ ಕಾಡು ಕಡಿದು ಶುಚಿಗೊಳಿಸುತ್ತಿದ್ದ ಗ್ರಾಮ ಪಂಚಾಯ್ತಿ ಇತ್ತೀಚೆಗೆ ಈ ಕಾರ್ಯ ಮಾಡದೆ ಮೌನ ವಹಿಸಿದೆ.
2005ರಲ್ಲಿ 11ನೇ ಹಣಕಾಸಿನ ಯೋಜನೆಯಲ್ಲಿ ಈ ಚಿತಾಗಾರವನ್ನು ನಿರ್ಮಿಸಲಾಗಿದ್ದು, ಅಂದಿನ ಪಂಚಾಯಿತಿ ಅಧ್ಯಕ್ಷ ಬಿ.ಡಿ. ಮುಕುಂದ ಮಾಜಿ ಅಧ್ಯಕ್ಷರಾದ ಬಿ.ಎಂ.ಅಪ್ಪಾಜಿ, ಎಂ.ಪಿ.ಜನಾರ್ಧನ್ ಹಾಗೂ ರುದ್ರಭೂಮಿಯ ನಿರ್ವಹಣೆಯ ಕಾರ್ಯದರ್ಶಿಯಾಗಿದ್ದ ಪಿ.ಕೆ. ವಿಜಯನ್ ಇದರ ನಿರ್ವಹಣೆ ಮಾಡುತ್ತಿದ್ದರು. ಇತ್ತೀಚೆಗೆ ಕಾರ್ಯದರ್ಶಿ ಪಿ.ಕೆ. ವಿಜಯನ್ ಶವಾಗಾರದ ಬಾಗಿಲಿನ ಬೀಗದ ಕೀಯನ್ನು ಪಂಚಾಯಿತಿಗೆ ವಾಪಾಸ್ಸು ನೀಡಿದ ಬಳಿಕ ಇಲ್ಲಿನ ವ್ಯವಸ್ಥೆ ಹಾಳಾಗಿದೆ.
ಶವಾಗಾರದ ಒಳಭಾಗದಲ್ಲಿರುವ ಚಿತಾಗಾರದ ಕಬ್ಬಿಣದ ವಸ್ತುಗಳು ಹಾಳಾಗಿದ್ದು ಇದನ್ನು ಬದಲಾಯಿಸದೆ ದಶಕಗಳೇ ಕಳೆದಿವೆ. ಮುಖ್ಯ ಪಟ್ಟಣದಲ್ಲಿರುವ ಈ ಶವಾಗಾರಕ್ಕೆ ಸುತ್ತಮುತ್ತಲಿನಲ್ಲಿ ಮೃತಪಟ್ಟ ಶವಗಳನ್ನು ತರುವ ಮೂಲಕ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಇದೀಗ ಮಳೆಗಾಲದಲ್ಲಿ ಶವಾಗಾರದ ಒಳಭಾಗದಲ್ಲಿ ನೀರು ವಿಪರೀತವಾಗಿ ಸುರಿಯುತ್ತಿರುವದರಿಂದ ಮೃತದೇಹಗಳನ್ನು ಅಂತ್ಯಕ್ರಿಯೆ ನಡೆಸುವ ಸಂದರ್ಭ ಮಳೆ ಬಂದಲ್ಲಿ ಅರ್ಧಂಬರ್ದ ಬೆಂದ ದೇಹಗಳು ಹಾಗೇ ಉಳಿಯುತ್ತಿವೆ. ಇದರಿಂದ ಬೇರೆ ಶವಗಳನ್ನು ಶವಾಗಾರಕ್ಕೆ ತಂದಾಗ ಅಂತ್ಯಕ್ರಿಯೆ ನಡೆಸಲು ತೊಂದರೆಯಾಗುತ್ತಿದೆ. ಇದಕ್ಕಾಗಿ ಪಂಚಾಯಿತಿಯಲ್ಲಿ ಹಣ ಮೀಸಲಿದ್ದರೂ, ಇಲ್ಲಿಯ ನಿರ್ವಹಣೆ ನೆನೆಗುದಿಗೆ ಬಿದ್ದಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಇದ್ದಂತಹ ಹಲವು ಸಾರ್ವಜನಿಕ ಮುಖಂಡರ ನಿರ್ವಹಣಾ ಸಮಿತಿ ಕೆಲಸ ನಿರ್ವಹಿಸಿದಲ್ಲಿ ಇಲ್ಲಿನ ಸಮಸ್ಯೆ ಪರಿಹಾರವಾಗಲಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬಂದಿದೆ. ಮೃತಪಟ್ಟ ದೇಹವನ್ನು ಅಂತ್ಯಕ್ರಿಯೆ ನಡೆಸಲು ಶವಾಗಾರದ ಬೀಗದ ಕೀ ಪಡೆಯಲು ವ್ಯವಸ್ಥೆಯಾಗಬೇಕಾಗಿದೆ. ಕೀಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.
ನಮ್ಮ ಸಂಬಂಧಿಕರೊಬ್ಬರು ತೀರಿಕೊಂಡ ಸಂದರ್ಭ ಅಂತ್ಯಕ್ರಿಯೆ ನಡೆಸಲು ಹಿಂದೂ ರುದ್ರಭೂಮಿ ಶವಾಗಾರಕ್ಕೆ ತೆರಳಿದ್ದಾಗ ಅಲ್ಲಿಯ ಪರಿಸ್ಥಿತಿ ನೋಡಿ ಬೇಸರಗೊಂಡಿದ್ದೇನೆ. ಅರೆ ಬೆಂದ ಮೃತ ದೇಹಗಳು ಶವಾಗಾರದಲ್ಲಿ ಬಾಕಿಯಾಗಿವೆ. ಇದನ್ನು ಸಾರ್ವಜನಿಕರೇ ಬೇರೆಡೆಗೆ ಸ್ಥಳಾಂತರಿಸಿ ಮಣ್ಣು ಮಾಡುವ ಪರಿಸ್ಥಿತಿ ಬಂದೊದಗಿದೆ. ಈ ಬಗ್ಗೆ ಪಂಚಾಯಿತಿ ತಕ್ಷಣ ಕ್ರಮ ವಹಿಸಿ ಕಾಮಗಾರಿ ಪೂರೈಸಬೇಕು ಎಂದು ಗ್ರಾಮಸ್ಥ ಪಿ.ಕೆ. ಪ್ರವಿಣ್ ಒತ್ತಾಯಿಸಿದ್ದಾರೆ.