ಮಡಿಕೇರಿ, ಆ. 31 : ಅತಿವೃಷ್ಟಿ ಹಾನಿಯಿಂದ ನಿರಾಶ್ರಿತರಾಗಿರುವ ಕೊಡಗಿನ ನೈಜ ಸಂತ್ರಸ್ತರನ್ನು ಗುರುತಿಸಿ ಪುನರ್ವಸತಿಯನ್ನು ಕಲ್ಪಿಸುವದರೊಂದಿಗೆ ಬೆಳೆ ನಾಶವಾಗಿ ಸಂಕಷ್ಟಕ್ಕೆ ಸಿಲುಕಿರುವ ಎಲ್ಲಾ ರೈತರ ಸಾಲ ಮನ್ನಾ ಮಾಡಬೇಕೆಂದು ದಕ್ಷಿಣ ಕೊಡಗಿನ ಗಡಿ ಗ್ರಾಮವಾದ ತೆರಾಲುವಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿರುನಾಣಿ ಗ್ರಾಮ ಪಂಚಾಯ್ತಿ ಸದಸ್ಯ ಬಿ.ಎಂ. ಗಿರೀಶ್ ಪೆಮ್ಮಯ್ಯ, ಕೇರಳದ ವಯನಾಡು ಜಿಲ್ಲೆಯ ಗಡಿಯಲ್ಲಿ, ಬೆಟ್ಟ ಗುಡ್ಡಗಳಿಂದ ಆವೃತ್ತವಾದ ಪ್ರದೇಶದಲ್ಲೆ ಇರುವ ತೆರಾಲು ಗ್ರಾಮದಲ್ಲಿ ಈ ಬಾರಿ 350 ಇಂಚಿಗೂ ಅಧಿಕ ಮಳೆÉಯಾಗಿ ಕೃಷಿ ಫಸಲು ಮತ್ತು ಕಾಫಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆಯೆಂದು ಅಸಹಾಯಕತೆ ವ್ಯಕ್ತಪಡಿಸಿದರು.
ಭೂ ಕುಸಿತದಿಂದ ಉಂಟಾಗಿರುವ ತೀವ್ರ ಹಾನಿಯ ಪ್ರದೇಶಗಳ ಬಗ್ಗೆ ಆಡಳಿತ ವ್ಯವಸ್ಥೆ ಹೆಚ್ಚು ಕಾಳಜಿ ತೋರುತ್ತಿರುವದು ಸ್ವಾಗತಾರ್ಹ. ಅದೇ ರೀತಿಯಾಗಿ ದಕ್ಷಿಣ ಕೊಡಗಿನ ಕುಗ್ರಾಮಗಳಲ್ಲಿ ರೈತಾಪಿ ವರ್ಗ ಅನುಭವಿಸುತ್ತಿರುವ ಕಷ್ಟನಷ್ಟಗಳನ್ನು ಕೂಡ ಪರಿಗಣಿಸಬೇಕೆಂದು ಅವರು ಒತ್ತಾಯಿಸಿದರು. ತೆರಾಲು ಗ್ರಾಮದಲ್ಲಿ ಯಾವದೇ ಮಳೆಮಾಪನ ಕೇಂದ್ರ ಇಲ್ಲದಿರುವದರಿಂದ ಮಿತಿ ಮೀರಿ ಮಳೆಯಾಗುತ್ತಿರುವ ಮಾಹಿತಿ ಆಡಳಿತ ವ್ಯವಸ್ಥೆಗೆ ತಿಳಿಯುತ್ತಿಲ್ಲ. ಈ ಭಾಗದ ಆಬೇಲ್, ಮೇಪಳ್ಳಿ, ನಟ್‍ಕುಂದ್ ಎಂಬಲ್ಲಿಗೆ ಇಲ್ಲಿಯವರೆಗೆ 380 ಇಂಚಿನಷ್ಟು ಮಳೆಯಾಗಿದ್ದು, ಪೊನ್ನಂಬರೆ ಭಾಗದಲ್ಲಿ 350 ಇಂಚು ಮಳೆ ಸುರಿದಿದೆ. ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗಾಮಗಳ ಮೇಲೂ ಅತಿವೃಷ್ಟಿ ಪರಿಣಾಮ ಬೀರಿದ್ದು, ಕಾಫಿ ಸಂಪೂರ್ಣವಾಗಿ ನಾಶವಾಗಿದೆ.
ಬಿರುಗಾಳಿ ಸಹಿತ ಮಳೆಯಾದ ಕಾರಣ ಕಾಫಿ ಗಿಡದ ಬುಡಕ್ಕೆ ಹಾನಿಯಾದ ಕಾರಣ ಕಾಫಿ ಗಿಡಗಳು ಒಣಗುತ್ತಿವೆ. ರಸ್ತೆ ಹಾಗೂ ಮೋರಿಗಳು ಕೊಚ್ಚಿ ಹೋಗಿದ್ದು, ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಯಾವದೇ ಮುಖ್ಯ ರಸ್ತೆ ಗ್ರಾಮಕ್ಕೆ ಇಲ್ಲ. ಜಿಲ್ಲಾ ಪಂಚಾಯ್ತಿಗೆ ಸೇರಿದ ಮುಖ್ಯ ರಸ್ತೆ ಇದ್ದು, ಇದಕ್ಕೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಶಾಸಕರ ಪ್ರಯತ್ನದಿಂದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 8 ಕಿ.ಮೀ.ಗೆ 8 ಕೋಟಿ ರೂ. ಅನುದಾನ ಬಂದಿದೆಯಾದರು ಮಹಾ ಮಳೆಯಿಂದ 2 ಕಿ.ಮೀ. ರಸ್ತೆ ಕೊಚ್ಚಿ ಹೋಗಿದೆ. ಇಲ್ಲಿರುವ ಅನೇಕ ಮನೆಗಳಿಗೆ ತೆರಳಲು ಸಂಪರ್ಕ ರಸ್ತೆಗಳೇ ಇಲ್ಲ. ಬಿರುನಾಣಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸಂಕಷ್ಟವನ್ನು ಅರಿತು ಸೂಕ್ತ ಪರಿಹಾರವನ್ನು ಸರ್ಕಾರ ಘೋಷಿಸಬೇಕು. ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ನಿಮಾಣವಾಗಿದ್ದು, ರೈತರ ಸಂಪÀೂರ್ಣ ಸಾಲ ಮನ್ನಾ ಮಾಡಬೇಕು.
