ಮಡಿಕೇರಿ, ಆ. 31: ನೆರೆ ಹಾವಳಿಯಿಂದ ತತ್ತರಿಸಿರುವ ಕೊಡಗು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಬೇಕೆಂದು ಆಗ್ರಹಿಸಿ ಕನ್ನಡ ಒಕ್ಕೂಟದ ವತಿಯಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಯಿತು.ಪ್ರತಿಭಟನೆಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಕೊಡಗಿನ ಜನತೆ ಅತಿವೃಷ್ಟಿಯಿಂದ ತೀವ್ರ ಸಂಕಷ್ಟದಲ್ಲಿದ್ದು, ಪ್ರಧಾನಿ ಮೋದಿಯವರು ಕೊಡಗಿಗೆ ಭೇಟಿ ನೀಡಿ ಇಲ್ಲಿನ ನಿರಾಶ್ರಿತರಿಗೆ ಸಾಂತ್ವನ ಹೇಳಬೇಕಿತ್ತು. ಆದರೆ ಕೇವಲ ಕೇರಳಕ್ಕೆ ಒಲವು ತೋರುತ್ತಿರುವ ಪ್ರಧಾನಿಯವರ ನಡೆ ವಿಷಾದನೀಯ. ಕೊಡಗು ಜಿಲ್ಲೆ ಕೂಡ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದು, ಈ ನಿಟ್ಟಿನಲ್ಲಿ ಕೊಡಗಿನ ಸಂಕಷ್ಟಕ್ಕೆ ಮೋದಿಯವರು ಇಲ್ಲಿಗೆ ಭೇಟಿ ನೀಡುವದರೊಂದಿಗೆ 20 ಸಾವಿರ ಕೋಟಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ನೆರೆ ಹಾವಳಿ ಸಂತ್ರಸ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನಿಸುತ್ತಿರುವದು (ಮೊದಲ ಪುಟದಿಂದ) ಶ್ಲಾಘನೀಯವಾದರೂ, ಈ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಬೇಕೆಂದು ವಾಟಾಳ್ ನಾಗರಾಜ್ ಅಭಿಪ್ರಾಯಪಟ್ಟರು.ಈ ಸಂದರ್ಭ ಕನ್ನಡ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಕನ್ನಡ ಸೇನೆ ಅಧ್ಯಕ್ಷ ಕುಮಾರ್ ಮತ್ತು ಸದಸ್ಯರು ಹಾಜರಿದ್ದರು. ಕನ್ನಡ ಒಕ್ಕೂಟದ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.