ಗೋಣಿಕೊಪ್ಪಲು, ಆ. 31 : ಇತ್ತೀಚೆಗೆ ಕಾವೇರಿ ಪದವಿಪೂರ್ವ ಕಾಲೇಜು, ಗೋಣಿಕೊಪ್ಪಲು ಇಲ್ಲಿ ವೃತ್ತಿ ಮಾರ್ಗದರ್ಶನ ಕುರಿತು ವಿಜ್ಞಾನ ವಿದ್ಯಾರ್ಥಿಗಳಿಗೆ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಇಂಡಿಯನ್ ಏರ್‍ಫೋರ್ಸ್‍ನಲ್ಲಿ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿರುವ ಅಳಮೇಂಗಡ ವಿಲ್ಮ ಮುದ್ದಪ್ಪ ಅವರು “ವಿದ್ಯಾರ್ಥಿಗಳು ಉತ್ತಮ ಮಾರ್ಗದರ್ಶನ ಪಡೆಯುವದರ ಮೂಲಕ ಸ್ಮರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು.

ರಕ್ಷಣಾ ಕ್ಷೇತ್ರಗಳಾದ ಏರ್‍ಫೋರ್ಸ್, ನೌಕಸೇನೆ ಮತ್ತು ಭೂಸೇನೆಗಳಲ್ಲಿ ಅಪಾರ ಉದ್ಯೋಗವಕಾಶಗಳಿವೆ. ಪಿಯುಸಿ ಅಥವಾ ಪದವಿ ಮುಗಿಸಿದ ಬಳಿಕ ಲಭ್ಯವಿರುವ ಉದ್ಯೋಗಾವಕಾಶಗಳನ್ನು ಪಡೆಯಲು ಅನುಸರಿಸಬೇಕಾದ ಮಾರ್ಗೋಪಾಯಗಳನ್ನು ವಿವರವಾಗಿ ತಿಳಿಸಿಕೊಟ್ಟರು. ದೇಶ ಸೇವೆ ಮಾಡುವದರಿಂದ ಸಿಗುವ ಗೌರವವು ಆ ಹುದ್ದೆಯಲ್ಲಿ ಪಡೆಯುವ ಸಂಭಾವನೆಗಿಂತ ಮಿಗಿಲು ಎಂದು ಕರೆನೀಡಿದರು. ಜೊತೆಗೆ ವಿದ್ಯಾರ್ಥಿಗಳಲ್ಲಿ ರಕ್ಷಣಾ ಕ್ಷೇತ್ರಗಳ ಹುದ್ದೆಗಳಿಗೆ ಸೇರುವ ಮನೋಭಾವವನ್ನು ಗಟ್ಟಿಗೊಳಿಸಿದರು” ಈ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂವಾದ ನಡೆಸಿ ತಮ್ಮ ಸಂದೇಹಗಳಿಗೆ ಸಮರ್ಪಕ ಉತ್ತರ ಪಡೆದುಕೊಂಡರು.

ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಅತಿಥಿಗಳನ್ನು ಸ್ವಾಗತಿಸಿ ದರೆ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿಯ ಸಂಚಾಲಕರಾದ ತಿರುಮಲಯ್ಯ ಎಸ್.ಆರ್.ಅವರು ವಂದಿಸಿದರು. ಉಪನ್ಯಾಸಕ ಅಕ್ರಂ ಎಂ.ಆರ್. ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕಿ ಪದ್ಮಾ ಹಾಗೂ ಇತರರು ಹಾಜರಿದ್ದರು. ವಸುಂಧರ ಪ್ರಾರ್ಥಿಸಿದರು.