ಸುಂಟಿಕೊಪ್ಪ, ಆ. 31: ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಸಂತ್ರಸ್ತರಿಗಾಗಿ ರಾಜ್ಯದ ವಿವಿಧ ಭಾಗಗಳಿಂದ ಹರಿದು ಬಂದ ಆಹಾರ ಸಾಮಗ್ರಿ ಸೇರಿದಂತೆ ಇನ್ನಿತರ ವಸ್ತುಗಳು ಸಂತ್ರಸ್ತರಿಗೆ ನೀಡದೆ ಗೋದಾಮುಗಳಲ್ಲಿ ಶೇಖರಿಸಿಡಲಾಗುತ್ತಿದೆ ಎಂದು ಸುಂಟಿಕೊಪ್ಪ ಗ್ರಾಮಾಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಆರ್. ಮಂಜುನಾಥ್ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಕೊಡಗು ಜಿಲ್ಲೆಯು ಕೇಳರಿಯದ ರೀತಿಯಲ್ಲಿ ಪ್ರಕೃತಿಯ ವಿಕೋಪದಿಂದ ನಲುಗಿಹೋಗಿದ್ದು, ಬಹಳಷ್ಟು ಮಂದಿ ಪ್ರಾಣ ಹಾಗೂ ಗದ್ದೆ, ಕಾಫಿ ತೋಟ, ವಾಸದ ಮನೆಗಳನ್ನು ಕಳೆದುಕೊಳ್ಳುವಂತಾಗಿರುವದು ದುರದೃಷ್ಟಕರ. ರಾಜ್ಯದ ವಿವಿಧ ಭಾಗಗಳಿಂದ ಕೊಡಗಿನ ಸಂತ್ರಸ್ತರ ನೆರವಿಗಾಗಿ ಸಾಗರೋಪಾದಿಯಲ್ಲಿ ಆಹಾರ ಸಾಮಗ್ರಿ, ವಸ್ತ್ರಗಳು, ಅಗತ್ಯ ಔಷಧಿಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಸರ್ವ ಹೃದಯಿಗಳು ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ. ಸರಕು ಲಾರಿಗಳಲ್ಲಿ ಆಗಮಿಸಿದ್ದ ವಸ್ತುಗಳು ನೈಜ ಸಂತ್ರಸ್ತರಿಗೆ ದೊರೆಯದೆ ಗೋದಾಮುಗಳಲ್ಲಿ ಶೇಖರಿಸಿಟ್ಟುಕೊಂಡಿದ್ದಾರೆ. ಕೆಲವು ಪ್ರಭಾವಿ ವ್ಯಕ್ತಿಗಳು ಸಂತ್ರಸ್ತರಿಗೆ ಬಂದ ವಸ್ತುಗಳನ್ನು ತಮಗೆ ಬೇಕಾದವರಿಗೆ ವಿತರಿಸುತ್ತಿದ್ದಾರೆ ನೈಜ ಸಂತ್ರಸ್ತರಿಗೆ ದೊರೆಯದೆ ಇರುವದು ಖೇದನೀಯ ವಿಚಾರವಾಗಿದೆ.

ಕೂಡಲೇ ಜಿಲ್ಲಾಡಳಿತ, ಜಿಲ್ಲಾಧಿಕಾರಿಗಳು, ಆಹಾರ ಅಧಿಕಾರಿಗಳು ಸುಂಟಿಕೊಪ್ಪ ಪಟ್ಟಣದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಆಹಾರ ಸಾಮಗ್ರಿಗಳನ್ನು ಅನಧಿಕೃತವಾಗಿ ಗೋದಾಮುಗಳ ಬಗ್ಗೆ ತನಿಖೆ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪಟ್ಟಣದಲ್ಲಿ ಸುಂಟಿಕೊಪ್ಪ ಗ್ರಾಮಾಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗುವದು ಎಂದು ಸಮಿತಿ ಅಧ್ಯಕ್ಷ ಎಂ.ಆರ್. ಮಂಜುನಾಥ್, ಕಾಂiÀರ್iದರ್ಶಿ ಇಬ್ರಾಹಿಂ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.