ತೆರಾಲುವಿನಂತೆ ಕೊಡು ಜಿಲ್ಲೆಯಲ್ಲಿ ನಷ್ಟಕ್ಕೆ ಒಳಗಾದ ಅನೆÉೀಕ ಗ್ರಾಮಗಳಿದ್ದು, ಇಲ್ಲಿಗೆ ಕಾಫಿ ಮಂಡಳಿ, ಕೃಷಿ ಇಲಾಖೆ ಹಾಗೂ ಕಂದಾಯ ಅಧಿಕಾರಿಗಳು ಖುದ್ದು ಭೇಟಿ ನೀಡಿ ಜನಾಭಿಪ್ರಾಯ ಪಡೆದು ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಗಿರೀಶ್ ಪೆಮ್ಮಯ್ಯ ಒತ್ತಾಯಿಸಿದರು.
ಮಹಾಮಳೆÉ ಮತ್ತು ಭೂಕುಸಿತದಿಂದ ಮಡಿಕೆÉೀರಿ ಮತ್ತು ಸೋಮವಾರಪೇಟೆ ತಾಲೂಕಿನ ಹಲವು ಗ್ರಾಮಸ್ಥರು ನೆಲೆ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲು ಬೆಂದ ಮನೆಯಲ್ಲಿ ಚಳಿ ಕಾಯಿಸುವ ರೀತಿ ಪರಿಸರವಾದಿಗಳು ಹೇಳಿಕೆಗಳನ್ನು ನೀಡುತ್ತಿರುವದು ಖಂಡನೀಯವೆಂದರು.
ಬೆಟ್ಟದ ಮೇಲೆ ಕೆರೆ ನಿರ್ಮಾಣ, ರೆಸಾರ್ಟ್ ನಿರ್ಮಾಣ, ಹೋಂಸ್ಟೇಗಳ ಸಂಖ್ಯೆ ಹೆಚ್ಚಳ, ಟಿಂಬರ್ ಮಾಫಿಯಾ ಇವುಗಳು ಅನಾಹುತಕ್ಕೆ ಕಾರಣವೆಂದು ವಿಶ್ಲೇಷಿಸುವದರೊಂದಿಗೆ ಡಾ. ಕಸ್ತೂರಿರಂಗನ್ ವರದಿ ಜಾರಿಗಾಗಿ ಪ್ರಯತ್ನ ನಡೆಸುತ್ತಿರುವದನ್ನು ವಿರೋಧಿಸುವದಾಗಿ ಗಿರೀಶ್ ಪೆಮ್ಮಯ್ಯ ತಿಳಿಸಿದರು.
ಕೊಡಗಿನ ಜನರ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಪರಿಸರವಾದಿಗಳು ಹಾಗೂ ನಿವೃತ್ತ ಸೇನಾಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಜನರಿಗೆ ತೊಂದರೆ ನೀಡುವ ಪರಿಸರ ಕಾಳಜಿ ಬಿಟ್ಟು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವದು ಸೂಕ್ತವೆಂದು ಅಸಮಾಧಾನ ವ್ಯಕ್ತಪಡಿಸಿದರು.
ತಲೆ ತಲಾಂತರಗಳಿಂದ ಕೊಡಗಿನ ಜನರು ದೇವರ ಕಾಡಿನ ಹೆಸರಿನಲ್ಲಿ ಕಾಡನ್ನು ಉಳಿಸಿ ಬೆಳೆಸುತ್ತಾ ಬಂದಿದ್ದಾರೆ. ಈ ಪರಿಸರ ಪ್ರಜ್ಞೆಯನ್ನು ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತÀು ಹೇಳಿಕೆ ನೀಡುವ ಪರಿಸರ ವಾದಿಗಳು ಮೂಡಿಸಿದ್ದಲ್ಲ ಎಂದು ಅಭಿಪ್ರಾಯಪಟ್ಟ ಗಿರೀಶ್ ಪೆಮ್ಮಯ್ಯ, ಡಾ. ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿರುನಾಣಿ ಸಹಕಾರ ಸಂಘದ ನಿರ್ದೇಶಕ ಬೊಜ್ಜಂಗಡ ಸಂಪತ್, ಗ್ರಾಮಸ್ಥರಾದ ಬೊಳ್ಳೇರ ಮುತ್ತಣ್ಣ, ಬೊಟ್ಟಂಗಡ ಗಣೇಶ್ ಹಾಗೂ ಬೊಜ್ಜಂಗಡ ನಟರಾಜ್ ಉಪಸ್ಥಿತರಿದ್ದರು.