ಮಡಿಕೇರಿ, ಆ. 31 : ಆರ್ಥಿಕ ಕ್ಷೇತ್ರದ ವಿವಿಧ ಸ್ತರಗಳಲ್ಲಿ ಕಾರ್ಯಾಚರಿಸುತ್ತಿರುವ ಭಾರತೀಯ ಅಂಚೆ ಇಲಾಖೆ ಇದೀಗ ಆರ್ಥಿಕ ಸಾಕ್ಷರತೆಯ ಆಂದೋಲನದ ಯೋಜನೆಯಡಿ ‘ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್’ನ್ನು ಪ್ರಾರಂಭಿಸಲು ಮುಂದಾಗಿದೆ. ಈ ಯೋಜನೆಯ ಮಡಿಕೇರಿ ಶಾಖೆÉ ತಾ. 1 ರಂದು (ಇಂದು) ಉದ್ಘಾಟನೆಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮಡಿಕೇರಿ ಪ್ರಧಾನ ಅಂಚೆ ಕಚೇರಿಯ ಸೂಪರಿಟೆಂಡೆಂಟ್ ಆಫ್ ಪೋಸ್ಟ್ ಆಫೀಸ್ ಎಸ್.ಆರ್. ನಾಗೇಂದ್ರ, ಭಾರತೀಯ ಅಂಚೆ ಇಲಾಖೆಯ ಅಧೀನದಲ್ಲಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಕೇಂದ್ರ ಸರ್ಕಾರದ ಶೇ.100 ರಷ್ಟು ಸ್ವಾಮ್ಯತೆಯನ್ನು ಹೊಂದಿದ್ದು, ಸರಳ ವ್ಯವಹಾರ ಈ ಯೋಜನೆಯ ಉದ್ದೇಶವಾಗಿದೆ ಎಂದರು.
ಜನ ಸಾಮಾನ್ಯರ ಕೈಗೆಟುಕುವ ಮತ್ತು ನಂಬಿಕಾರ್ಹ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳ ಲಾಗುವದು. ಬ್ಯಾಂಕಿಂಗ್ ಸೇವೆಯಿಂದ ವಂಚಿತರಾಗಿರುವವರು ಮತ್ತು ಅಲ್ಪ ಪ್ರಮಾಣದಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಹೊಂದಿರುವ ವರ್ಗಕ್ಕೆ ಪÀೂರ್ಣ ಪ್ರಮಾಣದ ಸೇವೆ ಒದಗಿಸುವ ನಿಟ್ಟಿನಲ್ಲಿ ಇರುವ ಅಡೆತಡೆಗಳನ್ನು ನಿವಾರಿಸಿ ಆರ್ಥಿಕ ಸೇರ್ಪಡೆಯ ಗುರಿಯನ್ನು ಸಾಧಿಸುವದು ಪ್ರಮುಖ ಉದ್ದೇಶವಾಗಿದೆ. ಪರಿಣಾಮಕಾರಿ ತಂತ್ರಜ್ಞಾನವನ್ನು ಬಳಸಿಕೊಂಡು ಉಳಿತಾಯ ಖಾತೆ, ಚಾಲ್ತಿ ಖಾತೆ, ಹಣ ಸಂದಾಯ, ಹಣ ವರ್ಗಾವಣೆ, ಫಲಾನುಭವಿಗಳಿಗೆ ನೇರ ವರ್ಗಾವಣೆ ವ್ಯವಸ್ಥೆ, ಬಿಲ್ ಪಾವತಿ, ಉದ್ಯಮಿಗಳಿಗೆ ಹಾಗೂ ವ್ಯಾಪಾರಿಗಳಿಗೆ ಹಣ ಪಾವತಿ ಸೇವೆಯನ್ನು ಒದಗಿಸಲಾಗುತ್ತದೆ. ಇದರ ಜೊತೆಯಲ್ಲಿ ಆರ್ಥಿಕ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಸಾಲ, ಹೂಡಿಕೆ ಮತ್ತು ವಿಮಾ ಸೌಲಭ್ಯಗಳನ್ನು ಒದಗಿಸುವ ಒಪ್ಪಂದಗಳನ್ನು ಕೂಡ ಮಾಡಿಕೊಳ್ಳಲಾಗಿದೆ ಎಂದರು.
