ಮಡಿಕೇರಿ, ಆ. 31 : ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಭೂ ಕುಸಿತದ ಮೂಲಕ ಅಂತರರಾಷ್ಟ್ರೀಯ ವಿಪತ್ತಾಗಿದೆ ಎಂದರು.

ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕನ್ನೊಳಗೊಂಡ ವಾಯವ್ಯ ಕೊಡಗಿನ 6 ನಾಡುಗಳ 35 ಗ್ರಾಮಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಅದೇ ಪ್ರದೇಶಗಳಲ್ಲಿ ಶಾಶ್ವತ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿ ಸಿ.ಎನ್.ಸಿ. ಸಂಘಟನೆ ವತಿಯಿಂದ ತಾ. 1 ರಂದು (ಇಂದು) ಮಡಿಕೇರಿಯಲ್ಲಿ ವಾಹನ ಜಾಥಾ ನಡೆಸುವದರೊಂದಿಗೆ ಜಿಲ್ಲಾಡಳಿತದ ಮೂಲಕ ಕೇಂದ್ರ ಸರಕಾರ ಮತ್ತು ವಿಶ್ವಸಂಸ್ಥೆಯ ಗಮನ ಸೆಳೆಯಲಾಗುವದು ಎಂದರು.

ಆ.12 ರಿಂದ 19 ರವರೆಗೆ ಕೊಡಗಿನ ವಾಯವ್ಯ ಭಾಗದಲ್ಲಿ ನಡೆದ ಭೀಕರ ಭೂಕುಸಿತವನ್ನು ಅಂತಾರ್ರಾಷ್ಟ್ರೀಯ ವಿಪತ್ತು ಮತ್ತು ರಾಷ್ಟ್ರೀಯ ಉತ್ಪಾತ ಎಂದು ಪರಿಗಣಿಸಬೇಕು. ಆ ಮೂಲಕ ನಿರಾಶ್ರಿತರಿಗೆ ಸಮರೋಪಾದಿಯಲ್ಲಿ ಶಾಸನಬದ್ಧ ಪುನರ್ವಸತಿ ಕಲ್ಪಿಸಲು ಸಿದ್ಧತೆ ಮತ್ತು ಬದ್ಧತೆ ತೋರಬೇಕು ಎಂದು ನಾಚಪ್ಪ ಒತ್ತಾಯಿಸಿದರು.

ಭೂಕಂಪನ ಮತ್ತು ಭೂಕುಸಿತದಿಂದ ನಿರಾಶ್ರಿತರಾದ ಸಂತ್ರಸ್ತರ ಶಾಶ್ವತ ಪುನರ್ವಸತಿಗೆ ಒತ್ತಾಯಿಸುವ ನಿಟ್ಟಿನಲ್ಲಿ ಸೆ.1ರಂದು ಸಿ.ಎನ್.ಸಿಯು 24ನೇ ವರ್ಷದ ಸಾರ್ವತ್ರಿಕ ಕೈಲ್‍ಪೊಳ್ದ್ ನಮ್ಮೆಯನ್ನು ಸಾಂಕೇತಿಕ ಆಯುಧ ಪೂಜೆ ಮತ್ತು ಮೌನ ಶೋಕಾಚರಣೆಯ ಮೂಲಕ ವಾಹನ ಜಾಥಾ ನಡೆಸಿ ಹಕ್ಕೊತ್ತಾಯ ಮಂಡಿಸಲಿದೆ ಎಂದು ಹೇಳಿದರು.