ವೀರಾಜಪೇಟೆ, ಆ.31: ಕೊಡಗು ಜಿಲ್ಲೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಅಪಾರ ಹಾನಿ ಒಳಗಾಗಿ ಜನರು ಸಂಕಷ್ಟದಲ್ಲಿರುವ ಕಾರಣ ಈ ಬಾರಿಯ ಗೌರಿಗಣೇಶ ಉತ್ಸವನ್ನು ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮೂರ್ನಾಡು ರಸ್ತೆ ಕಾವೇರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ದಾಮೋದರ್ ಆಚಾರ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 28 ವರ್ಷಗಳಿಂದ ವಿಶಾಲವಾದ ಪೆಂಡಾಲ್, ಪ್ರತಿದಿನ ವೇದಿಕೆ ಕಾರ್ಯಕ್ರಮ, ಶಾಲಾ ಕಾಲೇಜು ಮಕ್ಕಳಿಗೆ ಹಾಗೂ ಸ್ಥಳೀಯ ಕಲಾವಿದರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಈ ವರ್ಷ ಎಲ್ಲ ಆಡಂಬರ ಹಾಗೂ ಅದ್ದೂರಿಯ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಅಲ್ಲದೆ ಗಣೇಶ ವಿಸರ್ಜನೆ ದಿನದಂದು ಮೂರ್ತಿಯನ್ನು ಯಾವದೇ ಪ್ರಭಾವಳಿಯನ್ನು ಬಳಸದೆ ಕೊಡಗಿನ ಸಾಂಪ್ರದಾಯಿಕ ವಾಲಗದೊಂದಿಗೆ ವಿಸರ್ಜಿಸಲಾಗುವದು ಎಂದು ಹೇಳಿದರು.
ಸಮಿತಿಯ ಗೌರವ ಅಧ್ಯಕ್ಷ ಟಿ.ಪಿ ಕೃಷ್ಣ ಮಾತನಾಡಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಾಂಪ್ರದಾಯಿಕ ಪದ್ಧತಿಯಂತೆ ಪ್ರತಿದಿನ ಪೂಜಾ ಕ್ಯೆಂಕರ್ಯಗಳನ್ನು ನಡೆಸಲಾಗುವದು. ಅದ್ಧೂರಿ ಹಾಗೂ ದುಂದುವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ. ಅನ್ನ ಸಂತರ್ಪಣೆಯನ್ನು ಮೊಟಕುಗೊಳಿಸಲಾಗಿದೆ. ಉತ್ಸವದ ಧನ ಸಹಾಯದ ಲಕ್ಕಿಡಿಪ್ ಪೂರ್ವ ನಿಯೋಜಿತವಾದ ಕಾರಣ ಅದರಿಂದ ಬಂದ ಹಣವನ್ನು ಪಟ್ಟಣದಲ್ಲಿ ಹಾನಿಗೊಳಗಾದ ಸಂತ್ರಸ್ತರಿಗೆ ನೇರವಾಗಿ ವಿತರಿಸಲಾಗುವದು ಎಂದು ಹೇಳಿದರು. ಉಪಾಧ್ಯಕ್ಷ ಬಿ.ಎಂ. ಕಿರಣ್, ಚೇತನ್, ಕಾರ್ಯದರ್ಶಿ ದರ್ಶನ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.