ಭಾರತೀಯ ಅಂಚೆ ಇಲಾಖೆಯು ದೇಶದಲ್ಲಿ 1.50 ಲಕ್ಷಕ್ಕೂ ಹೆಚ್ಚಿನ ಅಂಚೆ ಕಚೇರಿಗಳ ವಿಸ್ತಾರ ಜಾಲವನ್ನು ಹೊಂದಿದ್ದು, ಪೋಸ್ಟ್ ಮ್ಯಾನ್, ಗ್ರಾಮೀಣ ಡಾಕ್ ಸೇವಕ್ ಹಾಗೂ ಇತರ ಸಿಬ್ಬಂದಿಗಳ ಮೂಲಕ ಮನೆ ಮನೆಗೆ ಬ್ಯಾಂಕಿಂಗ್ ಸೌಲಭ್ಯ ತಲಪಿಸುವ ವ್ಯವಸ್ಥೆ ಮಾಡಲಾಗಿದೆ. ದೇಶಾದ್ಯಂತ 3 ಲಕ್ಷ ಅಂಚೆ ಬಟವಾಡೆ ಸಿಬ್ಬಂದಿಗಳಿದ್ದು, ಕೈಗೆಟಕುವ ರೀತಿಯಲ್ಲಿ ಬ್ಯಾಂಕಿಂಗ್ ಸೇವೆಯನ್ನು ಒದಗಿಸಲಾಗುವದು. ಆಧಾರ್ ಕಾರ್ಡ್ ಮತ್ತು ಮೊಬೈಲ್ ಬಳಕೆಯಿಂದ ಕಾಗದ ರಹಿತ ಖಾತೆ ತೆರೆದು ವ್ಯವಹಾರ ಮಾಡಬಹುದಾಗಿದೆ. ಬಯೋಮೆಟ್ರಿಕ್ ತಂತ್ರಜ್ಞಾನ ಮತ್ತು ಒಟಿಪಿ ಪಡೆಯುವದರ ಮೂಲಕ ವ್ಯವಹಾರವನ್ನು ಸರಳೀಕರಣ ಗೊಳಿಸಬಹುದಾಗಿದೆ ಎಂದರು.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನ ಗ್ರಾಹಕನಿಗೆ ‘ಕ್ಯೂ ಆರ್’ ಕಾರ್ಡ್ ನೀಡಲಾಗುವದು. ಇದು ಖಾತೆಯ ಮಾಹಿತಿಯನ್ನು ಒಳಗೊಂಡಿರುತ್ತದೆ. ಹಿರಿಯ ನಾಗರಿಕರು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಗೃಹಿಣಿಯರು, ರೈತರು, ಕಾರ್ಮಿಕರು ರಾಜ್ಯ ಸರ್ಕಾರದ ಯೋಜನೆಯ ನೇರ ಫಲಾನುಭವಿಗಳು, ಗ್ರಾಮೀಣ ವ್ಯಾಪಾರಿಗಳು, ಕಿರಾಣಿ ವ್ಯಾಪಾರಿಗಳು ಮತ್ತು ಸಣ್ಣ ಉದ್ಯಮಿಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತರುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
ಕಳೆದ 160 ವರ್ಷಗಳಿಮದ ಗ್ರಾಹಕರ ವಿಶ್ವಾಸಾರ್ಹತೆ ಗಳಿಸಿಕೊಂಡು ಬಂದಿರುವ ಭಾರತೀಯ ಅಂಚೆ ಇಲಾಖೆಯ ಪೇಮೆಂಟ್ಸ್ ಬ್ಯಾಂಕ್ ಸೆಪ್ಟೆಂಬರ್ 1 ರಂದು ಪ್ರಧಾನ ಮಂತ್ರಿಗಳಿಂದ ಉದ್ಘಾಟನೆಗೊಳ್ಳಲಿದೆ. ದೇಶದಾದ್ಯಂತ 650 ಶಾಖೆಗಳು ಮತ್ತು 3250 ಆಕ್ಸಿಸ್ ಪಾಯಿಂಟ್ಗಳು ಕಾರ್ಯಾರಂಭವಾಗಲಿದೆ. ಡಿಸೆಂಬರ್ 31ರವರೆಗೆ 1.55 ಲಕ್ಷ ಆಕ್ಸಿಸ್ ಪಾಯಿಂಟ್ಗಳಿಗೆ ಈ ಸೇವೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಯೆಂದು ನಾಗೇಂದ್ರ ಮಾಹಿತಿ ನೀಡಿದರು.
ಕೊಡಗಿನಲ್ಲಿ 4 ಕೇಂದ್ರ- ಇಂಡಿಯ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನ ಮಡಿಕೆÉೀರಿ ಪ್ರಧಾನ ಅಂಚೆಯ ಕಚೇರಿಯ ಪ್ರಮುಖ ಕೇಂದ್ರದೊಂದಿಗೆ, ಜಿಲ್ಲಾಧಿಕಾರಿಗಳ ಕಚೇರಿ ಅರಮೇರಿ ಮತ್ತು ಹಾತೂರಿನಲ್ಲಿ ಆಕ್ಸಿಸ್ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಈ ಕೇಂದ್ರಗಳ ಮೂಲಕ ಗ್ರಾಹಕರಿಗೆ ಆಯಾ ವಿಭಾಗದ ಪೋಸ್ಟ್ ಮೆನ್ಗಳ ಮೂಲಕ ಹಣ ಪಾವತಿಯ ಸೌಲಭ್ಯವನ್ನು ಒದಗಿಸಲಾಗುತ್ತದೆಂದು ತಿಳಿಸಿದರು.
ಉದ್ಘಾಟನೆ- ಮಡಿಕೆÉೀರಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಸೆಪ್ಟೆಂಬರ್ 1 ರಂದು ಮಧ್ಯಾಹ್ನ 2.30 ಗಂಟೆಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಲಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ್ ಡಿ. ಪಣ್ಣೇಕರ್ ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಸುಂಟಿಕೊಪ್ಪ ಪೋಸ್ಟ್ ಮಾಸ್ಟರ್ ಶ್ರೀನಿವಾಸ್, ಕುಶಾಲನಗರ ಪೋಸ್ಟ್ ಮಾಸ್ಟರ್ ಮಂಜುನಾಥ್, ಪ್ರಧಾನ ಅಂಚೆ ಕಚೇರಿಯ ವ್ಯವಸ್ಥಾಪಕ ನಿತಿನ್ ಕೆ. ಪ್ರಸಾದ್ ಹಾಗೂ ಅಂಚೆ ಕಚೇರಿ ಪೋಸ್ಟ್ ಮನ್ ಬೇಬಿ ಜೋಸೆಫ್ ಉಪಸ್ಥಿತರಿದ್ದರು.